ಭೂಕಂಪವೂ ಆಗಲಿಲ್ಲ, ವಿಮಾನವೂ ಹಾರಲಿಲ್ಲ ಎಂದು ಕಾಂಗ್ರೆಸ್ ನ ಛೇಡಿಸಿದ ಮೋದಿ
ನವದೆಹಲಿ, ಫೆಬ್ರವರಿ 13: ಐದು ವರ್ಷದಲ್ಲಿ ಬಿಜೆಪಿ ನೇತೃತ್ವದ ಸರಕಾರ ಮಾಡಿದ ಸಾಧನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರದಂದು ಸಂಸತ್ ನಲ್ಲಿ ಮಾತನಾಡಿದರು. ಅದಕ್ಕೂ ಮುನ್ನ ಸಮಾಜವಾದಿ ಪಕ್ಷದ ಮಾಜಿ ಮುಖ್ಯಸ್ಥ ಮುಲಾಯಂ ಸಿಂಗ್ ಅವರು ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲಿ ಎಂದು ಹಾರೈಸಿದ್ದು ಹಲವರ ಹುಬ್ಬೇರಿಸುವಂತೆ ಮಾಡಿತು.
ಇನ್ನು ನರೇಂದ್ರ ಮೋದಿ ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ.
* ನಾನು ಮೊದಲ ಬಾರಿಗೆ ಇಲ್ಲಿಗೆ ಬಂದೆ. ಬಹಳ ವಿಷಯಗಳು ಕಲಿಯಲು ಸಿಕ್ಕಿತು. ಮೊದಲ ಸಲ ಗೊತ್ತಾಯಿತು; ಪ್ರೀತಿಯಿಂದ ತಬ್ಬಿಕೊಳ್ಳುವುದು ಹಾಗೂ ಬಲವಂತದಿಂದ ಆಲಂಗಿಸುವುದರ ವ್ಯತ್ಯಾಸ ಗೊತ್ತಾಯಿತು. ಮೊದಲ ಸಲ ಸದನದಲ್ಲಿ ಕಣ್ಣು ಹೊಡೆಯುವುದರಿಂದ ಏನಾಗುತ್ತದೆ ಎಂದು ನೋಡಿದೆ.

* ಭೂಕಂಪ ಆಗುತ್ತದೆ ಅನ್ನೋ ಮಾತು ಕೇಳಿದ್ದಿವಿ. ಆದರೆ ಯಾವ ಭೂಕಂಪವೂ ಆಗಲಿಲ್ಲ. ವಿಮಾನ ಹಾರಿ ಬಿಡಲಾಯಿತು. ಆದರೆ ಪ್ರಜಾತಂತ್ರದ ಗೌರವ ಎಷ್ಟಿದೆ ಅಂದರೆ, ಆ ವಿಮಾನ ಅಷ್ಟು ಎತ್ತರಕ್ಕೆ ತಲುಪಲು ಆಗಲೇ ಇಲ್ಲ.
* 1400ಕ್ಕೂ ಹೆಚ್ಚು ಅಪ್ರಯೋಜಕ ಕಾನೂನು ತೆಗೆದುಹಾಕಿದ್ದೇವೆ. ಇದೊಂದು ರಿರಿ ಕಾನೂನಿನ ಕಾಡಿನಂತಾಗಿತ್ತು. ಇದೀಗ ಶುಭಾರಂಭ ಆಗಿದೆ. ಇನ್ನೂ ಬಹಳ ಬಾಕಿ ಉಳಿದಿದೆ. ಮತ್ತು ಅದಕ್ಕಾಗಿ ಮುಲಾಯಂ ಜೀ ಆಶೀರ್ವಾದ ಮಾಡಿದ್ದಾರೆ.
* ಈ ಅವಧಿಯ ಲೋಕಸಭೆಯಲ್ಲಿ ಕಪ್ಪು ಹಣ ಹಾಗೂ ಭ್ರಷ್ಟಾಚಾರ ಆತಂಕದ ವಿರುದ್ಧ ಹೋರಾಡುವ ಕಾನೂನು ತರಲಾಗಿದೆ. ಜಿಎಸ್ ಟಿ ಜಾರಿಯಾಗಿದೆ. ಈ ಪ್ರಕ್ರಿಯೆಯು ಸಹಕಾರದ ಹಾಗೂ ಭಾಗೀದಾರಿಕೆ ಸ್ಫೂರ್ತಿ ಒಳಗೊಂಡಿದೆ.
* ಇಂದು ಜಗತ್ತಿನಾದ್ಯಂತ ಜಾಗತಿಕ ತಾಪಮಾನ ಏರಿಕೆ ಬಗ್ಗೆ ಚರ್ಚೆ ಆಗುತ್ತಿದೆ. ಈ ಸಮಸ್ಯೆಯಿಂದ ಹೊರಬರಲು ಭಾರತವು ಅಂತರರಾಷ್ಟ್ರೀಯ ಸೌರಶಕ್ತಿ ಮೈತ್ರಿ ನಿರ್ಮಾಣಕ್ಕೆ ಮುಂದಾಗಿದೆ.
* ಈ ಬಾರಿ ಲೋಕಸಭೆ ಬಗ್ಗೆ ನಾವು ಹೆಮ್ಮೆ ಪಡಬೇಕಿದೆ. ಏಕೆಂದರೆ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಯ್ಕೆಯಾಗಿದ್ದಾರೆ. ನಲವತ್ನಾಲ್ಕು ಸಂಸದೆಯರು ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
* ದೇಶದ ಆತ್ಮವಿಶ್ವಾಸ ಸಾರ್ವಕಾಲಿಕ ಉತ್ತುಂಗದಲ್ಲಿದೆ. ಇಂಥ ವಿಶ್ವಾಸವು ಅಭಿವೃದ್ಧಿಗೆ ಇಂಬು ನೀಡುವ ಶುಭ ಸೂಚಕ.
* ಮೂರು ದಶಕಗಳ ನಂತರ ನಾವು ಬಹುಮತದ ಸರಕಾರ ಮಾಡಿದೆವು. ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಗೋತ್ರವಲ್ಲದ ಇಂಥದ್ದೊಂದು ಬಹುಮತದ ಸರಕಾರ ಮೊದಲ ಬಾರಿಗೆ ಬಂದಿದೆ. ಕಾಗ್ರೆಸ್ ಗೋತ್ರವಲ್ಲದ ಮೈತ್ರಿ ಸರಕಾರ ಅಟಲ್ ಜೀವ ಅವರದಾಗಿತ್ತು. ಆನಂತರ ಕಳೆದ ಬಾರಿ ಪೂರ್ಣ ಬಹುಮತದೊಂದಿಗೆ ಸರಕಾರ ಅಸ್ತಿತ್ವಕ್ಕೆ ಬಂತು.












Click it and Unblock the Notifications