ದೆಹಲಿಯಲ್ಲಿ ಮೂರಂತಸ್ತಿನ ಕಟ್ಟಡ ಕುಸಿತ: ಐವರ ದಾರುಣ ಸಾವು
ನವದೆಹಲಿ, ಸೆಪ್ಟೆಂಬರ್ 26: ಉತ್ತರ ದೆಹಲಿಯ ಅಶೋಕ್ ವಿಹಾರ್ ನಲ್ಲಿ ಮೂರಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಐವರು ಮೃತರಾದ ದಾರುಣ ಘಟನೆ ಬುಧವಾರ ನಡೆದಿದೆ.
ಘಟನೆಯಲ್ಲಿ ಓರ್ವ ಮಹಿಳೆ ಮತ್ತು ನಾಲ್ವರು ಮಕ್ಕಳು ಮೃತರಾಗಿದ್ದು, ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಘಟನೆಯಲ್ಲಿ ಎಂಟು ಜನರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಮೂರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಕಟ್ಟಡದ ಅವಶೇಷದಡಿಯಲ್ಲಿ ಮತ್ತಷ್ಟು ಜನ ಇದ್ದಿರಬಹದು ಎಂಬ ಶಂಕೆ ವ್ಯಕ್ತವಾಗಿದೆ.
ಅಶೋಕ್ ವಿಹಾರದ ಸಾವನ್ ಪಾರ್ಕ್ ಬಳಿಯಲ್ಲಿದ್ದ ಈ ಮನೆಯಲ್ಲಿ ವಾಸವಿದ್ದ ಬಹುಪಾಲು ಜನರು ಬಾಡಿಗೆಗಾಗಿ ಇದ್ದವರು. ಈ ಕಟ್ಟಡ ಉತ್ತಮ ಸ್ಥಿತಿಯಲ್ಲಿಲ್ಲ ಎಂಬ ಕುರಿತು ಈ ಮೊದಲೇ ಆರೋಪಗಳು ಕೇಳಿಬಂದಿದ್ದವು. ಅದೂ ಅಲ್ಲದೆ, ಕಟ್ಟಡದಲ್ಲಿ ಸಾಕಷ್ಟು ಬಿರುಕುಗಳೂ ಕಂಡುಬಂದಿದ್ದವು.

ಈ ಕಟ್ಟಡ ಸುಸ್ಥಿತಿಯಲ್ಲಿಲ್ಲ ಎಂಬ ಬಗ್ಗೆ ಈಗಾಗಲೇ ಹಲವು ಬಾರಿ 'ದೆಹಲಿ ನಗರಸಭೆಗೆ' ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಈ ಕಟ್ಟಡದಲ್ಲಿ ವಾಸವಿದ್ದ ಮಂದಿ ಆರೋಪಿಸಿದ್ದಾರೆ.
ಕಳೆದ ಜುಲೈ ತಿಂಗಳಿನಲ್ಲಿ ನೋಯ್ಡಾದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದ ಪರಿಣಾಮ ಹತ್ತಕ್ಕೂ ಹೆಚ್ಚು ಜನ ಮೃತರಾಗಿದ್ದರು.












Click it and Unblock the Notifications