ವಾಯುಮಾಲಿನ್ಯ ನಿಯಂತ್ರಣಕ್ಕೆ ಶೀಘ್ರದಲ್ಲಿಯೇ ಕಾನೂನು: ಕೇಂದ್ರ ಸರ್ಕಾರ
ನವದೆಹಲಿ, ಅಕ್ಟೋಬರ್ 26: ದೆಹಲಿ ಹಾಗೂ ರಾಜಧಾನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಬೆಳೆ ಸುಡುವ ಚಟುವಟಿಕೆಗಳು ಹಾಗೂ ವಾಯುಮಾಲಿನ್ಯವನ್ನು ನಿಯಂತ್ರಿಸಲು ಸೂಕ್ತ ಶಾಸನ ರೂಪಿಸಲಾಗುವುದಾಗಿ ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ.
ರಾಜಧಾನಿ ಸುತ್ತಲಿನ ಎನ್‌ಸಿಆರ್ ರಾಜ್ಯಗಳಲ್ಲಿ ಕೃಷಿ ಕೂಳೆಗಳನ್ನು ನಾಶಪಡಿಸಲು ಬೆಂಕಿ ಹಚ್ಚುವುದರಿಂದ ರಾಜಧಾನಿಯನ್ನು ಅಪಾರ ಪ್ರಮಾಣದಲ್ಲಿ ಮಾಲಿನ್ಯ ಕಾಡಲು ಕಾರಣವಾಗಿದೆ ಎಂಬ ಆರೋಪವಿದ್ದು, ಅದನ್ನು ಖುದ್ದು ಪರಿಶೀಲಿಸುವ ಸಂಬಂಧ ಏಕ ಸದಸ್ಯ ಸಮಿತಿಯನ್ನು ನೇಮಿಸಿ ಸುಪ್ರೀಂಕೋರ್ಟ್ ಆದೇಶಿಸಿತ್ತು. ಈಗ ಕೇಂದ್ರದ ಭರವಸೆಯ ಕಾರಣದಿಂದ ತನ್ನ ಆದೇಶಕ್ಕೆ ತಡೆ ನೀಡಿದೆ.
ಕೂಳೆ ಸುಡುವ ಅಂಶ ಸೇರಿದಂತೆ ವಾಯು ಮಾಲಿನ್ಯ ತಡೆಯುವ ಕಾರ್ಯವನ್ನು ನಿಭಾಯಿಸಲು ಪರಿಣಾಮಕಾರಿ ಕಾನೂನು ತರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸೋಮವಾರ ತಿಳಿಸಿದೆ. ಇದನ್ನು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರ ನೇತೃತ್ವದ ನ್ಯಾಯಪೀಠ ಪರಿಗಣಿಸಿದೆ.

ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ಕೂಳೆ ಸುಡುವುದರಿಂದ ಉಂಟಾಗುವ ವಾಯುಮಾಲಿನ್ಯದ ಬಗ್ಗೆ ಪರಿಶೀಲನೆ ನಡೆಸುವಂತೆ ಅಕ್ಟೋಬರ್ 16ರಂದು ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕುರ್ ಅವರ ಏಕ ಸದಸ್ಯ ಸಮಿತಿಯನ್ನು ನೇಮಿಸಿ ಸುಪ್ರೀಂಕೋರ್ಟ್ ಅದೇಶ ಹೊರಡಿಸಿತ್ತು.
ಎನ್‌ಸಿಆರ್‌ನಲ್ಲಿ ಕೂಳೆ ಸುಡುವುದನ್ನು ಪರಿಶೀಲಿಸಲು ಮತ್ತು ತಡೆಯಲು ಶೀಘ್ರದಲ್ಲಿಯೇ ಸುಗ್ರೀವಾಜ್ಞೆ ಹೊರಡಿಸಲಾಗುವುದು. ಶೀಘ್ರದಲ್ಲಿಯೇ ಆದೇಶ ಹೊರಡಿಸಲು ಸರ್ಕಾರ ಬಯಸಿರುವುದರಿಂದ ಸುಗ್ರೀವಾಜ್ಞೆ ಹೊರಡಿಸಲಾಗುತ್ತದೆ ಎಂದು ಸಾಲಿಸಿಟರ್ ಜನರ್ಲ ತುಷಾರ್ ಮೆಹ್ತಾ ತಿಳಿಸಿದ್ದಾರೆ.












Click it and Unblock the Notifications