Breaking: ಶತಮಾನದ ಅತಿ ಹೆಚ್ಚಿನ ತಾಪಮಾನ ಕಂಡ ದೇಶ
ನವದೆಹಲಿ, ಆ.03: ದೇಶದಲ್ಲಿ ಈ ಬಾರಿಯ ಮಾನ್ಸೂನ್ ಋತುವಿನಲ್ಲಿ ಉಂಟಾದ ತಾಪಮಾನವು ಈ ಶತಮಾನದಲ್ಲಿ ಅತ್ಯಂತ ಹೆಚ್ಚು ಎಂದು ಕೇಂದ್ರ ಸರಕಾರ ಬುಧವಾರ ತಿಳಿಸಿದೆ.
ಇನ್ನು ಮುಂದಿನ ದಿನಗಳಲ್ಲಿ ದೇಶದಲ್ಲಿ ಇದು ಮತ್ತಷ್ಟು ಹೆಚ್ಚಾಗಬಹುದು ಎಂದಿರುವ ಕೇಂದ್ರ ಸರಕಾರ ಇತ್ತೀಚಿನ ವರ್ಷಗಳಲ್ಲಿ ಶಾಖ-ಸಂಬಂಧಿತ ಸಾವುಗಳು ಕುಸಿದಿವೆ ಎಂದು ಮಾಹಿತಿ ನೀಡಿದೆ.
ದೇಶದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ಅತ್ಯಂತ ತಾಪಮಾನವನ್ನು ಅನುಭವಿಸಿತು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಪಮಾನವು ಅಸಾಧಾರಣವಾಗಿ ಹೆಚ್ಚಾಗಿತ್ತು. ಇದಕ್ಕೆ ಮುಖ್ಯವಾಗಿ ಹವಾಮಾನ ಬದಲಾವಣೆ ಕಾರಣ ಎಂದು ದೂಷಿಸಲಾಗಿದೆ. ಮುಖ್ಯವಾಗಿ ಏಪ್ರಿಲ್ ಮತ್ತು ಜೂನ್ ನಡುವೆ ಶಾಖ ಹೆಚ್ಚಾಗುವುದು ಸಾಮಾನ್ಯ ಎಂದು ಸರಕಾರ ಹೇಳುತ್ತದೆ.

"ಕಳೆದ ಎರಡು ದಶಕಗಳಲ್ಲಿ ಮುಂಗಾರು ಋತುವಿನ ಸರಾಸರಿ ತಾಪಮಾನವು ಏರುತ್ತಿದೆ. ಉಷ್ಣವಲಯದ ಹಿಂದೂ ಮಹಾಸಾಗರ ಬಿಸಿಯಾಗುವಿಕೆಯಿಂದಾಗಿ ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಹೆಚ್ಚಾಗಬಹುದು" ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವ ಜಿತೇಂದ್ರ ಸಿಂಗ್ ಸಂಸತ್ತಿಗೆ ತಿಳಿಸಿದರು.
ಜೂನ್-ಸೆಪ್ಟೆಂಬರ್ ಮಾನ್ಸೂನ್ ಅವಧಿಯಲ್ಲಿ ಭಾರತದ ಸರಾಸರಿ ತಾಪಮಾನವು 2001 ರಲ್ಲಿ 28 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿದ್ದರೆ, ಕಳೆದ ವರ್ಷ ಸುಮಾರು 28.4 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದರು.

ಆದರೆ, ಇತ್ತೀಚಿನ ವರ್ಷಗಳಲ್ಲಿ ಹೀಟ್‌ವೇವ್ ಸಾವುಗಳು ಕಡಿಮೆಯಾಗಿವೆ ಎಂದು ಮಾಹಿತಿ ನೀಡಿದರು.
ಈ ವರ್ಷ ಜುಲೈವರೆಗೆ ದೇಶದಲ್ಲಿ 24 ಸಾವುಗಳಾಗಿವೆ, ಕಳೆದ ವರ್ಷ ಯಾವುದೇ ಸಾವು ವರದಿಯಾಗಿಲ್ಲ. 2020 ರಲ್ಲಿ 25 ಸಾವುಗಳು ವದಿಯಾಗಿದ್ದವು. ಆದರೆ, 2019 ರಲ್ಲಿ 505 ಸಾವುಗಳು ವರದಿಯಾಗಿದ್ದವು.
ಶಾಖ ಸಂಬಂಧಿತ ಸಾವುಗಳನ್ನು ಕಡಿಮೆ ಮಾಡುವ ಪ್ರಯತ್ನದ ಹಿನ್ನೆಲೆಯಲ್ಲಿ ಹೆಚ್ಚಿನ ರಾಜ್ಯಗಳು ಈಗ ಕಚೇರಿ, ಶಾಲಾ ಸಮಯ ಮತ್ತು ಕಾರ್ಮಿಕರ ಕೆಲಸದ ಸಮಯವನ್ನು ಬದಲಾಯಿಸಲು ಸಿದ್ಧವಾಗಿದ್ದವು ಎಂದು ವರದಿಯಾಗಿದೆ.
1998-2017 ರಿಂದ ಜಾಗತಿಕವಾಗಿ ಹೀಟ್‌ವೇವ್ ಇಂದಾಗಿ 1,66,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳುತ್ತದೆ. 2030 ಮತ್ತು 2050 ರ ನಡುವೆ, ಹವಾಮಾನ ಬದಲಾವಣೆಯು ಅಪೌಷ್ಟಿಕತೆ, ಮಲೇರಿಯಾ, ಅತಿಸಾರ ಮತ್ತು ಶಾಖದ ಒತ್ತಡದಿಂದ ವರ್ಷಕ್ಕೆ ಸುಮಾರು 2,50,000 ಸಾವುಗಳ ವರದಿಯಾಗುವ ನಿರೀಕ್ಷೆಯಿದೆ ಎಂದು ಅಂದಾಜಿಸಿದೆ.












Click it and Unblock the Notifications