ಮನೆ ಮುಂದೆ ವ್ಹೀಲಿಂಗ್ ಮಾಡಬೇಡಿ ಎಂದದ್ದಕ್ಕೆ ಕೊಲೆಯಾದ ಯುವಕ
ಮೈಸೂರು, ಸೆಪ್ಟೆಂಬರ್ 14: ಮನೆ ಮುಂದೆ ಬೈಕ್ ವ್ಹೀಲಿಂಗ್ ಮಾಡಬೇಡಿ ಎಂದ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕೇತುಪುರ ಗ್ರಾಮದಲ್ಲಿ ನಿನ್ನೆ ಭಾನುವಾರ ನಡೆದಿದೆ.
ಹತ್ಯೆಯಾದವನನ್ನು ಸಿದ್ದರಾಜು (26) ಎಂದು ಗುರುತಿಸಲಾಗಿದೆ. ಸುಭಾಷ್, ಚಂದನ್, ಪುನೀತ್, ವಿನಯ್, ಮಹೇಂದ್ರ, ರವಿ ಎಂಬುವರು ಸಿದ್ದರಾಜುನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಈ ಯುವಕರ ಗುಂಪು ಸಿದ್ದರಾಜು ಮನೆ ಮುಂದೆ ದಿನವೂ ವ್ಹೀಲಿಂಗ್ ಮಾಡುತ್ತಿತ್ತು ಎನ್ನಲಾಗಿದ್ದು, ಇದನ್ನು ಸಿದ್ದರಾಜು ವಿರೋಧಿಸಿದ್ದರು. ನಂತರ ಗುಂಪು ಕಟ್ಟಿಕೊಂಡು ಬಂದ ಯುವಕರು ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ ಮಾಡಿದ್ದಾರೆ. ಇದನ್ನು ತಡೆಯಲು ಬಂದ ಚಿಕ್ಕಪ್ಪನ ಮೇಲೂ ಹಲ್ಲೆ ನಡೆಸಿ ಗುಂಪು ಪರಾರಿ ಆಗಿತ್ತು.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬನ್ನೂರು ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications