ಕಪ್ಪು ಹಣ ತನಿಖೆಗೆ ಸುಪ್ರೀಂನಿಂದ ಹೊಸ ಡೆಡ್ ಲೈನ್
ನವದೆಹಲಿ,ಡಿ.4: ವಿದೇಶದಲ್ಲಿ ಕಪ್ಪು ಹಣ ವಾಪಸ್ ತರುವ ವಿಚಾರದಲ್ಲಿ ಸರ್ಕಾರ ಏನೇ ಹೇಳಿಕೆ ನೀಡಿರಬಹುದು ನಂತರ ಉಲ್ಟಾ ಹೊಡೆದಿರಬಹುದು. ಅದರೆ, ಕಾಳಧನಿಕರ ಪಟ್ಟಿ ಒಟ್ಟುಗೂಡಿಸುವಲ್ಲಿ ವಿಶೇಷ ತನಿಖಾ ದಳ ತನ್ನ ತನಿಖೆ ಮುಂದುವರೆಸಿದೆ. ಈ ನಡುವೆ ಸುಪ್ರೀಂಕೋರ್ಟ್ ತನಿಖೆ ಮುಕ್ತಾಯಕ್ಕೆ ಹೊಸ ಡೆಡ್ ಲೈನ್ ನೀಡಿದೆ.
ಕಪ್ಪು ಹಣ ಹೊಂದಿರುವ ಖಾತೆದಾರರ ಪಟ್ಟಿ ಹಾಗೂ ವಾಪಸ್ ತರುವ ವಿಚಾರದಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದ ತನಿಖೆಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಹಣ ಇಟ್ಟಿರುವ ಒಟ್ಟು 627 ಮಂದಿ ಹೆಸರು ಸರ್ಕಾರದ ಬಳಿ ಇದೆ. ಮಾ.31ರೊಳಗೆ ತನಿಖೆ ಪೂರ್ಣಗೊಳ್ಳದೆ ಹೋದರೆ ಹೊಸ ಗಡುವು ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಚ್. ಎಲ್. ದತ್ತು, ಜಸ್ಟೀಶ್ ಮದನ್ ಬಿ ಲೋಕೂರ್, ಎ.ಕೆ ಸಿಕ್ರಿ ಅವರಿದ್ದ ನ್ಯಾಯಪೀಠ ಹೇಳಿದೆ. [ಟೈಮ್ ಲೈನ್ : ವಿದೇಶದ ಬ್ಯಾಂಕುಗಳಲ್ಲಿ ಕಪ್ಪು ಹಣ ]

ಒಂದು ವೇಳೆ ಯಾವುದಾದರೂ ಕಾರಣಕ್ಕೆ ಮಾ.31ರೊಳಗೆ ತನಿಖೆ ಪೂರ್ಣಗೊಳ್ಳದೆ ಹೋದರೆ ಸರ್ಕಾರ ಅಂತಿಮ ಗಡುವು ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳುತ್ತದೆ ಎನ್ನುವ ವಿಶ್ವಾಸ ಇದೆ ಎಂದು ನ್ಯಾಯಾಲಯ ಹೇಳಿದೆ.[ವಿವರ ಲೀಕ್ ಮಾಡಿದ್ದ ಎಲ್ಮಾರ್ ಎಲ್ಲಿ?]
ಸಾಲಿಸಿಟರ್ ಜನರಲ್ ಮೋಹನ್ ಪರಾಸರನ್ ಅವರು ತಮಗೆ ಕೆಲವು ದಾಖಲೆಗಳನ್ನು ಮರೆಮಾಚಿದ ರೀತಿಯಲ್ಲಿ ನೀಡಿದ್ದರು ಎಂದು ಅರ್ಜಿದಾರರಲ್ಲಿ ಒಬ್ಬರಾಗಿರುವ ಖ್ಯಾತನ್ಯಾಯಾವಾದಿ ರಾಮ್ ಜೇಠ್ಮಲಾನಿ ಆರೋಪಿಸಿದ್ದರು. ಈ ಬಗ್ಗೆ ಪ್ರಸ್ತಾಪಿಸಿದ ನ್ಯಾಯಪೀಠ ಅರ್ಜಿದಾರರಿಗೆ ಕಪ್ಪುಹಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮರೆಮಾಚದೆ ನೀಡುವಂತೆಯೂ ಆದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜ.20ಕ್ಕೆ ನಿಗದಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.[ಈಗಿನ ಪಟ್ಟಿಯಲ್ಲಿ ಶೇ. 1ರಷ್ಟೂ ಹೆಸರಿಲ್ಲ...!]
ವಿದೇಶದ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವವರ ಪೈಕಿ ಹಲವಾರು ಮಂದಿ ಆದಾಯ ತೆರಿಗೆ ಪಾವತಿ ಮಾಡಿರುವುದಾಗಿ ದಾಖಲೆ ಒದಗಿಸಿದ್ದಾರೆ. ಪಟ್ಟಿಯಲ್ಲಿರುವ ಎಲ್ಲರ ತೆರಿಗೆ ಬಾಕಿ ವಿವರಗಳು ತನಿಖೆ ಮೂಲಕ ತಿಳಿಯಲಿದೆ ಎಂದು ಅಟರ್ನಿ ಜನರಲ್ ಮುಕುಲ್ ರೋಹ್ಟಗಿ ಹೇಳಿದ್ದಾರೆ. ಕಪ್ಪು ಹಣ ವಾಪಸ್ ತರಲು ಕಪ್ಪು ಹಣದ ಖಾತೆ ಹೊಂದಿರುವ ದೇಶಗಳ ಕಾನೂನಿನ ನೆರವು ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.












Click it and Unblock the Notifications