ಅಕ್ರಮ ಹಣ ವರ್ಗಾವಣೆ ಪ್ರಕರಣ: ಆರು ಗಂಟೆ ಡಿಕೆ ಶಿವಕುಮಾರ್ ವಿಚಾರಣೆ ನಡೆಸಿದ ಇಡಿ
ನವದೆಹಲಿ, ಸೆ.20: ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧದ ಎರಡನೇ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೋಮವಾರ ಸುಮಾರು ಆರು ಗಂಟೆಗಳ ಕಾಲ ಅವರ ಹೇಳಿಕೆ ದಾಖಲಿಸಿಕೊಂಡಿದೆ.
ಕಾಂಗ್ರೆಸ್ ಪ್ರಚಾರದ ಪತ್ರಿಕೆ ನ್ಯಾಷನಲ್ ಹೆರಾಲ್ಡ್‌ನ ಮಾಲೀಕ ಕಂಪನಿಯಾದ ಯಂಗ್ ಇಂಡಿಯನ್‌ಗೆ ಡಿ.ಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿಕೆ ಸುರೇಶ್ ಮಾಡಿದ ಪಾವತಿಗಳ ಬಗ್ಗೆ ಸಂಸ್ಥೆ ತನ್ನನ್ನು ಪ್ರಶ್ನಿಸಿದೆ ಎಂದು 60 ವರ್ಷ ವಯಸ್ಸಿನ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ, ಇತರ ಕೆಲವು ಕಾಂಗ್ರೆಸ್ ನಾಯಕರನ್ನು ಕಳೆದ ಕೆಲವು ತಿಂಗಳುಗಳಿಂದ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ.
ಡಿಕೆ ಶಿವಕುಮಾರ್ ಮಧ್ಯ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಫೆಡರಲ್ ಏಜೆನ್ಸಿಯ ಕಚೇರಿಗೆ ಸೋಮವಾರ ಮಧ್ಯಾಹ್ನ ತಲುಪಿದ್ದರು. ಸುಮಾರು ನಾಲ್ಕು ಜನರ ಗುಂಪಿನೊಂದಿಗೆ ಇಡಿ ಕಚೇರಿಗೆ ಬಂದಿದ್ದ ಡಿಕೆಶಿ, ಊಟದ ವಿರಾಮದ ಸಮಯದಲ್ಲಿ ಊಟಕ್ಕೆ ಹೊರಟು ಮತ್ತೆ ವಿಚಾರಣೆಗೆ ಹಾಜರಾಗಿದ್ದರು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಚಾರ್ಜ್ ಶೀಟ್
ಸುಮಾರು ಆರು ಗಂಟೆಗಳ ವಿಚಾರಣೆಯ ನಂತರ ಡಿಕೆ ಶಿವಕುಮಾರ್ ಅಲ್ಲಿಂದ ತೆರಳಿದರು. ಇಡಿ ಕಚೇರಿಯಿಂದ ನಿರ್ಗಮಿಸುವಾಗ, 'ಮನಿ ಲಾಂಡರಿಂಗ್ ಪ್ರಕರಣವೊಂದರಲ್ಲಿ ತನ್ನ ಮೇಲೆ ಏಜೆನ್ಸಿ ಚಾರ್ಜ್ ಶೀಟ್ ಹಾಕಿದೆ. ಆದರೆ, ಮೊದಲು ಸಿಬಿಐ ತನಿಖೆ ನಡೆಸಿದ್ದ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿರುವ ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಏನು ಎಂದು ನನಗೆ ತಿಳಿದಿಲ್ಲ' ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು,
"ಆಶ್ಚರ್ಯಕರವಾಗಿ, ಇಡಿ ಅಧಿಕಾರಿಗಳು ಯಂಗ್ ಇಂಡಿಯನ್‌ಗೆ ನನ್ನ ಒಂದು ಟ್ರಸ್ಟ್, ನಾನು ಮತ್ತು ನನ್ನ ಸಹೋದರ ಮಾಡಿದ ಪಾವತಿಯ ಬಗ್ಗೆ ಕೇಳಿದ್ದಾರೆ" ಎಂದು ಡಿಕೆ ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

'ಕಾನೂನು ವ್ಯವಸ್ಥೆಯಲ್ಲಿ ನಂಬಿಕೆಯಿದೆ, ನನಗೆ ನ್ಯಾಯ ಸಿಗುತ್ತೆ'
ಅವರು ತಮ್ಮ ಆಸ್ತಿ ಮತ್ತು ಹೊಣೆಗಾರಿಕೆಗಳ ಬಗ್ಗೆ ವಿವರಗಳನ್ನು ನೀಡಲು ಏಜೆನ್ಸಿಯಿಂದ ಹೆಚ್ಚಿನ ಸಮಯವನ್ನು ಕೋರಿರುವುದಾಗಿ ತಿಳಿಸಿದ್ದಾರೆ. ಮಾಜಿ ಸಚಿವ ಡಿಕೆಶಿ "ಕಾನೂನು ವ್ಯವಸ್ಥೆ" ಯಲ್ಲಿ ನಂಬಿಕೆ ಇಟ್ಟಿದ್ದು, ತನಗೆ ನ್ಯಾಯ ಸಿಗುತ್ತದೆ ಎಂದು ತಿಳಿದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ನನಗೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ಒಂದಲ್ಲಾ ಒಂದು ದಿನ ನಾನು ನಿರಪರಾಧಿ ಎಂದು ಸಾಬೀತಾಗುತ್ತದೆ. ರಾಜಕೀಯ ಸೇಡು, ಕಿರುಕುಳಕ್ಕೆ ಹೆದರುವವನು ನಾನಲ್ಲ. ಕರ್ನಾಟಕದ ಜನರ ಪರವಾಗಿ ಮಾತನಾಡಿದ್ದಕ್ಕೆ, ನಿರುದ್ಯೋಗ, ಬೆಲೆ ಏರಿಕೆಯಂತಹ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ಈ ಬೆಲೆ ತೆರಬೇಕಾಗಿದೆ " ಎಂದು ಟ್ವೀಟ್ ಮಾಡಿದ್ದಾರೆ.

74.93 ಕೋಟಿ ರೂ. ಅಕ್ರಮ ಆಸ್ತಿ; ಸಿಬಿಐ ಪ್ರಕರಣ
2020 ರ ಸಿಬಿಐ ಪ್ರಕರಣದಲ್ಲಿ ಅಕ್ರಮ ಆಸ್ತಿ ಹೊಂದಿರುವ ಆರೋಪದ ಬಗ್ಗೆ ಗಮನಹರಿಸಿದ ನಂತರ ಎರಡನೇ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕಳೆದ ವಾರ ಡಿಕೆ ಶಿವಕುಮಾರ್ ಅವರಿಗೆ ಸಮನ್ಸ್ ನೀಡಿತ್ತು.
ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ 74.93 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಸಿಬಿಐ ಮೊಕದ್ದಮೆ ದಾಖಲಿಸಿದೆ.

ಭಾರತ ಐಕ್ಯತಾ ಯಾತ್ರೆ ಮಧ್ಯೆ ಡಿಕೆಶಿಗೆ ಸಮನ್ಸ್
ಕಳೆದ ವಾರ ಇಡಿ ಸಮನ್ಸ್ ಸ್ವೀಕರಿಸಿದ ನಂತರ ಕಾಂಗ್ರೆಸ್ ನಾಯಕ, ಏಜೆನ್ಸಿಯ ಮುಂದೆ ವಿಚಾರಣೆಗೆ ಹಾಜರಾಗಲು ಕೇಳಲಾದ ಪ್ರಕರಣದ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದ್ದರು.
"ಭಾರತ ಜೋಡೋ ಯಾತ್ರೆ ಹಾಗೂ ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಮಧ್ಯೆಯೇ ಮತ್ತೊಮ್ಮೆ ಇಡಿ ನನಗೆ ಸಮನ್ಸ್ ನೀಡಿದೆ. ನಾನು ತನಿಖೆಗೆ ಸಹಕರಿಸಲು ಸಿದ್ಧ. ಆದರೆ, ಈ ಸಮನ್ಸ್ ನೀಡಿರುವ ಸಮಯ, ಹಾಗೂ ಮೇಲಿಂದ ಮೇಲೆ ನೀಡುತ್ತಿರುವ ಕಿರುಕುಳದಿಂದಾಗಿ ನನ್ನ ಸಾಂವಿಧಾನಿಕ ಮತ್ತು ರಾಜಕೀಯ ಕರ್ತವ್ಯಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿದೆ" ಎಂದು ಶಿವಕುಮಾರ್ ಸೆಪ್ಟೆಂಬರ್ 15 ರಂದು ಟ್ವೀಟ್ ಮಾಡಿದ್ದಾರೆ.
ಸೆಪ್ಟೆಂಬರ್ 3, 2019 ರಂದು, ಇಡಿ ಮತ್ತೊಂದು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಶಿವಕುಮಾರ್ ಅವರನ್ನು ಬಂಧಿಸಿತ್ತು. ಆ ವರ್ಷದ ಅಕ್ಟೋಬರ್‌ನಲ್ಲಿ ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು.
ಶಿವಕುಮಾರ್ ಮತ್ತು ಅವರ ಸಹಚರರು ಇತರ ಮೂವರು ಆರೋಪಿಗಳ ಸಹಾಯದಿಂದ 'ಹವಾಲಾ' ಮೂಲಕ ನಿಯಮಿತವಾಗಿ ಅಪಾರ ಪ್ರಮಾಣದ ಲೆಕ್ಕಪತ್ರವಿಲ್ಲದ ಹಣವನ್ನು ಸಾಗಿಸುತ್ತಿದ್ದಾರೆ ಎಂದು ಐಟಿ ಇಲಾಖೆ ಆರೋಪಿಸಿದೆ.
2017 ರ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಕರ್ನಾಟಕದ ರೆಸಾರ್ಟ್‌ನಲ್ಲಿ ಸುರಕ್ಷಿತವಾಗಿರಿಸುವಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು.












Click it and Unblock the Notifications