ದೆಹಲಿಗಾಗಿ ಆಪ್‌ನಿಂದ 70 ಅಂಶಗಳ ಪ್ರಣಾಳಿಕೆ ಬಿಡುಗಡೆ
ನವದೆಹಲಿ, ಜ. 31: ನವದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಬಿಜೆಪಿ ಪ್ರಣಾಳಿಕೆ ಘೋಷಣೆ ಕೈ ಬಿಟ್ಟ ಮರುದಿನವೇ ಆಮ್ ಆದ್ಮಿ ತನ್ನ ಭರವಸೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ದೆಹಲಿಗಾಗಿ 70 ಅಂಶಗಳನ್ನು ಜನರ ಮುಂದಿಟ್ಟ ಕೇಜ್ರಿವಾಲ್, "ಆಮ್ ಆದ್ಮಿ ಪಕ್ಷವು 20013-14ರಲ್ಲಿ ನಡೆಸಿದ 49 ದಿನಗಳ ಅಧಿಕಾರಾವಧಿಯಲ್ಲಿ ಮೊದಲು ನೀಡಿದ್ದ ಭರವಸೆಗಳನ್ನು ಈಡೇರಿಸಿತ್ತು. ಈ ಬಾರಿಯೂ ಎಲ್ಲ ಭರವಸೆ ಈಡೇರಿಸ್ತೇವೆ" ಎಂದು ಹೇಳಿದ್ದಾರೆ. ಹಲವು ತಿಂಗಳುಗಳ ಕಾಲ ಅಧ್ಯಯನ ನಡೆಸಿದ ನಂತರ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ನವದೆಹಲಿಯನ್ನು ಮಾದರಿ ಮಾಡುವುದಾಗಿ ಕೇಜ್ರಿವಾಲ್ ಭರವಸೆ ನೀಡಿದ್ದಾರೆ. [ಕೇಜ್ರಿವಾಲ್ ಗೆ ನೂಪುರ್ ನಡುಕ]

ಆಪ್ ಪ್ರಣಾಳಿಕೆಯು ಮಹಿಳೆಯರ ರಕ್ಷಣೆ, ಹಿರಿಯರು ಹಾಗೂ ಯುವಕರ ಕಲ್ಯಾಣ, ಬಡಾವಣೆಗಳ ಅಭಿವೃದ್ಧಿ, ವಕೀಲರು ಹಾಗೂ ಕೆಲಸಗಾರರ ಕಲ್ಯಾಣ, ಸಾಮಾನ್ಯ ಗೃಹ ಸೌಲಭ್ಯ, ರೈತರು ಮತ್ತು ಇತರ ವಿವಾದಗಳ ಕುರಿತು ಪ್ರಣಾಳಿಕೆಯಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ನವದೆಹಲಿಯನ್ನು ಪ್ರವಾಸೋದ್ಯಮ, ವ್ಯಾಪಾರ ಹಾಗೂ ಸೇವೆಗಳ ಕೇಂದ್ರವಾಗಿ ಮಾಡುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ. [ಬಿಜೆಪಿ ಪ್ರಶ್ನೆಗೆ ಅರವಿಂದ್ ವ್ಯಂಗ್ಯ ನಗೆ]
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಪ್ರಣಾಳಿಕೆಯಲ್ಲಿ ಎಂದಿಗೂ ಸಾಮಾನ್ಯರ ನೈಜ ಅಗತ್ಯಗಳ ಕುರಿತು ಲಕ್ಷ್ಯ ವಹಿಸಿಲ್ಲ ಎಂದು ಆರೋಪಿಸಿದರು. ಅಲ್ಲದೆ, ಬಿಜೆಪಿಗೆ ತಾನು ಸಿದ್ಧಪಡಿಸುವ ಪ್ರಣಾಳಿಕೆಯು ಜನರ ಬೇಡಿಕೆಗೆ ತಕ್ಕಂತೆ ಇರುವ ಕುರಿತು ನಂಬಿಕೆ ಇಲ್ಲ. ಆದ್ದರಿಂದಲೇ ಬಿಡುಗಡೆ ಮಾಡುವ ಧೈರ್ಯ ತೋರಿಲ್ಲ ಎಂದು ವ್ಯಂಗ್ಯವಾಡಿದರು. [ದೆಹಲಿ ಗದ್ದುಗೆ ಮತ್ತೆ ಆಮ್ ಆದ್ಮಿಗೆ?]
ಪ್ರಣಾಳಿಕೆಯ ಪ್ರಮುಖ ಅಂಶಗಳು ಹೀಗಿವೆ...
- ದೆಹಲಿಯಲ್ಲಿ ಜನ ಲೋಕಪಾಲ ಕಾಯಿದೆ
- ಜನರಿಗೆ ನೇರವಾಗಿ ಆಡಳಿತಾಧಿಕಾರ ನೀಡಲು 'ಸ್ವರಾಜ್ ಕಾಯಿದೆ' ಜಾರಿಗೆ
- ವಿದ್ಯುತ್ ಬಿಲ್ ದರ ಅರ್ಧಕ್ಕಿಂತ ಕಡಿತ
- ಸಿಎಜಿಯಿಂದ DISCOMS ನ ಸಮಗ್ರ ಆಡಿಟ್
- ಪ್ರತಿ ಮನೆಗೆ ತಿಂಗಳಿಗೆ 20 ಸಾವಿರ ಲೀ. ಉಚಿತ ನೀರು ಪೂರೈಕೆ
- ನವದೆಹಲಿಗಾಗಿ ಪ್ರತ್ಯೇಕ ವಿದ್ಯುತ್ ಉತ್ಪಾದನೆ ಕೇಂದ್ರ ಸ್ಥಾಪನೆ
- ನವದೆಹಲಿಗೆ ಸಂಪೂರ್ಣ ರಾಜ್ಯತ್ವಕ್ಕಾಗಿ ಹೋರಾಟ
- ನವೀಕರಿಸಬಹುದಾದ ಮತ್ತು ಪರ್ಯಾಯ ಇಂಧನ ಮೂಲವಾದ ಸೋಲಾರ್ ವಿದ್ಯುತ್ ಉಪಯೋಗಕ್ಕೆ ಒತ್ತು
- ಯಮುನಾ ನದಿ ಸ್ವಚ್ಛತೆ
- ಕೈಗೆಟುಕುವ ದರದಲ್ಲಿ ಸ್ವಚ್ಛ ಕುಡಿಯುವ ನೀರು ಪೂರೈಕೆ
- ನವದೆಹಲಿಯಲ್ಲಿ ವೈ ಫೈ ಸೌಲಭ್ಯ
- ಮಹಿಳೆಯರ ರಕ್ಷಣೆಗಾಗಿ ನಗರದಾದ್ಯಂತ ಸಿಸಿಟಿವಿ ಕ್ಯಾಮರಾ
- ನಿವೃತ್ತಿ ನಂತರದ ಯೋಜನೆಗೆ ಒತ್ತು
- ನವದೆಹಲಿಯನ್ನು ಪ್ರವಾಸಿ, ಶಿಕ್ಷಣ, ವ್ಯಾಪಾರ ಮತ್ತು ಸೇವಾ ಹಬ್ ಮಾಡಲು ಯತ್ನ
- ಕೈಗೆಟುಕುವ ವೆಚ್ಚದಲ್ಲಿ ಶಿಕ್ಷಣ ಸೌಲಭ್ಯ












Click it and Unblock the Notifications