ಜನತಾ ಕರ್ಫ್ಯೂ ನಿಯಮ ಉಲ್ಲಂಘಿಸಿದರೂ 11,000 ದಂಡ ಸುಳ್ಳು
ನವದೆಹಲಿ, ಮಾರ್ಚ್.21: ಭಾರತದಲ್ಲಿ ಕೊರೊನಾ ವೈರಸ್ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಮಾರ್ಚ್.22ರ ಭಾನುವಾರ ಜನತಾ ಕರ್ಫ್ಯೂ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ.
ದೆಹಲಿಯಲ್ಲಿ ಜನತಾ ಕರ್ಫ್ಯೂವನ್ನು ಸಾರ್ವಜನಿಕರು ಉಲ್ಲಂಘಿಸಿದರೆ ಅಂಥವರಿಗೆ 11,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಇದೊಂದು ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ.
ಜನತಾ ಕರ್ಫ್ಯೂಗೂ ಜನತೆಗೆ ಶುಭ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ಜನತಾ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತದೆ ಎಂದು ದೆಹಲಿ ಪೊಲೀಸರ ಹೆಸರಿನಲ್ಲಿ ನಕಲಿ ನೋಟಿಸ್ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಪೊಲೀಸ್ ಇಲಾಖೆಯಿಂದ ಈ ಕುರಿತು ಯಾವುದೇ ನೋಟಿಸ್ ಜಾರಿಗೊಳಿಸಿಲ್ಲ.
ದೆಹಲಿ ಜನತೆಗೆ ಪೊಲೀಸ್ ಆಯುಕ್ತರ ಸ್ಪಷ್ಟನೆ:
ಭಾನುವಾರ ಜನತಾ ಕರ್ಫ್ಯೂಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ಕಡ್ಡಾಯವಾಗಿ ಕರ್ಫ್ಯೂ ಆಚರಣೆ ಮಾಡದಿದ್ದಲ್ಲಿ, ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುತ್ತದೆ ಎಂದು ಪೊಲೀಸ್ ಇಲಾಖೆಯ ಹೆಸರಿನಲ್ಲಿ ನಕಲಿ ನೋಟಿಸ್ ಜಾರಿಗೊಳಿಸಲಾಗಿದೆ. ಇದು ದೆಹಲಿ ಪೊಲೀಸ್ ಇಲಾಖೆಯ ಅಧಿಕೃತ ನೋಟಿಸ್ ಅಲ್ಲ ಎಂದು ಡೆಪ್ಯುಟಿ ಕಮೀಷನರ್ ಸ್ಪಷ್ಟನೆ ನೀಡಿದ್ದಾರೆ.
#FakeNews@DelhiPolice pic.twitter.com/M3dduqmoat
— DCP North Delhi (@DcpNorthDelhi) March 21, 2020
ಮಾರ್ಚ್ 22ರ ರವಿವಾರದಂದು ಬೆಳಗ್ಗೆ 7 ರಿಂದ ರಾತ್ರಿ 9 ರ ತನಕ ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ದೇಶದ ನಿವಾಸಿಗಳು ಮನೆಯಲ್ಲೇ ಉಳಿದು ಕರ್ಫ್ಯೂ ಆಚರಣೆಗೆ ಸಹಕರಿಸುವಂತೆ ಕೋರಿದ್ದಾರೆ. ಅಂದು ಮನೆಯಿಂದ ಹೊರಕ್ಕೆ ಬರಬೇಡಿ, ಮಾರ್ಚ್ 22ರ ಸಂಜೆ 5 ಗಂಟೆಗೆ ಸರಿಯಾಗಿ ನಿಮ್ಮ ಮನೆಯ ಬಾಗಿಲು, ಕಿಟಕಿ ಬಳಿ ನಿಂತು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವರ್ಗಕ್ಕೆ ಧನ್ಯವಾದ ಸಲ್ಲಿಸೋಣ ಎಂದು ಕರೆ ನೀಡಿದ್ದರು.