ಕೇಜ್ರಿವಾಲ್ ಸರ್ಕಾರದ ವಿರೋಧ: ಕಡ್ಡಾಯ 5 ದಿನ ಸಾಂಸ್ಥಿಕ ಕ್ವಾರಂಟೈನ್ ಹಿಂಪಡೆದ ದೆಹಲಿ ಲೆಫ್ಟಿನೆಂಟ್ ಗವರ್ನರ್
ದೆಹಲಿ, ಜೂನ್ 20: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -19 ಪ್ರಕರಣಕ್ಕೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಹೊರಡಿಸಿದ್ದ ಕಡ್ಡಾಯ ಐದು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅನ್ನು ಶನಿವಾರ ಸಂಜೆ ಹಿಂತೆಗೆದುಕೊಳ್ಳಲಾಯಿತು. ಅರವಿಂದ್ ಕೆಜ್ರಿವಾಲ್ ಸರ್ಕಾರ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಇದನ್ನು ವಾಪಾಸ್ ಪಡೆಯಲಾಗಿದೆ.
ಇಂದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಬೈಜಾಲ್ ಅವರನ್ನು ಭೇಟಿಯಾಗಿ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ಆ ಬಳಿಕ ಈ ನಿರ್ಧಾರವು ಹೊರಬಿದ್ದಿದೆ.
5 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ, ದೆಹಲಿಗೆ ಮಾತ್ರ ಅನ್ವಯ ಏಕೆ?: ಕೇಜ್ರಿವಾಲ್

ಲೆಫ್ಟಿನೆಂಟ್ ಗವರ್ನರ್ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೇಜ್ರಿವಾಲ್
ಹೌದು, ಹೋಂ ಕ್ವಾರೆಂಟೈನ್ ಕೊನೆಗೊಳಿಸುವ ಲೆಫ್ಟಿನೆಂಟ್ ಗವರ್ನರ್ ನಿರ್ಧಾರಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಶನಿವಾರ ನಡೆದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕೇಜ್ರಿವಾಲ್ ಈ ಬಗ್ಗೆ ಮಾತನಾಡಿದ್ದು LGಯ ನಿರ್ಧಾರದಿಂದಾಗಿ ಕೊರೊನಾವೈರಸ್ ಸೋಂಕು ಹೆಚ್ಚಾಗುವ ಅಪಾಯವಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಪ್ರಸ್ತುತ, ಹೋಂ ಕ್ವಾರಂಟೈನ್ ಅಡಿಯಲ್ಲಿ 10,000 ಕ್ಕೂ ಹೆಚ್ಚು ಜನರಿದ್ದಾರೆ ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ಕೇವಲ 6,000 ಹಾಸಿಗೆಗಳಿವೆ, ನಾವು ಎಲ್ಲ ಜನರಿಗೆ ಎಲ್ಲಿ ಅವಕಾಶ ನೀಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನಸಿದ್ದರು.

ಗವರ್ನರ್ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸಿದ್ದ ಅತೀಶಿ
ಕೋವಿಡ್ -19 ಗೆ ಸ್ವತಃ ಚಿಕಿತ್ಸೆ ಪಡೆಯುತ್ತಿರುವ ಎಎಪಿ ಶಾಸಕಿ ಅತೀಶಿ, ಕೋವಿಡ್ ರೋಗಿಗಳಿಗೆ 5 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸುವ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಿರ್ಧಾರವನ್ನು ಟೀಕಿಸಿದ್ದರು. ಇದು ವೈರಸ್ ಮತ್ತಷ್ಟು ಹರಡಲು ಕಾರಣವಾಗುವುದರಿಂದ ಅನೇಕ ಜನರು ಸಾಂಸ್ಥಿಕತೆಗೆ ಹೆದರುತ್ತಾರೆ ಮತ್ತು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವುದಿಲ್ಲ ಎಂದಿದ್ದರು.
'ದೇಶಾದ್ಯಂತ ಕೊವಿಡ್ ಪರೀಕ್ಷೆ ಬೆಲೆಯಲ್ಲಿ ಏಕರೂಪತೆ ಇರಲಿ'- ಸುಪ್ರೀಂಕೋರ್ಟ್

ಗವರ್ನರ್ ಏನೆಂದು ಆದೇಶ ಹೊರಡಿಸಿದ್ದರು?
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಆದೇಶದ ಪ್ರಕಾರ ದೆಹಲಿಯ ಪ್ರತಿಯೊಬ್ಬ ಕೊರೊನಾವೈರಸ್ ಪಾಸಿಟಿವ್ ವ್ಯಕ್ತಿ ಐದು ದಿನಗಳ ಕಾಲ ಸರ್ಕಾರಿ ಕ್ವಾರಂಟೈನ್ ಕೇಂದ್ರದಲ್ಲಿ ಇರಬೇಕಾಗುತ್ತದೆ. ಕ್ವಾರೆಂಟೈನ್ ಕೇಂದ್ರದಲ್ಲಿ ಉಳಿದುಕೊಂಡ ನಂತರ ಆ ವ್ಯಕ್ತಿಯಲ್ಲಿ ಯಾವುದೇ ರೋಗಲಕ್ಷಣಗಳ ಇಲ್ಲದಿದ್ದರೆ, ನಂತರ ಹೋಂ ಕ್ವಾರೆಂಟೈನ್ ಗೆ ಕಳುಹಿಸಲಾಗುತ್ತದೆ. ಆದರೆ ರೋಗಲಕ್ಷಣಗಳು ಕಂಡುಬಂದರೆ ಅಂತಹವರನ್ನು ಕ್ವಾರೆಂಟೈನ್ ಕೇಂದ್ರ ಅಥವಾ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಆದರೆ ಈ ಆದೇಶವನ್ನು ಕೇಜ್ರಿವಾಲ್ ಸರ್ಕಾರ ತೀವ್ರ ವಿರೋಧಿಸಿದ್ದಲ್ಲದೆ ಈ ಆರೋಗ್ಯಕರ ವ್ಯವಸ್ಥೆಯ ಮೇಲೆ ಹೊರೆ ಹೆಚ್ಚಿಸುತ್ತದೆ ಎಂದು ಹೇಳಿದರು.
|
ಯು ಟರ್ನ್ ಹೊಡೆದ ದೆಹಲಿ ಗವರ್ನರ್
ದೆಹಲಿ ಗವರ್ನರ್ ಅನಿಲ್ ಬೈಜಾಲ್ ಸ್ಥಳೀಯ ಸರ್ಕಾರದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಐದು ದಿನಗಳ ಕಡ್ಡಾಯ ಸಾಂಸ್ಥಿಯ ಕ್ವಾರಂಟೈನ್ ಹಿಂಪಡೆದರು. ಈ ಕುರಿತು ಟ್ವಿಟರ್‌ನಲ್ಲಿ ''ಕ್ಲಿನಿಕಲ್ ಅಸೆಸ್ಮೆಂಟ್‌ನಲ್ಲಿ ಆಸ್ಪತ್ರೆಗೆ ಅಗತ್ಯವಿಲ್ಲದ ಮತ್ತು ಹೋಮ್ ಕ್ವಾರಂಟೈನ್‌ಗೆ ಸಾಕಷ್ಟು ಸೌಲಭ್ಯಗಳನ್ನು ಹೊಂದಿರದ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಮಾತ್ರ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ " ಎಂದು ಅನಿಲ್ ಬೈಜಾಲ್ ಟ್ವೀಟ್ ಮಾಡಿದರು.
ಈ ಮೂಲಕ ಕಡ್ಡಾಯ ಐದು ದಿನ ಸಾಂಸ್ಥಿಕ ಐಸೋಲೇಷನ್ ಒಂದೇ ದಿನದಲ್ಲಿ ಕೊನೆಗೊಂಡಿತು.