ಟೀಕೆಗಳನ್ನು ಪ್ರಾಮಾಣಿಕವಾಗಿ ಸ್ವಾಗತಿಸುತ್ತೇನೆ ಆದರೆ...ಮೋದಿ
ನವದೆಹಲಿ, ಅಕ್ಟೋಬರ್ 02: ನಾನು ಟೀಕೆಗಳನ್ನು ಪ್ರಾಮಾಣಿಕರವಾಗಿ ಸ್ವಾಗತಿಸುತ್ತೇನೆ ಆದರೆ ದುರದೃಷ್ಟವಶಾತ್ ಈಗಿನ ಸಾಕಷ್ಟು ಟೀಕೆ ಮತ್ತು ವಿಮರ್ಶೆಗಳು ತುಂಬಾ ಕೀಳುಮಟ್ಟದಲ್ಲಿರುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸರ್ಕಾರ ಹಾಗೂ ಯೋಜನೆಗಳ ಮೇಲಿನ ಮಾಧ್ಯಮ ಮತ್ತು ಇತರರ ಟೀಕೆಗಳ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ,'' ನಾನು ವಿಮರ್ಷೆಗಳನ್ನು ಸ್ವಾಗತಿಸುತ್ತೇನೆ ಆದರೆ, ಸಾಕಷ್ಟು ಟೀಕೆಗಳು ತುಂಬಾ ಕೆಳಮಟ್ಟದಲ್ಲಿರುತ್ತವೆ. ಕೆಲ ಜನರು ಕೇವಲ ಆರೋಪಗಳನ್ನು ಮಾಡುವುದರಲ್ಲಿಯೇ ನಿರತರಾಗಿರುತ್ತಾರೆ''.
''ಜನರು ತಮ್ಮ ಊಹೆಗಳೊಂದಿಗೆ ಆಟವಾಡಿಕೊಂಡು ಆರೋಪಗಳನ್ನು ಮಾಡುತ್ತಾರೆ, ಇದಕ್ಕೆ ಸಾಕಷ್ಟು ಕಾರಣಗಳೂ ಇವೆ. ಒಂದು ಉತ್ತಮವಾದ ವಿಮರ್ಶೆ ಹಾಗೂ ಟೀಕೆಗಳನ್ನು ಮಾಡುವಾಗ ಸಾಕಷ್ಟು ಪರಿಶ್ರಮ, ಸಂಶೋಧನೆಯ ಅಗತ್ಯವಿರುತ್ತದೆ, ಆದರೆ ಇಂದಿನ ವೇಗದ ಜಗತ್ತಿನಲ್ಲಿ ಇಂತಹ ಸಂಶೋಧನೆ ಹಾಗೂ ಪರಿಶ್ರಮಕ್ಕೆ ಸಮಯವಿಲ್ಲದಂತಾಗಿದೆ. ಹೀಗಾಗಿ ನಾನು ವಿಮರ್ಶೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ''.

ಇದನ್ನು ವಿಶೇಷವಾಗಿ ಭಾರತದ ಕೊರೊನಾ ಲಸಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿ ಉಲ್ಲೇಖಿಸಿ ಮಾತನಾಡಿದ್ದಾರೆ. ''ಭಾರತದಲ್ಲಿನ ಕೊರೊನಾ ಲಸಿಕಾ ಕಾರ್ಯಕ್ರಮಗಳ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ, ಆದರೆ ಒಂದೊಮ್ಮೆ ಭಾರತದಲ್ಲಿ ಲಸಿಕೆಯನ್ನು ಸಂಶೋಧಿಸಿ ಉತ್ಪಾದಿಸದಿರದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಊಹಿಸಿಕೊಳ್ಳಿ''.
''ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಲಸಿಕೆಯೇ ಇಲ್ಲದಂತಾಗುತ್ತಿತ್ತು. ಆದರೆ, ಭಾರತದ ವೈಜ್ಞಾನಿಕ ಕ್ಷೇತ್ರದ ಸಾಧನೆ ಪರಿಣಾಮವಾಗಿ ಇಂದು ಶೇ.69 ಕ್ಕೂ ಅಧಿಕ ವಯಸ್ಕರಿಗೆ ಕನಿಷ್ಠ ಒಂದು ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ''.
ಲಸಿಕೆಯ ಸಮಗ್ರ ಶೇಖರಣೆ, ಸಾಗಣೆ ಹಾಗೂ ವಿತರಣೆ ಮಾಡುವುದು ಭಾರತದಲ್ಲಿ ಅಷ್ಟು ಸುಲಭದ ಕೆಲಸವಲ್ಲ, ಇದಕ್ಕಾಗಿ ಸಾಕಷ್ಟು ಮೂಲ ಸೌಕರ್ಯ, ಮಾನವ ಸಂಪನ್ಮೂಲ ಬೇಕಾಗುತ್ತದೆ. ಮಾಧ್ಯಮಗಳು ಇದನ್ನು ಅರ್ಥಮಾಡಿಕೊಂಡರೆ ಒಳಿತು. ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನದ ವ್ಯವಸ್ಥೆಯ ಬಗ್ಗೆ ಮಾಧ್ಯಮದವರು ಅಧ್ಯಯನ ಮಾಡಿದರೆ ಒಳಿತಿತ್ತು ಎಂದು ಮೋದಿ ಹೇಳಿದ್ದಾರೆ.
ಮೇ 2020ರಲ್ಲಿ ಭಾರತವು ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ ಕೆಲಸ ಆರಂಭಿಸಿದಾಗ ವಿಶ್ವದ ಯಾವೊಂದು ದೇಶದಲ್ಲಿ ಲಸಿಕೆಗೆ ಅನುಮೋದನೆ ದೊರೆತಿರಲಿಲ್ಲ. ಹಳೆಯ ವ್ಯವಸ್ಥೆಯಲ್ಲಿ ಲಸಿಕೆ ವಿತರಣೆ ಆರಂಭಿಸಿದ್ದರೆ ಇದು ಮುಗಿಯಲು ದಶಕಗಳೇ ಬೇಕಾಗುತ್ತಿತ್ತು. ಉಚಿತವಾಗಿ ಹಾಗೂ ವೇಗವಾಗಿ ಲಸಿಕೆ ಪೂರೈಕೆ ಮಾಡಲು ವ್ಯವಸ್ಥೆ ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಿಶ್ವದ ಬೇರೆ ದೇಶಗಳಿಗೆ ಭಾರತದ ಲಸಿಕೆ ಅಭಿಯಾನದ ಸಂಖ್ಯೆಯಯನ್ನು ಹೋಲಿಸಿದರೆ ನಾವು ಸಾಕಷ್ಟು ಮುಂದಿದ್ದೇವೆ ಆದರೆ, ಕೆಲವರು ಭಾರತದ ಘನತೆಯನ್ನು ಕೆಡಿಸುವ ನಿಟ್ಟಿನಲ್ಲೇ ಕೆಲಸ ಮಾಡಲು ಇಷ್ಟಪಡುತ್ತಾರೆ. ಇಂತಹ ಋಣಾತ್ಮಕ ಅಭಿಯಾನದ ಹೊರತಾಗಿಯೂ ಲಸಿಕಾ ಅಭಿಯಾನದಲ್ಲಿ ಭಾರತವು ಮುಂದುವರೆದ ದೇಶಕ್ಕಿಂತ ಹೆಚ್ಚು ಮುನ್ನಡೆ ಸಾಧಿಸಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 88.14 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಹೇಳಿದೆ.
ಈವರೆಗೆ ಕೇಂದ್ರವು ರಾಜ್ಯಗಳಿಗೆ 88.14 (88,14,50,515) ಕೋಟಿ ಪ್ರಮಾಣದಷ್ಟು ಲಸಿಕೆ ಪೂರೈಸಿದ್ದು, ಪ್ರಸ್ತುತ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಕೆಯಾಗದ ಒಟ್ಟು 5,28,28,050 ಕೋಟಿ ಡೋಸ್ ಕೋವಿಡ್ ಲಸಿಕೆಗಳಿವೆ ಎಂದು ಹೇಳಿದೆ.
ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೊರೊನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್‌ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು.
ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗಿತ್ತು. ಮೇ.1ರಿಂದ 18-45 ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ.
ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 89,74,81,554 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ












Click it and Unblock the Notifications