ದೆಹಲಿ ಸಿಎಂ ಕೇಜ್ರಿವಾಲ್ ಮನೆ ಮೇಲೆ ದಾಳಿ ನಡೆಸಿದ 8 ಮಂದಿ ಬಂಧನ
ನವದೆಹಲಿ, ಮಾರ್ಚ್ 31: ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಗುರುವಾರ ಎಂಟು ಜನರನ್ನು ಬಂಧಿಸಲಾಗಿದೆ. ಇನ್ನೂ ಕೆಲವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಒಟ್ಟು ಆರು ತಂಡಗಳನ್ನು ರಚಿಸಲಾಗಿದೆ.
ಮಾರ್ಚ್ 30ರಂದು ನವದೆಹಲಿಯಲ್ಲಿ ಇರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಗೃಹ ಕಚೇರಿ ಧ್ವಂಸವನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಸಿಎಂ ಮನೆ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳಿಗೆ ಸಂಬಂಧಿಸಿದಂತೆ ಸ್ವತಂತ್ರ, ನ್ಯಾಯಸಮ್ಮತ ಹಾಗೂ ಕಾಲಮಿತಿಯ ಅಪರಾಧ ತನಿಖೆಯನ್ನು ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ಸೌರಭ್ ಭಾರದ್ವಾಜ್ ಮನವಿ ಮಾಡಿದ್ದಾರೆ.

ದೆಹಲಿ ಪೊಲೀಸರ ಸಹಭಾಗಿತ್ವದಲ್ಲಿಯೇ ಕೃತ್ಯ:
ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಸೌರಭ್ ಭಾರದ್ವಾಜ್ ಆರೋಪಿಸಿದ್ದು, "ದೆಹಲಿ ಪೋಲೀಸರ ನಿಗೂಢ ಸಹಭಾಗಿತ್ವದಲ್ಲಿಯೇ ಈ ಕೃತ್ಯವನ್ನು ನಡೆಸಿದಂತೆ ತೋರುತ್ತದೆ," ಎಂದು ಮನವಿಯಲ್ಲಿ ದೂಷಿಸಲಾಗಿದೆ. ಸದ್ಯ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ.
ಅರವಿಂದ್ ಕೇಜ್ರಿವಾಲ್ ಕೊಲೆಗೆ ಸಂಚು ಎಂದು ಆರೋಪ:
ಬುಧವಾರ ನಡೆದ ಘಟನೆಯನ್ನು ಉಲ್ಲೇಖಿಸಿದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಸಂಚು ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಆಪ್ ಮತ್ತೊಬ್ಬ ನಾಯಕ ಸೌರಭ್ ಭಾರದ್ವಾಜ್ ಕೂಡ ಕೇಜ್ರಿವಾಲ್ ಅವರ ಕೊಲೆಗೆ ಪಿತೂರಿ ನಡೆಸಲಾಗುತ್ತಿದೆ ಎಂದು ದೂಷಿಸಿದರು.

ದೆಹಲಿಯ ಸಿಎಂ ನಿವಾಸದ ಬಳಿ ಬುಧವಾರ ನಡೆದ ಘಟನೆ:
ಕಾಶ್ಮೀರ್ ಫೈಲ್ಸ್ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಾಶ್ಮೀರದ ಪಂಡಿತರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರ ಜೊತೆಗೆ ಸಂಘರ್ಷಕ್ಕಿಳಿದ ಕೆಲವರು ಸಿಎಂ ನಿವಾಸದ ಬಳಿ ಸಿಸಿ ಕ್ಯಾಮೆರಾಗಳನ್ನು ಪೀಸ್ ಪೀಸ್ ಮಾಡಿದರು. ಮನೆ ಗೇಟ್ ಮೇಲೆ ಕೇಸರಿ ಬಣ್ಣವನ್ನು ಹಚ್ಚಿಸಿದರು.
ದೆಹಲಿ ವಿಧಾನಸಭೆ ಕಲಾಪದಲ್ಲಿ ಕಾಶ್ಮೀರಿ ಪಂಡಿತರ ಬಗ್ಗೆ ಅವಹೇಳನ ಮಾಡಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಸಿಎಂ ಕೇಜ್ರಿವಾಲ್ ಕ್ಷಮಾಪಣೆ ಕೇಳಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಆಗ್ರಹಿಸಿದರು.












Click it and Unblock the Notifications