ಕೇರಳದ ನಂತರ ಈಗ ದೆಹಲಿಯಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆ
ನವದೆಹಲಿ, ಜುಲೈ24: ಮಂಕಿಪಾಕ್ಸ್ ಪ್ರಕರಣಗಳ ಹೆಚ್ಚಳದಿಂದ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತುಪರಿಸ್ಥಿತಿ ಘೋಷಣೆ ಮಾಡಿದ ಬೆನ್ನಲ್ಲೇ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ.
ಆತಂಕಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ಪತ್ತೆಯಾದ ಮೊದಲನೇ ಮಂಕಿಪಾಕ್ಸ್ ಪ್ರಕರಣ ಇದಾಗಿದೆ. ಈ ಮೂಲಕ ಭಾರತದಲ್ಲಿ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದೆ. ಈ ಮೊದಲಿನ ಮೂರು ಮಂಕಿಪಾಕ್ಸ್ ಪ್ರಕರಣಗಳು ಕೇರಳ ರಾಜ್ಯದಲ್ಲಿ ಮಾತ್ರ ಪತ್ತೆಯಾಗಿದ್ದವು. ಈಗ ನಾಲ್ಕನೇ ಪ್ರಕರಣ ದೆಹಲಿಯಲ್ಲಿ ಪತ್ತೆಯಾಗಿದೆ ಎಂದು ಭಾನುವಾರ ತಿಳಿದುಬಂದಿದೆ.
ಸೋಂಕಿಯ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಪಶ್ಚಿಮ ದೆಹಲಿ ನಿವಾಸಿ ಎಂದು ತಿಳಿದುಬಂದಿದೆ. ಮೇ ತಿಂಗಳಿನಲ್ಲಿ ಪ್ರತಿ ವಾರಕ್ಕೆ ಎರಡರಿಂದ ಮೂರು ಶಂಕಿತ ಮಾದರಿಗಳು ಪರೀಕ್ಷೆಗೆ ಬರುತ್ತಿದ್ದವು. ಆದರೆ ಈಗ ದಿನಕ್ಕೆ ಎರಡು-ಮೂರು ಮಾದರಿಗಳು ಮಂಕಿಪಾಕ್ಸ್ ಕಾಯಿಲೆ ಪತ್ತೆಗೆ ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಂಕಿಪಾಕ್ಸ್ ಕಾಯಿಲೆ ಪತ್ತೆಗೆ ದೇಶಾದ್ಯಂತ 16 ಪ್ರಯೋಗಾಲಯಗಳನ್ನು ಮೀಸಲಿಡಲಾಗಿದೆ. ಅದರಲ್ಲಿ ಎರಡು ಕೇರಳದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿಶ್ವದಾದ್ಯಂತ ಮಂಕಿಪಾಕ್ಸ್ ಪ್ರಕರಣಗಳ ಹೆಚ್ಚಳದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಆತಂಕ ವ್ಯಕ್ತಪಡಿಸಿದ ವಿಶ್ವಸಂಸ್ಥೆ; ವಿಶ್ವ ಆರೋಗ್ಯ ಸಂಸ್ಥೆ (WHO) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಶನಿವಾರ ಮಂಕಿಪಾಕ್ಸ್ ಪ್ರಕರಣ ಜಾಗತಿಕವಾಗಿ ಹೆಚ್ಚಳವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಮಂಕಿಪಾಕ್ಸ್ ಕಾಯಿಲೆ ನಿರ್ಮೂಲನೆಗೆ ಜಾಗತಿಕವಾಗಿ ಎಲ್ಲಾ ರಾಷ್ಟ್ರಗಳು ಸಹಕಾರ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ 60 ಸದಸ್ಯ ರಾಷ್ಟ್ರಗಳಿಂದ ಈವವರೆಗೂ 16,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ಮತ್ತು ಐದು ಸಾವುಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಮಂಕಿಪಾಕ್ಸ್‌ಗೆ ಪ್ರಸ್ತುತ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗಿಗಳು ಸಾಮಾನ್ಯವಾಗಿ 21 ದಿನಗಳ ಕ್ವಾರಂಟೈನ್‌ನಲ್ಲಿ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತದೆ. ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ 21 ದಿನದಲ್ಲಿ ಸೋಂಕು ಕಾಣಿಸಿಕೊಂಡರೆ ಅವರಿಗೂ ಹಬ್ಬಿದೆ ಎಂದು ಪರಿಗಣಿಸಲಾಗುತ್ತದೆ.












Click it and Unblock the Notifications