ಮೋದಿ ಅವಹೇಳನ : ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ದೂರು
Recommended Video
ನವದೆಹಲಿ, ಏಪ್ರಿಲ್ 18 : ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಕ್ರಿಮಿನಲ್ ಕಂಪ್ಲೇಂಟನ್ನು ಜೋಗಿಂದರ್ ತುಲಿ ಎಂಬುವವರು ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ.
ಗುರುವಾರ ಈ ದೂರನ್ನು ಜೋಗಿಂದರ್ ತುಲಿ ಅವರು ದಾಖಲಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ ಅಡಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಚೌಕಿದಾರ್ ಚೋರ್ ಹೈ' ಎಂದು ಹಲವಾರು ಸಂದರ್ಭಗಳಲ್ಲಿ, ಬೃಹತ್ ಸಮಾವೇಶಗಳಲ್ಲಿ ರಾಹುಲ್ ಗಾಂಧಿ ಅವರು ಹೀಯಾಳಿಸಿದ್ದಾರೆ. ಅಲ್ಲದೆ, ಮಹಾರಾಷ್ಟ್ರದ ನಾಂದೇಡ್ ನಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ, ಅದ್ಹೇಗೆ ಎಲ್ಲ 'ಕಳ್ಳ'ರ ಹೆಸರಿನ ಹಿಂದೆ ಮೋದಿ ಎಂದು ಹೆಸರಿರುತ್ತದೆ ಎಂದು ರಾಹುಲ್ ಮೂದಲಿಸಿದ್ದರು.

"ನನಗೆ ಒಂದು ಸಂಗತಿ ಹೇಳಿರಿ. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ... ಅದ್ಹೇಗೆ ಇವರೆಲ್ಲರ ಹೆಸರಿನ ಹಿಂದೆ ಮೋದಿ ಎಂಬ ಹೆಸರಿದೆ? ಎಲ್ಲ ಕಳ್ಳರ ಹೆಸರಿನ ಹಿಂದೆ 'ಮೋದಿ' ಅಂತ ಅಡ್ಡಹೆಸರಿದೆ?" ಎಂದು ಲೋಕಸಭೆ ಚುನಾವಣೆಗಾಗಿ ಪ್ರಚಾರದಲ್ಲಿ ತೊಡಗಿರುವ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದರು.
ಹಲವಾರು ಸಂದರ್ಭಗಳಲ್ಲಿ ರಾಹುಲ್ ಗಾಂಧಿ ಅವರ ಈ ಮಾತನ್ನು ಕೇಳಿಸಿಕೊಂಡಿದ್ದ ನರೇಂದ್ರ ಮೋದಿಯವರು, ನನ್ನನ್ನೂ ಸೇರಿದಂತೆ ಎಲ್ಲ ಹಿಂದುಳಿದ ವರ್ಗದವರನ್ನು ಅವಮಾನಿಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ರಾಹುಲ್ ವಿರುದ್ಧ ಕ್ರಿಮಿನಸ್ ಕೇಸ್ ಕೂಡ ದಾಖಲಾಗಿದೆ.












Click it and Unblock the Notifications