ಮುಂದೊಂದು ದಿನ ಓವೈಸಿ ಬಾಯಿಯಿಂದಲೂ ಹನುಮಾನ್ ಚಾಲೀಸ್!
ನವದೆಹಲಿ, ಫೆ 5: ಎರಡು ದಿನಗಳ ಹಿಂದೆ ವಿವಾದಕಾರಿ ಹೇಳಿಕೆಯನ್ನು ನೀಡಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ, ಬಿಜೆಪಿಯ ಸ್ಟಾರ್ ಪ್ರಚಾರಕ ಯೋಗಿ ಆದಿತ್ಯನಾಥ್, ಈಗ, ಮತ್ತೊಂದು ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ದೆಹಲಿಯ ಕಿರಾರಿ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಯೋಗಿ ಆದಿತ್ಯನಾಥ್, "ಕೇಜ್ರಿವಾಲ್ ಸರಕಾರ ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಸಂಪೂರ್ಣ ಹದೆಗೆಡಿಸಿದೆ" ಎಂದು ಆರೋಪಿಸಿದ್ದಾರೆ.
"ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕೇಜ್ರಿವಾಲ್ ಹನುಮಾನ್ ಚಾಲೀಸ್ ಹಾಡಲು ಆರಂಭಿಸಿದ್ದಾರೆ. ನೋಡುತ್ತಿರಿ, ಅಸಾದುದ್ದೀನ್ ಓವೈಸಿ ಬಾಯಿಯಿಂದಲೂ ಮುಂದೊಂದು ದಿನ ಹನುಮಾನ್ ಚಾಲೀಸ್ ಭಜನೆಯಾಗಲಿದೆ" ಎನ್ನುವ ಹೇಳಿಕೆಯನ್ನು ಕೇಜ್ರಿವಾಲ್ ನೀಡಿದ್ದಾರೆ.

"ಕಳೆದ ಐದು ವರ್ಷದಲ್ಲಿ ಕೇಜ್ರಿವಾಲ್ ನೇತೃತ್ವದ ಸರಕಾರದ ಆಡಳಿತ ನೋಡಿ, ದೆಹಲಿಯ ಜನತೆ ಬೇಸತ್ತಿದ್ದಾರೆ. ಇದು ಬದಲಾವಣೆಯ ಸಮಯ" ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. "ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿ ಹೋರಾಟಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೆನ್ನೆಲುಬಾಗಿ ನಿಂತಿದ್ದಾರೆ"ಎಂದು ಯೋಗಿ ಸಭೆಯಲ್ಲಿ ಪುನರುಚ್ಚಿಸಿದ್ದಾರೆ.
#WATCH UP CM Yogi Adityanath at a rally in Kirari, Delhi: Abhi toh Kejriwal ji ne Hanuman Chalisa hi padhni shuru ki hai, aap dekhna aage aage hota kya hai, Owaisi bhi ek din Hanuman Chalisa ka paath padhta dikhai dega. pic.twitter.com/OB5mhhQhD9
— ANI (@ANI) February 4, 2020
"ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ ಬೆಂಬಲ ನೀಡುತ್ತಿದ್ದ ಜನರು ಶಾಹಿನ್ ಬಾಗ್ ನಲ್ಲಿ ಈಗ ಆಜಾದಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಶಿವನ ಭಕ್ತರು ಎಂದಾದರೂ ಅಹಿಂಸೆಯನ್ನು ಬೆಂಬಲಿಸುವುದು ಉಂಟೇ. ಆದರೆ, ಮಾತಿಗೆ ಬಗ್ಗದ ಜನರನ್ನು ಗುಂಡೇಟಿನಿಂದಲೇ ಬಗ್ಗಿಸುವುದು ಅನಿವಾರ್ಯ" ಎನ್ನುವ ವಿವಾದಕಾರಿ ಹೇಳಿಕೆಯನ್ನು ಯೋಗಿ ನೀಡಿದ್ದರು.
ಎರಡು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ನಿರೂಪಕರ ಮನವಿಗೆ ಸ್ಪಂದಿಸಿ ಕೇಜ್ರಿವಾಲ್ ಹನುಮಾನ್ ಚಾಲೀಸ್ ಹಾಡಿದ್ದರು. ಜೊತೆಗೆ, ಇದಕ್ಕಾಗಿ ಪ್ರತ್ಯೇಕ ಕಾರ್ಯಕ್ರಮವನ್ನು ಆಯೋಜಿಸಿ, ನಾನು ಬಂದು ಹನುಮಾನ್ ಚಾಲೀಸ್ ಅರ್ಥವನ್ನು ವಿವರಿಸುತ್ತೇನೆ. ಇದು, ನನ್ನನ್ನು ಹಿಂದೂ ವಿರೋಧಿ ಎಂದವರಿಗೆ ತಲುಪಲಿ" ಎಂದು ಕೇಜ್ರಿವಾಲ್, ಬಿಜೆಪಿಗೆ ಟಾಂಗ್ ನೀಡಿದ್ದರು.












Click it and Unblock the Notifications