ಪೌರತ್ವ ತಿದ್ದುಪಡಿ ಕಾಯ್ದೆ: ನವದೆಹಲಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರತಿಪಕ್ಷಗಳ ಸಭೆ
ನವದೆಹಲಿ, ಜನವರಿ.13: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೊಂದಣಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್ ವಿರೋಧ ಪಕ್ಷಗಳ ಸಭೆ ಕರೆದಿದೆ. ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಮಧ್ಯಾಹ್ನ 2 ಗಂಟೆಗೆ ಈ ಸಭೆ ನಡೆಯಲಿದೆ.
ದೇಶದಲ್ಲಿ ಕೇಂದ್ರ ಸರ್ಕಾರದ ನಿಲುವಿನಿಂದ ಉಂಟಾಗಿರುವ ಗೊಂದಲಗಳ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ವಿರೋಧ ಪಕ್ಷಗಳು ಜಪಿಸುತ್ತಿರುವ ಒಗ್ಗಟ್ಟಿನ ಮಂತ್ರ ಆರಂಭದಲ್ಲೇ ಉಲ್ಟಾ ಹೊಡೆಯುವ ಲಕ್ಷಣಗಳು ಕಾಣುತ್ತಿವೆ.
ಸೋಮವಾರ ಮಧ್ಯಾಹ್ನ 2 ಗಂಟೆಗೆ ಕರೆದಿರುವ ಪ್ರತಿಪಕ್ಷಗಳ ಸಭೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಜರ್ ಆಗುವುದಿಲ್ಲ ಎಂದು ಮೊದಲೇ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಕೂಡಾ ಇಂದಿನ ಸಭೆಯಿಂದ ಅಂತರ ಕಾಯ್ದುಕೊಳ್ಳುವುದಾಗಿ ಹೇಳಿದ್ದಾರೆ.

ಪ್ರತಿಪಕ್ಷಗಳ ಸಭೆಗೆ ಹಾಜರಾಗಲ್ಲ ಎಂದು ಟ್ವೀಟ್:
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ಅಸಮಂಜಸವಾಗಿದೆ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಟ್ವೀಟ್ ಮಾಡಿದ್ದಾರೆ. ಸಿಎಎ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ (ಎನ್ಆರ್ ಸಿ) ಕ್ರಮವನ್ನು ಕೇಂದ್ರ ಸರ್ಕಾರವು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದು, ನವದೆಹಲಿಯಲ್ಲಿ ನಡೆಯುವ ಪ್ರತಿಪಕ್ಷ ನಾಯಕರ ಸಭೆಗೆ ಬಹುಜನ ಸಮಾಜ ಪಕ್ಷವು ಹಾಜರಾಗುವುದಿಲ್ಲ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications