ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಫೆಬ್ರವರಿ.01ರಂದು ಗಲ್ಲುಶಿಕ್ಷೆ
ನವದೆಹಲಿ, ಜನವರಿ.17: 2012ರ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಫೆಬ್ರವರಿ.01ರ ಬೆಳಗ್ಗೆ 6 ಗಂಟೆಗೆ ಗಲ್ಲುಶಿಕ್ಷೆ ವಿಧಿಸುವಂತೆ ದೆಹಲಿಯ ಹೈಕೋರ್ಟ್ ಹೊಸದಾಗಿ ಡೆತ್ ವಾರಂಟ್ ಹೊರಡಿಸಿದೆ.
ಇತ್ತೀಚಿಗಷ್ಟೇ ಅಪರಾಧಿಗಳಿಗೆ ಜನವರಿ.22ರ ಬೆಳಗ್ಗೆ ಏಳು ಗಂಟೆಗೆ ಗಲ್ಲುಶಿಕ್ಷೆ ನೀಡುವಂತೆ ಕೋರ್ಟ್ ವಾರಂಟ್ ಹೊರಡಿಸಿತ್ತು. ಇದರ ಬೆನ್ನಲ್ಲೇ ಇಬ್ಬರು ಅಪರಾಧಿಗಳು ಸುಪ್ರೀಂಕೋರ್ಟ್ ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದರು.
ಮುಕೇಶ್ ಹಾಗೂ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಇದರ ಲೆಫ್ಟಿನೆಂಟ್ ಗವರ್ನರ್ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡಾ ಮುಕೇಶ್ ಕುಮಾರ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು.

ಗಲ್ಲುಶಿಕ್ಷೆ ದಿನಾಂಕ ಮುಂದೂಡಲು ಮನವಿ:
ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ ಮುಕೇಶ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ತಿರಸ್ಕರಿಸಿದರು. ಇದರ ಬೆನ್ನಲ್ಲೇ ಅಪರಾಧಿಗಳ ಪರ ವಕೀಲರು ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲೇರಿದ್ದರು. ನಾಲ್ವರು ಅಪರಾಧಿಗಳ ಗಲ್ಲುಶಿಕ್ಷೆ ದಿನಾಂಕವನ್ನು ಮುಂದೂಡುವಂತೆ ಹೈಕೋರ್ಟ್ ಗೆ ಮನವಿ ಮಾಡಿಕೊಂಡರು.
ಮಧ್ಯಾಹ್ನ 4.30ರ ನಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸತೀಶ್ ಕುಮಾರ್ ನೇತೃತ್ವದ ಪೀಠವು ಹೊಸ ಡೆತ್ ವಾರಂಟ್ ಜಾರಿಗೊಳಿಸಿತು. ಫೆಬ್ರವರಿ.01ರಂದು ಬೆಳಗ್ಗೆ 6 ಗಂಟೆಗೆ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಆದೇಶಿಸಿತು.
ನಿರ್ಭಯಾ ಪ್ರಕರಣದ ಅಪರಾಧಿಗಳಾದ ಮುಕೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31) ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.












Click it and Unblock the Notifications