ಸಂಸದ ಅನಂತಕುಮಾರ್ ಹೆಗಡೆಗೆ ನಿಷೇಧ ಹೇರಿದ ಬಿಜೆಪಿ ಹೈಕಮಾಂಡ್ !
ನವದೆಹಲಿ, ಫೆಬ್ರವರಿ 3: ಮಹಾತ್ಮಾ ಗಾಂಧೀಜಿ ಬಗ್ಗೆ ಹಗುರವಾಗಿ ಮಾತನಾಡಿದ್ದ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಬಿಜೆಪಿ ಹೈಕಮಾಂಡ್ ಗರಂ ಆಗಿದ್ದು, ನೋಟಿಸ್ ಜಾರಿ ಮಾಡಿದೆ.
ಫೆಬ್ರವರಿ 4 ರಂದು ದೆಹಲಿಯಲ್ಲಿ ನಡೆಯಲಿರುವ ಸಂಸದೀಯ ಸಭೆಗೆ ಬಾರದಂತೆ ಅನಂತಕುಮಾರ್ ಹೆಗಡೆಗೆ ನಿಷೇಧ ಹೇರಿರುವ ಬಿಜೆಪಿ ಹೈಕಮಾಂಡ್, ಗಾಂಧೀಜಿ ಬಗ್ಗೆ ಹಗುರವಾದ ಹೇಳಿಕೆ ನೀಡಿರುವುದು ಏನಕ್ಕೆ? ಎಂದು ಕಾರಣ ಕೇಳಿ ನೋಟಿಸ್ ನೀಡಿದೆ.
ಭಾನುವಾರ ಬೆಂಗಳೂರಿನ ಖಾಸಗಿ ಸಮಾರಂಭದಲ್ಲಿ ಮಾತನಾಡಿದ್ದ ಅನಂತಕುಮಾರ್ ಹೆಗಡೆ, ''ಗಾಂಧಿ ಅಂಥವರನ್ನು ''ಮಹಾತ್ಮ" ಎಂದು ಭಾರತದಲ್ಲಿ ಏಕೆ ಕರೆಯುತ್ತಾರೋ ಎಂದಿದ್ದರು. ಗಾಂಧಿ ನಡೆಸಿದ ಸ್ವಾತಂತ್ರ್ಯ ಹೋರಾಟವನ್ನು ದೊಡ್ಡ ನಾಟಕ. ಬ್ರಿಟೀಷರ ಬೆಂಬಲದಿಂದ ನಡೆದ ಪೂರ್ವನಿಯೋಜಿತ ನಾಟಕದಲ್ಲಿ ಗಾಂಧಿ ಪಾತ್ರಧಾರಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಗಾಂಧಿಯನ್ನು ಪೊಲೀಸರು ಎಂದೂ ಮುಟ್ಟಿಲ್ಲ. ಬ್ರಿಟೀಷರ ಅನುಮತಿಯಿಂದ ಸತ್ಯಾಗ್ರಹ, ಪ್ರತಿಭಟನೆ ನಾಟಕ ನಡೆಸಲಾಗಿತ್ತು. ಇದು ನಿಜವಾದ ಸ್ವಾತಂತ್ರ್ಯ ಹೋರಾಟವೇ ಅಲ್ಲ ಎಂದು ಅನಂತಕುಮಾರ್ ಹೇಳಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಗಾಂಧಿ ಅವರು ನಡೆಸಿದ ಅಮರಣಾಂತ ಉಪವಾಸ ಸತ್ಯಾಗ್ರಹವೇ ಕಾರಣ ಎಂದು ಬಿಂಬಿಸಲಾಗಿದೆ. ಆದರೆ ಇದು ನಿಜವಲ್ಲ, ಸತ್ಯಾಗ್ರಹದಿಂದ ಬ್ರಿಟಿಷರು ಭಾರತವನ್ನು ತೊರೆಯಲಿಲ್ಲ ಎಂದರು. ಭಾರತದ ಇತಿಹಾಸ ಓದಿದರೆ ನನ್ನ ರಕ್ತಕುದಿಯುತ್ತದೆ. ಹೇಗೆ ಇಂಥವರನ್ನು ಮಹಾತ್ಮ ಎಂದು ಕರೆಯಲಾಗುತ್ತದೆ ಎಂದು ತಮ್ಮ ಭಾಷಣದಲ್ಲಿ ನಾಲಿಗೆ ಹರಿಬಿಟ್ಟಿದ್ದರು.












Click it and Unblock the Notifications