'ಅಕ್ಷಯ್ ಕುಮಾರ್ ಓಕೆ, ಕತ್ರಿನಾ ಕೈಫ್ ನಾಟ್ ಓಕೆ ಯಾಕೆ?'
ನವದೆಹಲಿ, ಡಿಸೆಂಬರ್ 10: ಪೌರತ್ವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು, ಮಸೂದೆ ವಿರುದ್ಧ ಪ್ರತಿಭಟನೆಗಳು ಕೇಳಿಬರುತ್ತಿವೆ. ಮಸೂದೆ ಕುರಿತು ಹಲವರು ಹಲವು ರೀತಿಯ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಮಸೂದೆಯ ಪರವಾಗಿಯೂ ವಾದಗಳಿವೆ.
ಕಾಂಗ್ರೆಸ್‌ನ ಮುಖಂಡರೊಬ್ಬರು ಪೌರತ್ವ ಮಸೂದೆ (ಸಿಎಬಿ) ಬಗ್ಗೆ ಮಾಡಿರುವ ಟೀಕೆ, ವಿಡಂಬನಾತ್ಮಕ ಟೀಕೆ, ಮಸೂದೆಯಲ್ಲಿನ ಹುಳುಕಿನ ಬಗ್ಗೆಯೂ ಹೇಳುತ್ತಿದೆ.
ಕಾಂಗ್ರೆಸ್ ಮುಖಂಡ ಮಾಜಿ ಸಂಸದ ಸಂಜಯ್ ನಿರುಪಮ್ ಪೌರತ್ವ ಮಸೂದೆ ಬಗ್ಗೆ ಮಾತನಾಡಿ, 'ಎನ್‌ಸಿಆರ್ (ನ್ಯಾಷನಲ್ ಸಿಟಿಜನ್ ರಿಜಿಸ್ಟ್ರೇಷನ್) ಎಂಬುವುದು ದೇಶದ ಜನರ ನೊಂದಣಿ ಆದರೆ ಸಿಎಬಿ (ಪೌರತ್ವ ಮಸೂದೆ) ಹಾಗಲ್ಲ, ಇದರ ಬಗ್ಗೆ ನಮ್ಮ ವಿರೋಧವಿದೆ' ಎಂದಿದ್ದಾರೆ.

ಪೌರತ್ವ ಮಸೂದೆಯಲ್ಲಿರುವ ತಾರತಮ್ಯದ ಬಗ್ಗೆ ಮಾತನಾಡಿರುವ ಅವರು, 'ಅಕ್ಷಯ್ ಕುಮಾರ್ ಗೆ ಒಂದು ನ್ಯಾಯ ಕತ್ರಿನಾ ಕೈಫ್ ಗೆ ಒಂದು ನ್ಯಾಯವಾ?' ಎಂದು ಪ್ರಶ್ನಿಸಿದ್ದಾರೆ.
'ನನ್ನ ಗೆಳೆಯ ಅಕ್ಷಯ್ ಕುಮಾರ್ ಕೆನಡಾದ ನಾಗರೀಕ, ಆತ ಭಾರತದ ನಾಗರೀಕನಾಗಲು ಬಯಸಿ ಅರ್ಜಿ ಸಲ್ಲಿಸಿದರೆ ಪೌರತ್ವ ಕಾಯ್ದೆಯ ಅಡಿ ಆತನಿಗೆ ಸರ್ಕಾರ ಅವಕಾಶ ನೀಡುತ್ತದೆ. ಅದೇ ನಟಿ ಕತ್ರೀನಾ ಕೈಫ್ ವಿದೇಶಿ ಪೌರತ್ವ ಹೊಂದಿರುವ ಮುಸ್ಲಿಂ, ಆಕೆಯನ್ನು ಹೊರದಬ್ಬಲಾಗುತ್ತದೆ' ಇದು ಯಾವ ರೀತಿಯ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.
ಪಾಕಿಸ್ತಾನ, ಅಪ್ಘನಿಸ್ತಾನ, ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ನಿರಾಶ್ರಿತರನ್ನು ಹೊರಗಟ್ಟುವ ಮಸೂದೆ ಇದಾಗಿದೆ. ಮಸೂದೆಯು ಅಂಗೀಕಾರವಾದರೆ ಭಾರತದಲ್ಲಿರುವ ಬಾಂಗ್ಲಾ, ಪಾಕಿಸ್ತಾನ, ಅಪ್ಘಾನಿಸ್ತಾನ ಮುಸ್ಲಿಂರನ್ನು ಹೊರಗಟ್ಟಲಾಗುತ್ತದೆ. ಬೇರೆ ಧರ್ಮದವರನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ.
ಈ ಮಸೂದೆಯು ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ಮಾಡಿರುವ ಮಸೂದೆ ಎಂದು ಹಾಗೂ ಇದು ಸಂವಿಧಾನದ ಆಶಯದ ವಿರುದ್ಧವಾಗಿದೆಯೆಂದು ವಿಪಕ್ಷಗಳು ಆಕ್ಷೇಪ ಎತ್ತಿವೆ.












Click it and Unblock the Notifications