Nanjangud Elections: ‘ದಕ್ಷಿಣ ಕಾಶಿ’ಯ ಚುನಾವಣೆಯಲ್ಲಿ ಅನುಕಂಪದ ಅಲೆಯ ಪ್ರಭಾವ?
ರಸಬಾಳೆಗೆ ಹೆಸರಾಗಿರುವ, ಜಿಲ್ಲಾ ಕೇಂದ್ರದಿಂದ ಸುಮಾರು 23 ಕಿಲೋ ಮೀಟರ್ ದೂರದಲ್ಲಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರ ಚುನಾವಣೆಗೆ ಮೊದಲೇ ರಾಜ್ಯ ರಾಜಕೀಯದ ಕೇಂದ್ರ ಬಿಂದುವಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಆರ್.ಧ್ರುವನಾರಾಯಣ್ ಅವರ ಅಕಾಲಿಕ ಮರಣ ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ರಾಜಕೀಯ ನಾಯಕರಿಗೂ ನೋವು ತರಿಸಿತ್ತು.
2023ರ ವಿಧಾನಸಭಾ ಚುನಾವಣೆಯಲ್ಲಿ ಆರ್.ಧ್ರುವನಾರಾಯಣ್ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಕೇಳಿದ್ದರು ಎಂಬ ಮಾತು ರಾಜ್ಯ ರಾಜಕೀಯ ವಲಯದಲ್ಲಿ ಹರಿದಾಡಿದ್ದವು. ಈಗ ದಿವಂಗತ ಆರ್.ಧ್ರುವನಾರಾಯಣ್ ಪುತ್ರ ದರ್ಶನ್ ಗೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ.

ಹಾಲಿ ಬಿಜೆಪಿ ಶಾಸಕ ಹರ್ಷವರ್ಧನ್ ಮತ್ತೆ ಅಖಾಡ ಪ್ರವೇಶಿಸುವುದು ಬಹುತೇಕ ಪಕ್ಕಾ ಆಗಿದ್ದು, ಜೆಡಿಎಸ್ ಪಕ್ಷದ ಅಭ್ಯರ್ಥಿ ಇನ್ನೂ ಫೈನಲ್ ಆಗಿಲ್ಲ. ಹೀಗಾಗಿ ಈ ಬಾರಿಯ ನಂಜನಗೂಡು ಕ್ಷೇತ್ರದ ಚುನಾವಣೆ ಕಾವು ಮತ್ತಷ್ಟು ಹೆಚ್ಚಾಗಿದೆ. ತ್ರಿಕೋನ ಸ್ಪರ್ಧೆ ಏರ್ಪಡುವ ನಿರೀಕ್ಷೆಯಲ್ಲಿ ಕ್ಷೇತ್ರದ ಜನರಿದ್ದಾರೆ.
ಮೈಸೂರು ಜಿಲ್ಲೆಯ ಪ್ರಮುಖ ತಾಲೂಕುಗಳಲ್ಲಿ ಒಂದಾಗಿರುವ ನಂಜನಗೂಡು ವಿಧಾನಸಭಾ ಕ್ಷೇತ್ರ ಹಲವು ಐತಿಹಾಸಿಕ ಸ್ಥಳಗಳನ್ನ ಹೊಂದಿದೆ.
ಜೊತೆಗೆ ನೈಸರ್ಗಿಕವಾಗಿ ಫಲವತ್ತಾದ ಪ್ರದೇಶವೂ ಇದಾಗಿದೆ. ರಾಜಕೀಯವಾಗಿಯೂ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಾ ಬಂದಿದ್ದು, 1957ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಿ.ಮಹದೇವಯ್ಯ ಮೊದಲ ಬಾರಿಗೆ ಗೆಲುವು ಕಂಡು, ಕ್ಷೇತ್ರದ ಮೊದಲ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 1962ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಎನ್.ರಾಚಯ್ಯ ಗೆಲುವು ಸಾಧಿಸಿದರೆ, 1967ರಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀಕಂಠಯ್ಯ ಈ ಕ್ಷೇತ್ರದಿಂದ ಗೆದ್ದರು.
ಕಾಂಗ್ರೆಸ್ ಪಕ್ಷದಿಂದ ಕೆ.ಜಿ.ಶಿವಯ್ಯ
1972 ಹಾಗೂ 1978ರಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ಜಿ.ಶಿವಯ್ಯ ಸತತ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1983ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ.ಮಹದೇವ್ ನಂಜನಗೂಡು ಶಾಸಕರಾಗಿ ಆಯ್ಕೆಯಾದರು. 1985ರಲ್ಲಿ ಜನತಾ ಪಕ್ಷದ ಡಿ.ಟಿ.ಜಯಕುಮಾರ್ ಹಾಗೂ 1989ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಎಂ.ಮಹದೇವ್ 2ನೇ ಬಾರಿಗೆ ಗೆಲುವು ಸಾಧಿಸಿದ್ದರು. 1994ರಲ್ಲಿ ಮತ್ತೊಮ್ಮೆ ಡಿ.ಟಿ.ಜಯಕುಮಾರ್ ಜನತಾ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾದರು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಮಹದೇವ್
ತದನಂತರ 1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂ.ಮಹದೇವ್ ಮತ್ತೊಮ್ಮೆ ಶಾಸಕರಾದರು. 2004ರಲ್ಲಿ ಡಿ.ಟಿ.ಜಯಕುಮಾರ್ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಬಳಿಕ 2008 ಹಾಗೂ 2013ರಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಕಂಡರು. 2017ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಜಯ ಸಾಧಿಸಿದರೆ, 2018ರಲ್ಲಿ ಹರ್ಷವರ್ಧನ್ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಕಮಲ ಅರಳುವಂತೆ ಮಾಡಿದರು.
ಅನುಕಂಪದ ಅಲೆ?
ಕಾಂಗ್ರೆಸ್ ಮುಖಂಡ ಆರ್.ಧ್ರುವನಾರಾಯಣ್ ಅಕಾಲಿಕ ಸಾವು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಗೆ ಆಘಾತ ನೀಡಿದೆ. ಮತ್ತೊಂದು ಕಡೆ ಆರ್.ಧ್ರುವನಾರಾಯಣ್ ಪುತ್ರ ದರ್ಶನ್ ಧ್ರುವನಾರಾಯಣ್ ಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ. ಇಷ್ಟೆಲ್ಲಾ ಬೆಳವಣಿಗೆ ನೋಡಿದರೆ ಈ ಬಾರಿ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಅನುಕಂಪದ ಆಧಾರ ಕೂಡ ಹೆಚ್ಚು ಪ್ರಭಾವ ಬೀರುವ ಸಾಧ್ಯತೆ ಇದೆ.
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಡುವ ಸಾಧ್ಯತೆ ದಟ್ಟವಾಗಿದ್ದರೂ, ಜೆಡಿಎಸ್ ನಾಯಕರು ಗೆಲುವಿಗಾಗಿ ರಣತಂತ್ರ ರೂಪಿಸುತ್ತಿದ್ದಾರೆ. ಇದು ಕ್ಷೇತ್ರದ ಚುಣಾವಣೆಯನ್ನು ಮತ್ತಷ್ಟು ಕಾವೇರುವಂತೆ ಮಾಡಿದೆ.
ಮತದಾರರ ಲೆಕ್ಕಾಚಾರ ಹೇಗಿದೆ?
ದಕ್ಷಿಣ ಕಾಶಿ ನಂಜನಗೂಡು ಧಾರ್ಮಿಕವಾಗಿ ಇಡೀ ರಾಜ್ಯವನ್ನು ಹೇಗೆ ಸೆಳೆಯುತ್ತದೆಯೋ, ರಾಜಕೀಯವಾಗಿ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಈ ಕ್ಷೇತ್ರದಲ್ಲಿ ಅಂದಾಜು 2,09,121 ಮತದಾರರು ಇದ್ದು, 1,03,775 ಪುರುಷ ಮತದಾರರು, 1,05,335 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
Nanjangud Karnataka Elections
| ಪುರುಷರು | 1,03,775 |
| ಮಹಿಳೆಯರು | 1,05,335 |
ನಂಜನಗೂಡು ವಿಧಾನಸಭಾ ಕ್ಷೇತ್ರ
ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಸಮುದಾಯ ದೊಡ್ಡ ಸಂಖ್ಯೆಯಲ್ಲಿದ್ದು, ಚುನಾವಣೆಯಲ್ಲಿ ಇದೇ ಸಮುದಾಯ ಪ್ರಮುಖ ಪಾತ್ರ ವಹಿಸಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಉಪ್ಪಾರರು, ಮುಸ್ಲಿಂರು, ಕುರುಬ ಸಮುದಾಯದವರು, ಒಕ್ಕಲಿಗ ಸಮುದಾಯದ ಪ್ರಾಬಲ್ಯ ಕೂಡ ಈ ಕ್ಷೇತ್ರದಲ್ಲಿದ್ದು, ರಾಜಕೀಯ ಲೆಕ್ಕಾಚಾರ ಬಿರುಸುಗೊಂಡಿದೆ.












Click it and Unblock the Notifications