ಚಿಕಿತ್ಸೆ ನೀಡಿದ ವೈದ್ಯರಿಗೇ ಅಂಟಿಕೊಂಡ ಕೊರೊನಾ ವೈರಸ್
ನವದೆಹಲಿ, ಏಪ್ರಿಲ್.16: ಡಾಕ್ಟರ್ಸ್.. ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ವಾರಿಯರ್ಸ್ ಎಂದೇ ಕರೆಸಿಕೊಳ್ಳುತ್ತಿರುವ ವೈದ್ಯರಿಗೆ ಸೋಂಕು ಪತ್ತೆಯಾಗಿರುವ ಸಾಕಷ್ಟು ಉದಾಹರಣೆಗಳು ಕಣ್ಣು ಮುಂದಿವೆ. ಅಂಥದ್ದೇ ಮತ್ತೊಂದು ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ನವದೆಹಲಿ ಮೌಲಾನಾ ಅಜದ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿನ ಅರಿವಳಿಕೆ ತಜ್ಞರಿಗೆ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಎಂದು ತಿಳಿದು ಬಂದಿದ್ದು, ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು, ದೇಶಾದ್ಯಂತ ಹರಡಿರುವ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್ ಗಳು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗೆ ಕೊವಿಡ್19 ಅಂಟಿಕೊಂಡಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.

ನವದೆಹಲಿಯಲ್ಲಿ 1,561 ಕೊರೊನಾ ಸೋಂಕಿತ ಪ್ರಕರಣ:
ಭಾರತದಲ್ಲಿ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ನವದೆಹಲಿ ಎರಡನೇ ಸ್ಥಾನದಲ್ಲಿದ್ದು, ಬುಧವಾರದ ಅಂಕಿ ಅಂಶಗಳ ಪ್ರಕಾರ ನವದೆಹಲಿಯಲ್ಲಿ 30 ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ. ಇನ್ನು, 1,561 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ 31 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.












Click it and Unblock the Notifications