ಕೇಜ್ರಿವಾಲ್ ಜತೆಗೆ ದಿಲ್ಲಿ ಆಪ್ ಶಾಸಕನೂ ಜೈಲುಪಾಲು
ನವದೆಹಲಿ, ಮೇ24: ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅನಗತ್ಯವಾಗಿ ತಿಹಾರ್ ಜೈಲಿನಲ್ಲಿರುವಾಗ ಇತ್ತ ಪಕ್ಷದಲ್ಲಿ ಭಾರಿ ಮಾರ್ಪಾಡುಗಳಾಗುತ್ತಿವೆ.
ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಸೋತ ನಂತರ ಉತ್ತರ ಪ್ರದೇಶದ ಗಾಜಿಯಾಬಾದ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಜನರಲ್ ವಿಕೆ ಸಿಂಗ್ ಅವರ ವಿರುದ್ಧ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದ ಆಮ್ ಆದ್ಮಿ ಪಕ್ಷದ ತಾರಾ ವರ್ಚಸ್ಸಿನ ಶಾಜಿಯಾ ಇಲ್ಮಿ ಅವರು ಇದೀಗತಾನೆ ಆಪ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಅರವಿಂದ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷದ ಅನೇಕ ನಾಯಕರು ಕಾನೂನನ್ನು ಕೈಗೆ ತೆಗೆದುಕೊಂಡು ವಿವಾದಕ್ಕೀಡಾಗುತ್ತಿದ್ದಾರೆ. ಇದೀಗ ಆಪ್ ಶಾಸಕ ಪ್ರಕಾಶ್ ಜರ್ವಾಲ್ ಸಹ ಕಾನೂನನ್ನು ಕೈಗೆ ತೆಗೆದುಕೊಂಡು ಉದ್ಧಟತನ ತೋರಿದ್ದಕ್ಕೆ ದಿಲ್ಲಿ ಪೊಲೀಸರು ಅವರನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
ಈ ಮಧ್ಯೆ, ಆಮ್ ಆದ್ಮಿ ನಾಯಕರ ಉದ್ಧಟತನ ಯಾವ ಪರಿಯಿದೆಯೆಂದರೆ ಪಕ್ಷ ರಾಜಕೀಯದಲ್ಲಿ ಪ್ರಮಾಣಿಕವಾಗಿರುತ್ತದೆಂದು ಮಾರುಹೋಗಿ ಆಪ್ ಪಕ್ಷ ಸೇರಿದ್ದ ಕನ್ನಡಿಗ ಕ್ಯಾ ಗೋಪಿನಾಥ್ ಅವರು ಭ್ರರಮನಿರಸನಗೊಂಡು ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಪ್ ನಾಯಕ ಯೋಗೀಂದರ್ ಯಾದವ್ ಅವರು 'ಗೋಪಿನಾಥ್ ಯಾವಾಗ ತಮ್ಮ ಪಕ್ಷ ಸೇರಿದರೋ ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ' ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
Didnt even know when he entered the party: Yogendra Yadav on Captain Gopinath's resignation pic.twitter.com/f3Rq61LFYA
— ANI (@ANI_news) May 24, 2014 ಶಾಸಕನಾಗಿರುವ ತನ್ನ ಆದೇಶ/ಸೂಚನೆಯನ್ನು ಪಾಲಿಸಲಿಲ್ಲವೆಂದು ಸಿಟ್ಟಿಗೆದ್ದ ಆಪ್ ಶಾಸಕ ಪ್ರಕಾಶ್ ದೆಹಲಿ ಜಲಮಂಡಳಿಯ ಕಿರಿಯ ಇಂಜಿನಿಯರನನ್ನು ಥಳಿಸಿದ್ದರು. ಡಿಯೋಲಿ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಕಾಶ್ ಜರ್ವಾಲ್ ವಿರುದ್ಧ ಐಪಿಸಿ ಸೆಕ್ಷನ್ 186 (ಸರಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದು), ಸೆಕ್ಷನ್ 332 (ಸರಕಾರಿ ಕರ್ತವ್ಯ ನಿರ್ವಹಣೆಗೆ ತಡೆಯೊಡ್ಡುವ ಸಲುವಾಗಿ ದೈಹಿಕ ಹಲ್ಲೆ ನಡೆಸಿರುವುದು), ಸೆಕ್ಷನ್ 353 (ಸರಕಾರಿ ನೌಕರನ ಮೇಲೆ ಹಲ್ಲೆ) ಅನ್ವಯ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಕರುಣಾಕರನ್ ತಿಳಿಸಿದ್ದಾರೆ.

ಗುರುವಾರ ಏನಾಯಿತೆಂದರೆ ದಿಲ್ಲಿಯ ಸಂಗಮ್ ವಿಹಾರ್ ನಲ್ಲಿ ನೀರು ಪೂರೈಕೆಯ ಪೈಪ್ ಲೈನ್‌ನ ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಿದ್ದ ವೇಳೆ ಜಲಮಂಡಳಿಯ ಕಿರಿಯ ಇಂಜಿನಿಯರ್ ಮೇಲೆ ಪ್ರಕಾಶ್ ಜರ್ವಾಲ್ ಹಲ್ಲೆ ನಡೆಸಿದ್ದರು. ಇದಕ್ಕೂ ಮುನ್ನ ಶಾಸಕರ ಆಪ್ತರೋರ್ವರು ಜಲಮಂಡಳಿಗೆ ದೂರವಾಣಿ ಕರೆ ಮಾಡಿ ಸದ್ಯಕ್ಕೆ ಕಾಮಗಾರಿಯನ್ನು ಸ್ಥಗಿತಗೊಳಿಸಿ ಶಾಸಕರಿಂದ ಉದ್ಘಾಟನೆ ನೆರವೇರಿಸಿದ ಬಳಿಕವೇ ಕಾಮಗಾರಿಯನ್ನು ಮುಂದುವರಿಸುವಂತೆ ಸೂಚನೆಯನ್ನು ನೀಡಿದ್ದರು. ಇದರ ಹೊರತಾಗಿಯೂ ಕಿರಿಯ ಇಂಜಿನಿಯರ್ ಅವರು ಕಾಮಗಾರಿಯನ್ನು ಮುಂದುವರಿಸಿದ್ದರಿಂದ ಆಕ್ರೋಶಗೊಂಡ ಶಾಸಕರು ಸ್ಥಳಕ್ಕೆ ಧಾವಿಸಿ ಕಿರಿಯ ಇಂಜಿನಿಯರ್ ಅವರನ್ನು ಥಳಿಸಿದ್ದರು ಎಂದು ದೂರಲಾಗಿದೆ.
ಆದರೆ ಶಾಸಕ ಪ್ರಕಾಶ್ ಜರ್ವಾಲ್ ತಮ್ಮ ಮೇಲಣ ಆರೋಪವನ್ನು ನಿರಾಕರಿಸಿದ್ದು ಜಲಮಂಡಳಿಯ ಅಧಿಕಾರಿಗಳು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ಇದನ್ನು ತಾನು ಪ್ರಶ್ನಿಸಿದ್ದಕ್ಕೆ ಪ್ರತಿಯಾಗಿ ತನ್ನನ್ನು ನಿಂದಿಸಿದ್ದರು ಎಂದು ಪ್ರತ್ಯಾರೋಪಿಸಿದ್ದಾರೆ. ಜಲಮಂಡಳಿಯ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇರಿಸಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು ಎಂದೂ ಅವರು ದೂರಿದ್ದಾರೆ.












Click it and Unblock the Notifications