ನಬಾರ್ಡ್ ಯೋಜನೆಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ; ಸಿಎಂ ಬೊಮ್ಮಾಯಿ
ನವದೆಹಲಿ, ಅಕ್ಟೋಬರ್ 8: "ನಬಾರ್ಡ್ ಯೋಜನೆಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಿಎಸ್‌ಟಿಗೆ ಸಂಬಂಧಿಸಿದ ಸಚಿವರ ಸಮಿತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
"ನಬಾರ್ಡ್ ಯೋಜನೆಗಳಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಲು ಸುದೀರ್ಘ ಚರ್ಚೆಯಾಯಿತು. ಮೂಲಭೂತಸೌಕರ್ಯ ಅಭಿವೃದ್ಧಿಗೆ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿಗೆ ಅನುದಾನ ನೀಡಲು ಮನವಿ ಮಾಡಲಾಗಿದೆ. ನಬಾರ್ಡ್ ಮತ್ತು SIDBIಯ ಕರ್ನಾಟಕದ ಯೋಜನೆಗಳ ಬಗ್ಗೆ ನವೆಂಬರ್ ಮೊದಲನೆ ವಾರದಲ್ಲಿ ನಡೆಯುವ ಸಭೆಯಲ್ಲಿ ಕೇಂದ್ರ ವಿತ್ತ ಸಚಿವರು ಈ ಬಗ್ಗೆ ಸೂಕ್ತ ನಿರ್ದೇಶನ ನೀಡಲಿದ್ದಾರೆ. SIDBIಯಿಂದ ಸಣ್ಣ ಕೈಗಾರಿಕೆಗೆ ಹಾಗೂ ಮೈಕ್ರೋ ಫೈನಾನ್ಸ್ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತಿದೆ," ಎಂದು ತಿಳಿಸಿದರು.

"ಜಿಎಸ್‌ಟಿ ಸಚಿವರ ಸಮಿತಿಯ ರಚನೆ, ಜವಾಬ್ದಾರಿ, ಕಾರ್ಯಚಟುವಟಿಕೆಗಳ ಬಗ್ಗೆ ಕೇಂದ್ರ ವಿತ್ತ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಸಮಿತಿಯ ಪ್ರಥಮ ಸಭೆಯನ್ನು ಸದ್ಯದಲ್ಲಿಯೇ ಕೈಗೊಳ್ಳಲಿದ್ದೇನೆ," ಎಂದರು.
"ರಾಜ್ಯಕ್ಕೆ ಜಿಎಸ್‌ಟಿಯ ಪರಿಹಾರ ಮೊತ್ತ 12,000 ಕೋಟಿ ರೂ. ದೊರಕಿದ್ದು, ಮಾರ್ಚ್ 2021ರವರೆಗಿನ 11,800 ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ಕಂತಿನಲ್ಲಿ ಕೊಡಲು ಪ್ರಾರಂಭಿಸಿದ್ದಾರೆ. ಈ ವರ್ಷ 18,000 ಕೋಟಿ ರೂ. ಕೇಂದ್ರ ಸರ್ಕಾರ ನೀಡುತ್ತಿದೆ. ಈ ವರ್ಷ ಜಿಎಸ್‌ಟಿ ಸಂಗ್ರಹ ಸುಧಾರಣೆ ಕಂಡಿರುವುದರಿಂದ ರಾಜ್ಯಕ್ಕೆ ಜಿಎಸ್‌ಟಿ ಪರಿಹಾರ ಹೆಚ್ಚಿಗೆ ದೊರೆಯಲಿದೆ," ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ರಸಗೊಬ್ಬರ ಕೊರತೆ ನಿವಾರಣೆಗೆ ಕೇಂದ್ರ ಸಚಿವರ ಭರವಸೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ನವದೆಹಲಿಯಲ್ಲಿ ಆರೋಗ್ಯ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್‌ಸುಖ್ ಮಾಂಡವೀಯರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ರಬಿ (ಹಿಂಗಾರು) ಹಂಗಾಮಿಗೆ ಸುಮಾರು 32 ಸಾವಿರ ಮೆಟ್ರಿಕ್ ಟನ್ ಡಿಎಪಿ ಹಾಗೂ ಸುಮಾರು 10 ಸಾವಿರ ಮೆಟ್ರಿಕ್ ಟನ್ ಎಂಓಪಿ ಕೊರತೆ ಇದ್ದು, ಇದನ್ನು ಒದಗಿಸುವಂತೆ ಮನವಿ ಮಾಡಲಾಯಿತು. ಇದನ್ನು ಒಂದು ವಾರದೊಳಗೆ ಒದಗಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ," ಎಂದರು.
"ರಾಜ್ಯದ ಲಸಿಕೆ ಅಭಿಯಾನದ ಕುರಿತು ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಳೆದ ಒಂದು ತಿಂಗಳಲ್ಲಿ 1.48 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಈ ಕುರಿತು ಅವರು ಸಂತೋಷ ವ್ಯಕ್ತಪಡಿಸಿದರು. ಈವರೆಗೆ ಶೇ.81ರಷ್ಟು ಮೊದಲ ಡೋಸ್ ಹಾಗೂ ಶೇ.37ರಷ್ಟು ಎರಡನೇ ಡೋಸ್ ನೀಡಲಾಗಿದೆ. 51 ಲಕ್ಷ ಡೋಸ್ ದಾಸ್ತಾನು ಲಭ್ಯವಿದ್ದು, ಎರಡನೇ ಡೋಸ್ ನೀಡಲು ಒತ್ತು ನೀಡಲಾಗುವುದು," ಎಂದು ಮಾಹಿತಿ ನೀಡಿದರು.

"ಡಿಸೆಂಬರ್ ಅಂತ್ಯದೊಳಗೆ ಮೊದಲ ಡೋಸ್ ಶೇ.90 ಹಾಗೂ ಎರಡನೇ ಡೋಸ್ ಕನಿಷ್ಠ ಶೇ.70 ಕೊಡಬೇಕೆಂಬ ಗುರಿ ಇದೆ," ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
"ನಿಮ್ಹಾನ್ಸ್ ಘಟಿಕೋತ್ಸವಕ್ಕಾಗಿ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದು, ರಾಜ್ಯದ ಆರೋಗ್ಯ ಸೇವಾ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಬೇಡಿಕೆಗಳ ಕುರಿತು ಪರಿಶೀಲನೆ ನಡೆಸಿ, ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ," ಎಂದು ಸಿಎಂ ಬೊಮ್ಮಾಯಿ ಹೇಳಿದರು.












Click it and Unblock the Notifications