ಇಂದಿರಾ ಗಾಂಧಿ ರೀತಿ ನನ್ನನ್ನೂ ಹತ್ಯೆ ಮಾಡುತ್ತಾರೆ: ಕೇಜ್ರಿವಾಲ್
ನವದೆಹಲಿ, ಮೇ 18: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಿದಂತೆಯೇ ತಮ್ಮನ್ನೂ ಹತ್ಯೆ ಮಾಡಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿಯು ತಮ್ಮನ್ನು ಕೊಲ್ಲಲು ಬಯಸುತ್ತಿದೆ. ಒಂದು ದಿನ ತಮ್ಮನ್ನು ಹತ್ಯೆ ಮಾಡಲಿದೆ ಎಂದು ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಅರವಿಂದ್ ಕೇಜ್ರಿವಾಲ್ ಅವರ ಮೇಲೆ ದಾಳಿ ನಡೆಸುವ ಅನೇಕ ಘಟನೆಗಳು ಇತ್ತೀಚೆಗೆ ನಡೆದಿದ್ದವು. ಈ ತಿಂಗಳ ಆರಂಭದಲ್ಲಿ ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕಾಗಿ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ವಾಹನ ಏರಿ ಕೇಜ್ರಿವಾಲ್ ಅವರ ಕೆನ್ನೆಗೆ ಬಾರಿಸಿದ್ದ.
ಇದಕ್ಕೂ ಮುನ್ನ ಕೇಜ್ರಿವಾಲ್ ಅವರ ಮೇಲೆ ಇಂಕ್ ಮತ್ತು ಮೆಣಸಿನ ಪುಡಿ ಎರಚುವ ದಾಳಿ ನಡೆಸಲಾಗಿತ್ತು. ಈ ಎಲ್ಲ ಘಟನೆಗಳಿಗೂ ಬಿಜೆಪಿಯೇ ಕಾರಣ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ತಮ್ಮನ್ನು ಬೆದರಿಸುವ ಉದ್ದೇಶದಿಂದಲೇ ಈ ರೀತಿ ದಾಳಿಗಳನ್ನು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.
ತಮ್ಮ ಮೇಲಿನ ಕಪಾಳ ಮೋಕ್ಷ ಘಟನೆಯನ್ನು ಅವರು ಮೋದಿ ಭಕ್ತರ ಕೃತ್ಯ ಎಂದು ದೂರಿದ್ದರು. ಕಳೆದ ಐದು ವರ್ಷಗಳಲ್ಲಿ ತಮ್ಮ ಮೇಲೆ ನಡೆದಿರುವ ಒಂಬತ್ತನೇ ದಾಳಿ ಇದು. ಮುಖ್ಯಮಂತ್ರಿ ಆದ ಬಳಿಕ ಐದನೆಯದು. ಯಾವ ಮುಖ್ಯಮಂತ್ರಿಗೂ ಈ ರೀತಿ ಭದ್ರತಾ ಲೋಪ ಆಗಿರಲಿಲ್ಲ ಎಂದಿದ್ದರು. ಇಲ್ಲಿನ ಪೊಲೀಸರು ಕೇಂದ್ರದ ಬಿಜೆಪಿ ಸರ್ಕಾರದ ಅಧೀನದಲ್ಲಿ ಇರುವುದರಿಂದ ಈ ಲೋಪಕ್ಕೆ ಬಿಜೆಪಿಯೇ ಹೊಣೆ ಎಂದು ಹೇಳಿದ್ದರು.
ಇಂಡಿಯಾ ಟುಡೆ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ. ಕೇಜ್ರಿವಾಲ್ ಅವರ ಆರೋಪಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಅಂಗರಕ್ಷಕರಿಂದಲೇ ಹತ್ಯೆ
'ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಂತೆಯೇ ಒಂದು ದಿನ ನನ್ನನ್ನು ನನ್ನ ಅಂಗರಕ್ಷಕರೇ ಹತ್ಯೆ ಮಾಡಲಿದ್ದಾರೆ. ಬಿಜೆಪಿ ನನ್ನ ಜೀವ ತೆಗೆಯಲು ಹವಣಿಸುತ್ತಿದೆ. ಅವರು ನನ್ನನ್ನು ಕೊಲೆ ಮಾಡಲಿದ್ದಾರೆ' ಎಂದು ಹೇಳಿದ್ದಾರೆ.
ನನ್ನ ಖಾಸಗಿ ಭದ್ರತಾ ಅಧಿಕಾರಿ ಬಿಜೆಪಿಗೆ ಮಾಹಿತಿ ನೀಡುತ್ತಾರೆ. ಅವರು ನನ್ನನ್ನು ಅಂಗರಕ್ಷಕರ ಮೂಲಕ ಒಂದು ದಿನ ಇಂದಿರಾ ಗಾಂಧಿ ಅವರನ್ನು ಕೊಂದಂತೆಯೇ ಕೊಲೆ ಮಾಡುತ್ತಾರೆ ಎಂದಿದ್ದಾರೆ.

ಮೋದಿಗೆ ಮತ ಹಾಕಿದ್ದಾರೆ
ನನ್ನ ಸುತ್ತಮುತ್ತಲೂ ಇರುವ ಪೊಲೀಸ್ ಸಿಬ್ಬಂದಿ ಇದ್ದಾರಲ್ಲ, ಅವರೆಲ್ಲರೂ ಬಿಜೆಪಿ ಸರ್ಕಾರಕ್ಕೆ ವರದಿ ನೀಡುತ್ತಾರೆ. ನನ್ನ ಪಿಎಸ್‌ಒಗಳು (ಅಂಗರಕ್ಷಕರು) ಕೂಡ ಬಿಜೆಪಿಗೆ ವರದಿ ಕೊಡುತ್ತಾರೆ. ನನ್ನ ಭದ್ರತಾ ಸಿಬ್ಬಂದಿ ಮೋದಿ ಅವರಿಗೆ ಮತ ಹಾಕಿದ್ದಾರೆ. ಎರಡು ನಿಮಿಷಗಳ ಒಳಗೆ ನನ್ನ ಜೀವ ಹಾರಿಹೋಗಬಹುದು. ಇಂದಿರಾ ಗಾಂಧಿ ಅವರಂತೆಯೇ ಪಿಎಸ್‌ಒಗಳೇ ನನ್ನನ್ನು ಮುಗಿಸಲಿದ್ದಾರೆ ಎಂದು ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.
|
ಪೊಲೀಸರ ಮೇಲೆ ನಂಬಿಕೆ ಇಲ್ಲ
ಮುಖ್ಯಮಂತ್ರಿ ಆದ ಬಳಿಕ ಅವರ ಮೇಲೆ ಪೊಲೀಸರ ಸಮ್ಮುಖದಲ್ಲಿಯೇ ಕನಿಷ್ಠ ಆರು ದಾಳಿಗಳಾಗಿವೆ. ಇಂತಹ ಘಟನೆಗಳು ನಡೆದ ಬಳಿಕವೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಮಗೆ ದೆಹಲಿ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದು ಎಎಪಿ ಮುಖಂಡ ಸೌರಭ್ ಭಾರದ್ವಾಜ್ ಹೇಳಿದ್ದಾರೆ.
|
ಸುಳ್ಳುಗಾರ ಕೇಜ್ರಿವಾಲ್
ಕೇಜ್ರಿವಾಲ್ ಆರೋಪ ನಿರಾಧಾರ. ತಮ್ಮನ್ನು ಯಾವಾಗಲೂ ಬಿಂಬಿಸಿಕೊಳ್ಳಲು ಅವರು ಬಯಸುತ್ತಾರೆ. ಹತ್ಯೆಯ ಆರೋಪ ಆಧಾರರಹಿತ. ಕೇಜ್ರಿವಾಲ್ ಅವರಂತಹ ಮೂರನೇ ದರ್ಜೆಯ ರಾಜಕಾರಣಿಗಳ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಾರೆ. ಅವರೊಬ್ಬ ಸುಳ್ಳುಗಾರ. ಇಂದಿರಾಗಾಂಧಿ ಅವರೊಂದಿಗೆ ಹೋಲಿಸಿಕೊಳ್ಳುತ್ತಾರೆ. ಎಂತಹ ಜೋಕ್ ಎಂದು ಬಿದ್ಯುತ್ ಕಾಂತಿ ಧಾರ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.












Click it and Unblock the Notifications