ಸಂಸತ್ತು ರೌಂಡಪ್: 6 ನೇ ದಿನದ ಮುಂಗಾರು ಅಧಿವೇಶನ: ಸಂಪೂರ್ಣ ಮಾಹಿತಿ ಇಲ್ಲಿದೆ
ನವದೆಹಲಿ, ಜುಲೈ 25: ಸಂಸತ್ ಮುಂಗಾರು ಅಧಿವೇಶನ ಆರಂಭಗೊಂಡ ಆರನೇ ದಿನವೂ ಬೆಲೆ ಏರಿಕೆಯ ಬಿಸಿ ಕಡಿಮೆಯಾಗಿಲ್ಲ. ಮುಂಗಾರು ಅಧಿವೇಶನದ ಆರನೇ ದಿನದ ಕಲಾಪ ಬೆಳಗ್ಗೆ 11ಕ್ಕೆ ಬದಲಾಗಿ ಮಧ್ಯಾಹ್ನ 2 ಗಂಟೆಗೆ ಪುನರಾರಂಭವಾಯಿತು. ಆದರೆ ಜುಲೈ 18 ರಂದು ಅಧಿವೇಶನ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ, ಉಭಯ ಸದನಗಳು ಮಹತ್ವದ ಚರ್ಚೆ ನಡೆಸಲು ವಿಫಲವಾಗಿವೆ. ಯಾಕೆಂದರೆ ಪ್ರತಿಪಕ್ಷಗಳು ಪ್ರತಿಭಟನೆಗೆ ಮುಂದಾಗಿದ್ದು ಅಗತ್ಯ ಆಹಾರ ಸರಕುಗಳ ಮೇಲಿನ ಜಿಎಸ್‌ಟಿ, ಹೆಚ್ಚಿನ ಹಣದುಬ್ಬರ ಮತ್ತು ಬೆಲೆ ಏರಿಕೆ ಕುರಿತು ಚರ್ಚೆಗೆ ಒತ್ತಾಯಿಸಿವೆ.
ಅಗತ್ಯ ಆಹಾರ ಸರಕುಗಳ ಮೇಲಿನ ಜಿಎಸ್‌ಟಿ, ಹೆಚ್ಚಿನ ಹಣದುಬ್ಬರ ಮತ್ತು ಬೆಲೆ ಏರಿಕೆ ಕುರಿತು ಚರ್ಚೆಗೆ ಒತ್ತಾಯಿಸಿ ವಿಪಕ್ಷ ನಾಯಕರು ಅಧಿವೇಶನದ ಬಾವಿಗಿಳಿದು ಪ್ರತಿಭಟಿಸಿದರು. ಅಧಿವೇಶನ ಆರಂಭದ 6 ನೇ ದಿನವೂ ಘೋಷಣೆಗಳಿಂದ ಕಲಾಪಕ್ಕೆ ಅಡ್ಡಿಪಡಿಸಿದ 4 ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ.

ಸಂಪೂರ್ಣ ಮಾಹಿತಿ ಇಲ್ಲಿದೆ
ಸ್ಪೀಕರ್ ಓಂ ಬಿರ್ಲಾ ಅವರ ಎಚ್ಚರಿಕೆಯ ಹೊರತಾಗಿಯೂ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ನಾಲ್ವರು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಸತತ ಅಡೆತಡೆಗಳಿಂದಾಗಿ ಅಧ್ಯಕ್ಷರು ಕಾಂಗ್ರೆಸ್ ಸಂಸದರಾದ ಮಾಣಿಕಂ ಠಾಗೋರ್, ಟಿಎನ್ ಪ್ರತಾಪನ್, ಜೋತಿಮಣಿ ಮತ್ತು ರಮ್ಯಾ ಹರಿದಾಸ್ ಅವರನ್ನು ಲೋಕಸಭೆಯಿಂದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ನಾಲ್ವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ನಿರ್ಣಯವನ್ನು ಮಂಡಿಸಿದರು. ಕಲಾಪಗಳ ಅಧ್ಯಕ್ಷತೆ ವಹಿಸಿದ್ದ ರಾಜೇಂದ್ರ ಅಗರ್ವಾಲ್ ಅವರನ್ನು ಅಮಾನತುಗೊಳಿಸುವುದಾಗಿ ಘೋಷಿಸಿದರು. ಬಳಿಕ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.

ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ
ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿಭಟನೆ ನಡೆಸಲು ಬಯಸಿದರೆ ಸದನದ ಹೊರಗೆ ಭಿತ್ತಿಪತ್ರ ಹಿಡಿದು ವರ್ತಿಸುವಂತೆ ಎಚ್ಚರಿಕೆ ನೀಡಿದರು. "ನೀವು (ವಿರೋಧ) ಚರ್ಚೆ ನಡೆಸಲು ಬಯಸಿದರೆ, ನಾನು ಅದಕ್ಕೆ ಸಿದ್ಧನಿದ್ದೇನೆ, ಸಂಸದರು ಕೇವಲ ಸದನದಲ್ಲಿ ಫಲಕಗಳನ್ನು ತೋರಿಸಲು ಬಯಸಿದರೆ, ಅವರು 3 ಗಂಟೆಯ ನಂತರ ಸದನದ ಹೊರಗೆ ಹಾಗೆ ಮಾಡಬಹುದು" ಎಂದು ಬಿರ್ಲಾ ಹೇಳಿದರು. "ನೀವು ಫಲಕಗಳನ್ನು ತೋರಿಸಲು ಬಯಸಿದರೆ, ಅದನ್ನು ಸದನದ ಹೊರಗೆ ಮಾಡಿ. ನಾನು ಚರ್ಚೆಗೆ ಸಿದ್ಧನಿದ್ದೇನೆ, ಆದರೆ ನನ್ನ ಹೃದಯವಂತಿಕೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ" ಎಂದು ಸ್ಪೀಕರ್ ಹೇಳಿದ್ದಾರೆ.

ಲೋಕಸಭೆ ದಿನದ ಮಟ್ಟಿಗೆ ಮುಂದೂಡಿಕೆ
ಬೆಲೆ ಏರಿಕೆ ಕುರಿತು ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆಯ ನಡುವೆ ಸೋಮವಾರ ಲೋಕಸಭೆ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಮಧ್ಯಾಹ್ನ 3 ಗಂಟೆಯ ನಂತರ ಸದಸ್ಯರು ಪ್ರತಿಭಟನೆ ಮುಂದುವರಿಸಿದರೆ ಸದನದಿಂದ ಹೊರಗೆ ಹೋಗುವಂತೆ ಸ್ಪೀಕರ್ ಓಂ ಬಿರ್ಲಾ ಎಚ್ಚರಿಸಿದ್ದಾರೆ. ಕಾಂಗ್ರೆಸ್, ಟಿಎಂಸಿ ಮತ್ತು ಡಿಎಂಕೆ ಸೇರಿದಂತೆ ಪ್ರತಿಭಟನಾ ನಿರತ ಸದಸ್ಯರಿಗೆ ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ ನೀಡಿದರು. ಘೋಷಣೆಗಳನ್ನು ಕೂಗುವ, ಫಲಕಗಳನ್ನು ಪ್ರದರ್ಶಿಸುವುದನ್ನು ಸದನದ ಹೊರಗೆ ಮಾಡಬೇಕಾಗುತ್ತದೆ. ಪ್ರತಿಪಕ್ಷದ ಸದಸ್ಯರು ಪ್ರತಿಭಟನೆಯನ್ನು ಮುಂದುವರೆಸುತ್ತಿದ್ದಂತೆ, ಗೋಚರವಾಗುವಂತೆ ಕೋಪಗೊಂಡ ಬಿರ್ಲಾ ಅವರು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಚರ್ಚಿಸಲು ಸರ್ಕಾರ ಸಿದ್ಧವಾಗಿದೆ. ಜನರು ಸದನವು ಕಾರ್ಯನಿರ್ವಹಿಸಲು ಬಯಸುತ್ತಾರೆ ಎಂದು ಒತ್ತಿ ಹೇಳಿದರು. ಆದರೆ ಗದ್ದಲ ಮುಂದುವರಿದಿದ್ದರಿಂದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಕಲಾಪ ಮುಂದೂಡಿದ
ರಾಜ್ಯಸಭೆಯು ಸೋಮವಾರ 'ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣಾ ವ್ಯವಸ್ಥೆಗಳು (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ತಿದ್ದುಪಡಿ ಮಸೂದೆ, 2022' ಅನ್ನು ಚರ್ಚಿಸಿ ಅಂಗೀಕರಿಸುವ ಸಾಧ್ಯತೆಯಿದೆ. ಈ ಮಸೂದೆಯನ್ನು ಕಳೆದ ವಾರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಂಡಿಸಿದ್ದರು.
ಬೆಲೆ ಏರಿಕೆ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರು ಪಟ್ಟು ಬಿಡದ ಪ್ರತಿಭಟನೆಯ ನಂತರ ರಾಜ್ಯಸಭೆಯ ಕಲಾಪವನ್ನು ಸೋಮವಾರ ಸಂಜೆ 4 ಗಂಟೆಗೆ ಎರಡನೇ ಬಾರಿಗೆ ಮುಂದೂಡಲಾಯಿತು. ಮಧ್ಯಾಹ್ನ 3 ಗಂಟೆಗೆ ಸದನವು ಮತ್ತೆ ಸಭೆ ಸೇರಿದಾಗ, ಕಲಾಪಗಳ ಅಧ್ಯಕ್ಷತೆ ವಹಿಸಿದ್ದ ಸಂಬಿತ್ ಪಾತ್ರ ಅವರು ಎನ್‌ಸಿಪಿ ನಾಯಕಿ ಫೌಜಿಯಾ ಖಾನ್ ಅವರನ್ನು "ಕೋವಿಡ್ ನಂತರದ ತೊಡಕುಗಳ ಹೆಚ್ಚುತ್ತಿರುವ ಪ್ರಕರಣಗಳ ಪರಿಸ್ಥಿತಿ" ಕುರಿತು ಕಾಲಿಂಗ್ ಅಟೆನ್ಷನ್ ಮೋಷನ್‌ನಲ್ಲಿ ಚರ್ಚೆಯನ್ನು ಪ್ರಾರಂಭಿಸಲು ಆಹ್ವಾನಿಸಿದರು. ಈ ವೇಳೆ ಕಾಂಗ್ರೆಸ್ ಮತ್ತು ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟಿಸುತ್ತಾ ಘೋಷಣೆಗಳನ್ನು ಕೂಗಿದರು. ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದಿದ್ದರಿಂದ ಸಭಾಪತಿಯವರು ಸದನವನ್ನು ಸಂಜೆ 4 ಗಂಟೆಗೆ ಮುಂದೂಡಿದರು.












Click it and Unblock the Notifications