ಚೆಕ್ ಬೌನ್ಸ್ ಆದ್ರೆ ಕಂಬಿ ಎಣಿಸಬೇಕಾದೀತು, ಹುಷಾರು!
ನವದೆಹಲಿ, ಜೂನ್ 13: ಕೆಲವರು ಚೆಕ್ ಬರೆಯುವುದರಲ್ಲಿ ತುಂಬಾ ಉದಾರಿಗಳು! ಎಷ್ಟು ಅಂದ್ರೆ, ಬ್ಯಾಂಕ್ ಅಕೌಂಟಿನಲ್ಲಿ ಅಷ್ಟು ಹಣವಿಲ್ಲದಿದ್ದರೂ ಚೆಕ್ ನಲ್ಲಿ ಉದಾರವಾಗಿ ಹಣ ನಮೂದಿಸಿರುತ್ತಾರೆ. ಹೀಗೇ ಚೆಕ್ ನಲ್ಲಿ ಬೇಕಾಬಿಟ್ಟಿ ಬರೆಯುವವರು ಇನ್ಮುಂದೆ ಹುಷಾರಾಗಿರುವುದು ಒಳಿತು.
ದಿನೇ ದಿನೇ ಹೆಚ್ಚುತ್ತಿರುವ ಚೆಕ್ ಬೌನ್ಸ್ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ, ಚೆಕ್ ಬೌನ್ಸ್ ಅಪರಾಧಕ್ಕೆ ಸಂಬಂಧಿಸಿದಂತೆ ಈಗಾಗಲೇ ಇರುವ ಕಾನೂನಿಗೆ ತಿದ್ದುಪಡಿ ತರಲು ತೀರ್ಮಾನಿಸಿದೆ. ಚೆಕ್ ಬೌನ್ಸ್ ಪ್ರಕರಣವನ್ನು ಜಾಮೀನು ರಹಿತ ಅಪರಾಧ ಎಂದು ಘೋಷಿಸುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು, ಈ ಕಾನೂನು ಜಾರಿಯಾದರೆ ಚೆಕ್ ಬೌನ್ಸ್ ಆರೋಪಿಗಳು ಕಂಬಿ ಎಣಿಸುವುದು ಗ್ಯಾರಂಟಿ!
ಇಷ್ಟು ದಿನ ಚೆಕ್ ಬೌನ್ಸ್ ಅಪರಾಧಕ್ಕೆ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿದ್ದರೂ, ಅದನ್ನು ಜಾಮೀನು ರಹಿತ ಅಪರಾಧದ ಪಟ್ಟಿಗೆ ಸೇರಿಸಲಾಗುತ್ತಿರಲಿಲ್ಲ. ಕೆಲವೊಮ್ಮೆ ಬೌನ್ಸ್ ಆದ ಚೆಕ್ ನ ದುಫ್ಪಟ್ಟು ಹಣವನ್ನು ಅಪರಾಧಿಯಿಂದ ದಂಡವನ್ನಾಗಿ ಪಡೆದು ಪ್ರಕರಣಕ್ಕೆ ಅಂತ್ಯ ಹಾಡಲಾಗುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಕಾನೂನು, ಚೆಕ್ ಅನ್ನು ಬೇಕಾಬಿಟ್ಟಿಯಾಗಿ ಬರೆಯುವವರಿಗೆ ತಲೆನೋವಾಗಿ ಪರಿಣಮಿಸಿದೆ.

2 ವರ್ಷ ಜೈಲು ಅಥವಾ ದುಪ್ಪಟ್ಟು ದಂಡ!
ಈ ಕಾನೂನಿನಲ್ಲಿ ಏಕಾಏಕಿ ಆರೋಪಿಗೆ ಶಿಕ್ಷೆಯನ್ನು ವಿಧಿಸಲಾಗುವುದಿಲ್ಲ, ಬದಲಾಗಿ ಈಗಿನಂತೆಯೇ ಕೋರ್ಟಿನ ಹೊರಗೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಕಾಲಾವಕಾಶ ನಿಗದಿ ಮಾಡಲಾಗುತ್ತದೆ. ಆದರೆ ಆ ಅವಧಿಯಲ್ಲಿ ಪ್ರಕರಣ ಇತ್ಯರ್ಥವಾಗದೆ ಇದ್ದಲ್ಲಿ ಆರೋಪಿಗೆ 2 ವರ್ಷ ಜೈಲು ಶಿಕ್ಷೆ ಅಥವಾ ಚೆಕ್ ನ ದುಪ್ಪಟ್ಟು ಹಣವನ್ನು ದಂಡವನ್ನಾಗಿ ನೀಡಲು ಹೇಳಲಾಗುತ್ತದೆ.

ದಿನಾಂಕ ಅಥವಾ ಹೆಸರನ್ನು ತಪ್ಪಾಗಿ ಬರೆದರೆ?
ಚೆಕ್ ನಲ್ಲಿ ದಿನಾಂಕ ತಪ್ಪಾಗಿ ನಮೂದಿಸಿದರೂ ಸಮಸ್ಯೆಯಾಗುತ್ತದೆಯೇ? ಎಂದರೆ ಇಲ್ಲ, ಈ ಶಿಕ್ಷೆ ಕೇವಲ ಚೆಕ್ ನಲ್ಲಿ ಹಣದ ಮೊತ್ತವನ್ನು ತಪ್ಪಾಗಿ ನಮೂದಿಸಿದರೆ, ಅಂದರೆ ಖಾತೆಯಲ್ಲಿ ಇರುವುದಕ್ಕಿಂತ ಹೆಚ್ಚು ಹಣವನ್ನು ನಮೂದಿಸಿದರೆ ಮಾತ್ರ ಶಿಕ್ಷೆಯಾಗುತ್ತದೆ. ದಿನಾಂಕ ಅಥವಾ ಹೆಸರನ್ನು ತಪ್ಪಾಗಿ ಬರೆದರೆ ಇದು ಅನ್ವಯವಾಗುವುದಿಲ್ಲ.

20 ಲಕ್ಷ ಚೆಕ್ ಬೌನ್ಸ್ ಪ್ರಕರಣಗಳು!
ಈಗಾಗಲೇ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೆ ಉಳಿದ ಚೆಕ್ ಬೌನ್ಸ್ ಪ್ರಕರಣಗಳು ಇಪ್ಪತ್ತು ಲಕ್ಷದಷ್ಟಿವೆ! ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ಕಾನೂನು ಜಾರಿಯಾದರೆ ಚೆಕ್ ವ್ಯವಹಾರದಲ್ಲಿ ನಂಬಿಕೆ ಬರಲಿದೆಯೇ?
ಈಗಾಗಲೇ ನಗದುರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ಹೆಣಗಾಡುತ್ತಿದೆ. ಈ ನಿಟ್ಟಿನಲ್ಲಿ ಚೆಕ್ ವ್ಯವಹಾರಕ್ಕೂ ಉತ್ತೇಜನ ನೀಡುವುದು ಕೇಮದ್ರ ಸರ್ಕಾರದ ಉದ್ದೇಶವಾಗಿರಬಹುದು. ಇಷ್ಟು ದಿನ ಚೆಕ್ ಬೌನ್ಸ್ ಆಗಬಹುದೆಂಬ ಭಯಕ್ಕೆ ಚೆಕ್ ತೆಗೆದುಕೊಳ್ಳಲು ಭಯಪಡುತ್ತಿದ್ದ ಜನರು ಇದೀಗ ಕಠಿಣ ಕಾನೂನು ಜಾರಿಗೆ ಬಂದರೆ ಸರಾಗವಾಗಿ ಚೆಕ್ ವ್ಯವಹಾರ ಮಾಡಬಹುದು.

ಆತಂಕವೂ ಇಲ್ಲದಿಲ್ಲ
ಅಪ್ಪಿ-ತಪ್ಪಿ ಚೆಕ್ ಬೌನ್ಸ್ ಆದರೆ, ಅಂದರೆ ಉದ್ದೇಶ ಪೂರ್ವಕವಾಗಿ ಮಾಡದಿದ್ದರೂ ಕಣ್ತಪ್ಪಿನಿಂದ ಸಂಭವಿಸುವ ತಪ್ಪಿನಿಂದ ಚೆಕ್ ಬೌನ್ಸ್ ಆದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬ ಭಯಕ್ಕೇ ಜನರು ಚೆಕ್ ವ್ಯವಹಾರ ಮಾಡುವುದನ್ನು ನಿಲ್ಲಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.












Click it and Unblock the Notifications