ದೆಹಲಿ ಚುನಾವಣೆ ಪ್ರಚಾರಕ್ಕೆ ತೆರೆ; ಶನಿವಾರ ಮತದಾನ
ನವದೆಹಲಿ, ಫೆಬ್ರವರಿ 07 : ದೆಹಲಿ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. 70 ವಿಧಾನಸಭಾ ಕ್ಷೇತ್ರಕ್ಕೆ ಫೆಬ್ರವರಿ 8ರ ಶನಿವಾರ ಮತದಾನ ನಡೆಯಲಿದ್ದು, ಫೆಬ್ರವರಿ 11ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ದೇಶಾದ್ಯಂತ ದೆಹಲಿ ವಿಧಾನಸಭಾ ಕ್ಷೇತ್ರದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ವಿವಿಧ ರಾಜಕೀಯ ಪಕ್ಷಗಳ ಪ್ರಚಾರಗಳೂ ಸಹ ತಾರಕ್ಕೇರಿತ್ತು. ಅದರಲ್ಲೂ ಬಿಜೆಪಿ ಅಧಿಕಾರ ಹಿಡಿಯಬೇಕು ಎಂದು ಪಣತೊಟ್ಟು ಬಿರುಸಿನಿಂದ ಪ್ರಚಾರ ನಡೆಸಿತ್ತು.
ಗುರುವಾರ ಸಂಜೆ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದೆ. ಅಭ್ಯರ್ಥಿಗಳು ಇಂದು ಮನೆ-ಮನೆ ಪ್ರಚಾರ ಕೈಗೊಂಡು ಅಂತಿಮ ಸುತ್ತಿನ ಮತಬೇಟೆಯನ್ನು ನಡೆಸಲಿದ್ದಾರೆ. ಶನಿವಾರ ಮತದಾನ ನಡೆಯಲಿದ್ದು, ಮಂಗಳವಾರ ಫಲಿತಾಂಶ ಪ್ರಕಟವಾಗಲಿದೆ.

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಅಧಿಕಾರದಲ್ಲಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪುನಃ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಬಿಜೆಪಿ ಈ ಬಾರಿ ಅಧಿಕಾರ ಪಡೆಯಲೇಬೇಕು ಎಂದು ಪಣ ತೊಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, 200ಕ್ಕೂ ಅಧಿಕ ಸಂಸದರು ಬಿಜೆಪಿ ಪರವಾಗಿ ದೆಹಲಿಯಲ್ಲಿ ಮತಯಾಚನೆ ಮಾಡಿದ್ದಾರೆ. ಎಎಪಿ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂದು ಕೇಳಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.
ಅರವಿಂದ್ ಕೇಜ್ರಿವಾಲ್ ಐದು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗಿದ್ದಾರೆ. ಮುಂದಿನ ಐದು ವರ್ಷಗಳ ಮಾಡುವ ಕೆಲಸಗಳ ಬಗ್ಗೆ ಜನರಿಗೆ ಹಲವಾರು ಭರವಸೆಗಳನ್ನು ಕೊಟ್ಟು, ಮತ ನೀಡುವಂತೆ ಮನವಿ ಮಾಡಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಸ್ವಲ್ಪ ಹಿಂದೆ ಬಿದ್ದಿತ್ತು. ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಕೆಲವು ದಿನ ಪ್ರಚಾರವನ್ನು ಕೈಗೊಂಡರು. ಬಿಜೆಪಿ ಮತ್ತು ಎಎಪಿ ಪ್ರಚಾರದ ಅಬ್ಬರಕ್ಕೆ ಹೋಲಿಕೆ ಮಾಡಿದರೆ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ.












Click it and Unblock the Notifications