ಸಚಿವ ಸಂಪುಟ ವಿಸ್ತರಣೆ; ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ
ನವದೆಹಲಿ, ಜುಲೈ 07: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ 2.0 ಸರ್ಕಾರದ ಸಚಿವ ಸಂಪುಟ ಪುನರ್ ರಚನೆ ಕುರಿತು ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಾರಿ ಸಚಿವ ಸಂಪುಟವು ಪರಿಶಿಷ್ಟ ಜಾತಿಗೆ ಸೇರಿದ 12 ಸಚಿವರನ್ನು ಒಳಗೊಳ್ಳುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ, "ಸಚಿವ ಸಂಪುಟದಲ್ಲಿ ಹಲವು ದಲಿತ ಹಾಗೂ ಹಿಂದುಳಿದ ಜಾತಿಯ ಸದಸ್ಯರನ್ನು ಸಚಿವರನ್ನಾಗಿ ಮಾಡಲಾಗುತ್ತಿದೆ. ಆದರೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೀಗೆ ಮಾಡಲಾಗಿದೆ ಅಷ್ಟೆ" ಎಂದು ಹೇಳಿದ್ದಾರೆ.
"ಹೀಗೆ ಮಾಡುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸಮುದಾಯಗಳ ಒಳಿತಿಗಾಗಿ ಹೀಗೆ ಮಾಡುತ್ತಿಲ್ಲ" ಎಂದು ಆರೋಪಿಸಿದ್ದಾರೆ.

12 ಪರಿಶಿಷ್ಟ ಜಾತಿಗೆ ಸೇರಿದ ಸಚಿವರು ಬಿಹಾರ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ, ರಾಜಸ್ಥಾನ ಹಾಗೂ ತಮಿಳುನಾಡು ರಾಜ್ಯದಿಂದ ಸೇರ್ಪಡೆಗೊಳ್ಳುತ್ತಿದ್ದಾರೆ.
ಪರಿಶಿಷ್ಟ ಪಂಗಡದಿಂದ ಸೇರಿದ ಸಚಿವರು ಅರುಣಾಚಲ ಪ್ರದೇಶ, ಜಾರ್ಖಂಡ್, ಛತ್ತೀಸ್ ಗಢ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಹಾಗೂ ಅಸ್ಸಾಂಗೆ ಸೇರಿದ್ದಾರೆ.
ಕರ್ನಾಟಕದ ನಾಲ್ವರು ಸೇರಿದಂತೆ 43 ಸಂಸದರು ಇಂದು ಸಂಪುಟ ಸೇರಲಿದ್ದಾರೆ.












Click it and Unblock the Notifications