ದೆಹಲಿಯಲ್ಲಿ ಇನ್ನಷ್ಟು ಹೆಚ್ಚಲಿದೆ ಸೋಂಕು; ಐಸಿಎಂಆರ್ ಕೊಟ್ಟ ಕಾರಣ ಇಷ್ಟು...
ನವದೆಹಲಿ, ನವೆಂಬರ್ 10: ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಆದರೆ ರಾಜಧಾನಿ ದೆಹಲಿಯಲ್ಲಿ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುವ ಎಚ್ಚರಿಕೆಯನ್ನು ಐಸಿಎಂಆರ್ ನೀಡಿದೆ.
ಕೊರೊನಾ ಸೋಂಕು ಹೆಚ್ಚಳವಾಗಲು ಕಾರಣವಾಗಬಲ್ಲ ಕೆಲವು ಅಂಶಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನೀಡಿದೆ. ಐಸಿಎಂಆರ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಬಲರಾಂ ಭಾರ್ಗವ ದೆಹಲಿಯಲ್ಲಿ ಕೊರೊನಾ ಸೋಂಕಿನ ಪ್ರಕರಣವನ್ನು ಮತ್ತಷ್ಟು ಏರಿಸಬಲ್ಲ ಅಂಶಗಳ ಕುರಿತು ಮಾಹಿತಿ ನೀಡಿದ್ದಾರೆ.
ಅದರಲ್ಲಿ ಮೊದಲನೆಯದ್ದು ವಾಯುಮಾಲಿನ್ಯ. ದೆಹಲಿಯಲ್ಲಿ ಈಚೆಗೆ ವಾಯುಗುಣಮಟ್ಟ ತೀವ್ರವಾಗಿ ಹದಗೆಟ್ಟಿದ್ದು, ಜನರಲ್ಲಿ ಶ್ವಾಸಕೋಶದ ಸೋಂಕಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದು ಕೊರೊನಾ ಸೋಂಕು ಹೆಚ್ಚಳಕ್ಕೆ ಪುಷ್ಟಿ ನೀಡುತ್ತದೆ ಎಂದಿದ್ದಾರೆ. ಜೊತೆಗೆ ಸಾಲು ಸಾಲು ಹಬ್ಬಗಳೂ ಬರುತ್ತಿದ್ದು, ಜನರು ಯಾವುದೇ ನಿಯಮವನ್ನು ಪಾಲಿಸುತ್ತಿಲ್ಲ. ಮದುವೆ, ಸಮಾರಂಭಗಳಲ್ಲಿ ಹೆಚ್ಚೆಚ್ಚು ಜನ ಸೇರುತ್ತಿರುವುದು ಕೂಡ ಕಂಡುಬರುತ್ತಿದೆ. ಇವೆಲ್ಲವೂ ಕೊರೊನಾ ಸೋಂಕು ಹೆಚ್ಚಳವಾಗುವ ಎಲ್ಲಾ ಸಾಧ್ಯತೆಯನ್ನೂ ತೆರೆದಿಟ್ಟಿದೆ.

ಲಾಕ್ ಡೌನ್ ನಂತರ ಮಾರುಕಟ್ಟೆ ತೆರೆಯಲು ಅವಕಾಶ ನೀಡಿದ್ದು, ಅಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಸಾಧ್ಯವೇ ಆಗುತ್ತಿಲ್ಲ. ಸಂಚಾರದಲ್ಲೂ ಯಾವುದೇ ಕೋವಿಡ್ 19 ನಿಯಮ ಪಾಲನೆಯೂ ಮರೆಯಾಗಿದೆ. ಈ ಎಲ್ಲಾ ಅಂಶಗಳೂ ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗಲಿವೆ ಎಂದು ಎಚ್ಚರಿಸಿದ್ದಾರೆ.












Click it and Unblock the Notifications