ಸತ್ಯೇಂದ್ರ ಜೈನ್ ಬಂಧನ ರಾಜಕೀಯ ಪ್ರೇರಿತ: ಕೇಜ್ರಿವಾಲ್
"ಸಚಿವ ಸತ್ಯೇಂದ್ರ ಜೈನ್ ಸರಕಾರ ಮತ್ತು ಆಮ್ ಆದ್ಮಿ ಪಕ್ಷದಲ್ಲಿ ತುಂಬಾ ನಿಷ್ಠೆ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಜೈನ್ ವಿರುದ್ಧದ ಪ್ರಕರಣವನ್ನು ನಾನು ಅಧ್ಯಯನ ಮಾಡಿದ್ದೇನೆ. ಇದು ಸಂಪೂರ್ಣವಾಗಿ ಸುಳ್ಳು ಮತ್ತು ರಾಜಕೀಯ ಕಾರಣಗಳಿಂದ ಪ್ರೇರೇಪಿಸಲ್ಪಟ್ಟಿದೆ ಮತ್ತು ಉದ್ದೇಶಪೂರ್ವಕವಾಗಿ ಅವರ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ.
ತಮ್ಮ ಸರ್ಕಾರದ ರಸ್ತೆ ಅಭಿವೃದ್ಧಿ ಕಾರ್ಯಕ್ರಮದ ಪರಿಶೀಲನೆಯ ಸಂದರ್ಭದಲ್ಲಿ ಮಾತನಾಡಿದ ಅವರು, "ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಜೈನ್ ಆರೋಪ ಮುಕ್ತವಾಗಿ ಹೊರಬರುತ್ತಾರೆ. ಈ ಸುಳ್ಳು ಆರೋಪವು ಹಾಗೂ ಪ್ರಕರಣವೂ ಉಳಿಯುವುದಿಲ್ಲ" ಎಂದು ಅರವಿಂದ್ ಕೇಜ್ರೀವಾಲ್ ಹೇಳಿದರು.
ದೆಹಲಿಯ ಕೇಜ್ರಿವಾಲ್ ಸರ್ಕಾರದಲ್ಲಿ ಆರೋಗ್ಯ, ಗೃಹ ಮತ್ತು ಅಧಿಕಾರ ಸೇರಿದಂತೆ ವಿವಿಧ ಖಾತೆಗಳನ್ನು ಹೊಂದಿರುವ ಜೈನ್ ಅವರನ್ನು ಸೋಮವಾರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಜೈನ್ ಅವರನ್ನು ತೆಗೆದುಹಾಕುವ ಬೇಡಿಕೆಯ ಬಗ್ಗೆ ಕೇಳಿದಾಗ, "ಆರೋಪದಲ್ಲಿ ಶೇಕಡಾ ಒಂದಾದರೂ ಸತ್ಯ ಅಂಶವಿದ್ದರೆ ಕ್ರಮ ತೆಗೆದುಕೊಳ್ಳುತ್ತಿದ್ದೆ" ಎಂದರು.

ಸಂಪೂರ್ಣ ರಾಜಕೀಯ ಪ್ರೇರಿತ
ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಜೈನ್ ಬಂಧನವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಸ್ವಾಗತಿಸಿವೆ. ಕೇಜ್ರಿವಾಲ್ ಜೈನ್‌ರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಈಗಾಗಲೇ ಒತ್ತಾಯಿಸಿದೆ. "ಪಂಜಾಬ್ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಜನವರಿಯಲ್ಲಿ ಜೈನ್‌ರನ್ನು ಇಡಿ ಬಂಧಿಸಬಹುದು ಎಂದು ಮೂಲಗಳಿಂದ ನಾನು ತಿಳಿದುಕೊಂಡಿದ್ದೇ" ಎಂದು ಕೇಜ್ರಿವಾಲ್ ಹೇಳಿದರು. ಎಎಪಿ ಭ್ರಷ್ಟಾಚಾರದ ದೂರುಗಳ ಬಗ್ಗೆ ಪ್ರಮಾಣಿಕತೆಯಿಂದ ಇದೆ. ಇಡಿಯ ಈ ಕ್ರಮ ಸಂಪೂರ್ಣ ರಾಜಕೀಯ ಪ್ರೇರಿತ ಎಂದರು.

ಸಚಿವ ಸ್ಥಾನದಿಂದ ತೆಗೆದು ಸಿಬಿಐಗೆ ವಹಿಸಿದೆ
"ಪಂಜಾಬ್‌ನಲ್ಲಿ ಸಚಿವರೊಬ್ಬರ ಆಡಿಯೋ ಇರುವುದನ್ನು ನೀವು ನೋಡಿದ್ದೀರಿ. ಅದರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ, ಯಾವುದೇ ಸಂಸ್ಥೆ ಅಥವಾ ವಿರೋಧ ಪಕ್ಷಗಳಿಗೆ ತಿಳಿದಿರಲಿಲ್ಲ, ನಾವು ಅದನ್ನು ಹತ್ತಿಕ್ಕಬಹುದಿತ್ತು. ಆದರೆ ನಾವೇ ಕ್ರಮ ಕೈಗೊಂಡು ಅವರನ್ನು ಬಂಧಿಸಿದ್ದೇವೆ" ಎಂದು ಪಂಜಾಬ್ ಪ್ರಕರಣವನ್ನು ಕೇಜ್ರಿವಾಲ್ ಉಲ್ಲೇಖಿಸಿದರು. "ಐದು ವರ್ಷಗಳ ಹಿಂದೆ ನನ್ನ ಸಚಿವರೊಬ್ಬರ ಧ್ವನಿಮುದ್ರಣ ನನಗೆ ಬಂದಿತ್ತು. ನಾನು ಅವರನ್ನು ಸಚಿವ ಸ್ಥಾನದಿಂದ ತೆಗೆದು ಪ್ರಕರಣ ಸಿಬಿಐಗೆ ವಹಿಸಿದೆ" ಎಂದು ಕೇಜ್ರಿವಾಲ್ ಹೇಳಿದರು.

ಸಚಿವರು ಆರೋಪ ಮುಕ್ತವಾಗಿ ಹೊರ ಬರುತ್ತಾರೆ
2015ರಲ್ಲಿ ಕೇಜ್ರಿವಾಲ್ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ತಮ್ಮ ಆಹಾರ ಇಲಾಖೆ ಸಚಿವ ಅಸಿಮ್ ಅಹ್ಮದ್ ಖಾನ್‌ರನ್ನು ವಜಾಗೊಳಿಸುವುದಾಗಿ ಘೋಷಿಸಿದ್ದರು. "ಸತ್ಯೇಂದ್ರ ಜೈನ್ ಸತ್ಯದ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ದೇವರು ನಮ್ಮೊಂದಿಗಿದ್ದಾನೆ. ಸಚಿವರು ಆರೋಪ ಮುಕ್ತವಾಗಿ ಹೊರ ಬರುತ್ತಾರೆ ಮತ್ತು ನ್ಯಾಯಾಂಗವು ಅವರಿಗೆ ನ್ಯಾಯವನ್ನು ನೀಡುತ್ತದೆ" ಎಂದು ಕೇಜ್ರಿವಾಲ್ ಹೇಳಿದರು. ಸೋಮವಾರ ಜೈನ್ ಬಂಧಿಸಿದಾಗ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಎಎಪಿ ಸಂಸದ ಸಂಜಯ್ ಸಿಂಗ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಸುಳ್ಳು ಪ್ರಕರಣದಲ್ಲಿ ಇಡಿ ಬಂಧಿಸಿದೆ
ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭೀತಿಯಲ್ಲಿರುವುದರಿಂದ ಎಎಪಿಯ ಉಸ್ತುವಾರಿಯಾಗಿ ಸತ್ಯೇಂದ್ರ ಜೈನ್‌ರನ್ನು ಈ ಸುಳ್ಳು ಪ್ರಕರಣದಲ್ಲಿ ಇಡಿ ಬಂಧಿಸಿದೆ ಎಂದು ಸಿಸೋಡಿಯಾ ಹೇಳಿದ್ದಾರೆ. ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷದ (ಎಎಪಿ) ಮಾನಹಾನಿ ಮಾಡುವ ಉದ್ದೇಶದಿಂದ ಜೈನ್ ಬಂಧನವಾಗಿದೆ ಎಂದು ಸಂಸದ ಸಂಜಯ್ ಸಿಂಗ್ ಹೇಳಿದ್ದರು.












Click it and Unblock the Notifications