ಸಾವು ಎದುರು ನೋಡುತ್ತಾ ಕರಾಚಿಯಲ್ಲಿ ಕೊನೆ ಕ್ಷಣ ಎಣಿಸುತ್ತಿರುವ ದಾವೂದ್ ಇಬ್ರಾಹಿಂ
ಪಾಕಿಸ್ತಾನದ ಕರಾಚಿ ಅಗಾ ಖಾನ್ ಆಸ್ಪತ್ರೆ ಹೊರಭಾಗದಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ. ಅಲ್ಲೀಗ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ತನ್ನ ಕೊನೆ ಕ್ಷಣಗಳನ್ನು ಎದುರಿಸುತ್ತಾ ಸಾವಿನ ನಿರೀಕ್ಷೆಯಲ್ಲಿದ್ದಾನೆ
ನವದೆಹಲಿ, ಏಪ್ರಿಲ್ 30 : ಭೂಗತಬ್ ಪಾತಕಿ, ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಆರೋಗ್ಯ ತೀರಾ ಗಂಭೀರವಾಗಿದೆ ಎಂಬ ಸುದ್ದಿ ಹೊರಬಿದ್ದ ನಂತರ, ಗುಪ್ತಚರ ಇಲಾಖೆಯು ಈ ಬೆಳವಣಿಗೆ ಮೇಲೆ ಕಣ್ಣಿರಿಸಿದೆ. ಅಧಿಕಾರಿಯೊಬ್ಬರು ಈ ವಿಚಾರವನ್ನು ಖಾತ್ರಿ ಪಡಿಸಿದ್ದು, ಆತನ ಆರೋಗ್ಯ ತೀರಾ ಹದಗೆಟ್ಟಿದೆ. ಕರಾಚಿಯ ಅಗಾ ಖಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ಎಂದು ತಿಳಿಸಿದ್ದಾರೆ.
ದಾವೂದ್ ನ ಸ್ಥಿತಿ ಚಿಂತಾಜನಕವಾಗಿದ್ದು, ಬದುಕುವ ಸಾಧ್ಯತೆ ತೀರಾ ಕಡಿಮೆಯಿದೆ. ಅಧಿಕಾರಿಯೊಬ್ಬರು ಆತನ ಆರೋಗ್ಯದ ಬಗ್ಗೆ ನಿಗಾ ಮಾಡುತ್ತಿದ್ದಾರೆ. ತೀವ್ರ ಹೃದಯಾಘಾತದಿಂದ ಆತ ಶುಕ್ರವಾರ ಆಸ್ಪತ್ರೆಗೆ ಸೇರಿದ್ದಾನೆ. ಇನ್ನು ತನ್ನ ಅಳಿಯನ ಮನೆಯ ಕಾರ್ಯಕ್ರಮದಲ್ಲಿ ಕೊನೆಯದಾಗಿ ದಾವೂದ್ ಕಾಣಿಸಿಕೊಂಡಿದ್ದ ಎಂಬ ಸುದ್ದಿಯನ್ನು ಅಧಿಕಾರಿಗಳು ನಿರಾಕರಿಸಿದ್ದು, ದಾವೂದ್ ಕಾಲಿಗೆ ಗ್ಯಾಂಗ್ರಿನ್ ಆದ ನಂತರ ಮನೆಯಿಂದ ಆಚೆ ಬಂದೇ ಇಲ್ಲ ಎಂದು ಹೇಳಿದ್ದಾರೆ.[ದಾವೂದ್ ಇಬ್ರಾಹಿಂ ಆರೋಗ್ಯ ಸ್ಥಿರ: ಬಲಗೈ ಬಂಟ ಛೋಟಾ ಶಕೀಲ್]

ಇನ್ನು ಕರಾಚಿಯ ಆಸ್ಪತ್ರೆಯ ಹೊರಗೆ ಬಿಗಿಯಾದ ರಕ್ಷಣೆ ಹಾಕಲಾಗಿದೆ. ಇದರಿಂದಲೇ ಆತನಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ವಿಚಾರ ಖಾತ್ರಿಯಾಗುತ್ತದೆ. ದಾವೂದ್ ನ ಸಹೋದರ ಅನೀಸ್ ಡಿ ಗುಂಪಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವುದರಿಂದ ಅನಾರೋಗ್ಯದ ಮಾಹಿತಿ ಮತ್ತಷ್ಟು ಖಾತ್ರಿಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಚೋಟಾ ಶಕೀಲ್ ಹೇಳೀರುವ ಹಾಗೆ ದಾವೂದ್ ಆರೋಗ್ಯ ಚೆನ್ನಾಗಿಲ್ಲ. ಆತ ತಪ್ಪು ಮಾಹಿತಿ ನೀಡಿದ್ದಾನೆ. ಈ ವಿಷಯ ಚೋಟಾ ಶಕೀಲ್ ಏಕೆ ತಿಳಿಸುತ್ತಾನೆ? ಅದೂ ಆತ ಪಾಕಿಸ್ತಾನದಲ್ಲಿದ್ದಾನೆ ಎಂಬುದನ್ನು ಆ ದೇಶ ಯಾವತ್ತಿಗೂ ಒಪ್ಪಿಕೊಂಡಿಲ್ಲ. ಅಂಥದ್ದರಲ್ಲಿ ಈ ವಿಚಾರವನ್ನು ಖಾತ್ರಿ ಪಡಿಸಲು ಯಾರಿಗಾದರೂ ಏಕೆ ಅವಕಾಶ ಕೊಡುತ್ತದೆ ಎಂಬ ಪ್ರಶ್ನೆ ಅಧಿಕಾರಿಗಳದು.[ಭಾರತದಲ್ಲೇ ಮಣ್ಣಾಗಲು ಬಯಸುತ್ತಿದ್ದಾನಾ ದಾವೂದ್ ಇಬ್ರಾಹಿಂ?]
ಇದಕ್ಕಿಂತ ಹೆಚ್ಚಾಗಿ ಈ ಸುದ್ದಿ ಖಚಿತವಾಗುತ್ತಿದ್ದಂತೆಯೇ ದಾವೂದ್ ನ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ಡಿ ಗುಂಪಿನಲ್ಲೇ ಕದನ ಉದ್ಭವಿಸುವ ಸಾಧ್ಯತೆಯಿದೆ. ಅಂದಹಾಗೆ ದಾವೂದ್ ನಂತರ ಯಾರು ಎಂಬುದನ್ನು ಐಎಸ್ ಐ ನಿರ್ಧರಿಸುತ್ತದೆಯೇ ವಿನಾ ತಂಡದ ಸದಸ್ಯರಲ್ಲ.












Click it and Unblock the Notifications