ಡಿಕೆ ಶಿವಕುಮಾರ್ ಬೆಂಬಿಡದ ಇ.ಡಿ: ಸುಪ್ರೀಂಕೋರ್ಟ್‌ಗೆ ಮೇಲ್ಮನವಿ
ನವದೆಹಲಿ, ಅಕ್ಟೋಬರ್ 23: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 50 ದಿನ ಜೈಲು ಶಿಕ್ಷೆ ಅನುಭವಿಸಿ ಕೊನೆಗೂ ಜಾಮೀನು ಪಡೆಯುವಲ್ಲಿ ಸಫಲರಾದರೂ ಮಾಜಿ ಸಚಿವ ಡಿಕೆ ಶಿವಕುಮಾರ್ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯವಾಗಿಲ್ಲ. ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (ಇಡಿ) ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಬುಧವಾರವೇ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯ, ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಮಂಜೂರು ಮಾಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿದೆ. ಸುಪ್ರೀಂಕೋರ್ಟ್ ಈ ಅರ್ಜಿಯನ್ನು ಗುರುವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.
ಒಂದು ವೇಳೆ ದೆಹಲಿ ಹೈಕೋರ್ಟ್ ನೀಡಿರುವ ಷರತ್ತುಬದ್ಧ ಜಾಮೀನಿಗೆ ಸುಪ್ರೀಂಕೋರ್ಟ್ ತಡೆ ನೀಡಿದರೆ ಡಿಕೆ ಶಿವಕುಮಾರ್ ಮತ್ತೆ ಸಂಕಷ್ಟದಲ್ಲಿ ಸಿಲುಕಿಕೊಳ್ಳಲಿದ್ದಾರೆ.

ಸೆ. 3ರಿಂದ ತಿಹಾರ್ ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಆರೋಗ್ಯದ ಸಮಸ್ಯೆ ಇರುವುದರಿಂದ ಜಾಮೀನು ನೀಡಬೇಕೆಂಬ ಅವರ ಪರ ವಕೀಲರ ವಾದವನ್ನು ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕೈಟ್ ಅವರ ಏಕಸದಸ್ಯ ಪೀಠ ಪರಿಗಣಿಸಿತ್ತು. ಅಲ್ಲದೆ, ಡಿಕೆ ಶಿವಕುಮಾರ್ ದೇಶಬಿಟ್ಟು ಪರಾರಿಯಾಗುವುದಿಲ್ಲ. ಅವರ ಪಾಸ್‌ಪೋರ್ಟ್‌ಅನ್ನು ನ್ಯಾಯಾಲಯದ ವಶಕ್ಕೆ ನೀಡುತ್ತೇವೆ ಎಂದು ವಕೀಲರನ್ನು ಹೇಳಿದ್ದನ್ನು ಕೂಡ ಮಾನ್ಯ ಮಾಡಿತ್ತು. ಡಿಕೆ ಶಿವಕುಮಾರ್ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಸಾಕ್ಷ್ಯ ನಾಶಮಾಡುವ ಅಪಾಯವಿದೆ ಎಂದು ಇ.ಡಿ ಪರ ವಕೀಲರು ವಾದಿಸಿದ್ದರು. ಆದರೆ ಅವರು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುವುದಿಲ್ಲ. ವಿಚಾರಣೆಗೆ ಸಹಕರಿಸಲಿದ್ದಾರೆ ಎಂದು ಡಿಕೆ ಶಿವಕುಮಾರ್ ಪರ ವಕೀಲರು ಭರವಸೆ ನೀಡಿದ್ದಾರೆ.












Click it and Unblock the Notifications