ಯದುವೀರ್ ಒಡೆಯರ್ ಆಸ್ತಿ ಘೋಷಣೆ: ಸ್ವಂತ ಕಾರು, ಜಮೀನು ಇಲ್ಲದ ಅರಮನೆ ಒಡೆಯ
ಮೈಸೂರು, ಏಪ್ರಿಲ್, 01: ಲೋಕಸಭೆ ಚುನಾವಣೆಗೆ ದಿನಾಂಕ ಈಗಾಗಲೇ ನಿಗದಿಯಾಗಿದೆ. ಅಲ್ಲದೆ ಬಹುತೇಕ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಘೋಷಣೆಯಾಗಿದೆ. ಹಾಗೆಯೇ ಮೈಸೂರು-ಕೊಗಡು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಘೋಷಣೆ ಮಾಡಲಾಗಿದ್ದು, ಇಂದು ಅವರು ನಾಪಪತ್ರ ಸಲ್ಲಿಸಿದ್ದಾರೆ.
ಜ್ಯೋತಿಷಿಗಳ ಸೂಚನೆಯಂತೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು (ಏಪ್ರಿಲ್ 01 ತಾಯಿ ಪ್ರಮೋದಾದೇವಿ ಒಡೆಯರ್, ಶಾಸಕ ಶ್ರೀವತ್ಸ ಜೊತೆ ಸೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಏಪ್ರಿಲ್ 3ರಂದು ಬೃಹತ್ ರ‍್ಯಾಲಿ ಮೂಲಕ ತೆರಳಿ ಅವರು ಮತ್ತೊಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಯದುವೀರ್ ಆಸ್ತಿಯ ಕುರಿತ ಅಫಿಡವಿಟ್ ಅನ್ನೂ ಚುನಾವಣಾ ಆಯೋಗಕ್ಕೆ ನೀಡಿದ್ದು, ಅವರ ಬಳಿ ನಗದು ಸೇರಿ ಒಟ್ಟು 4.99 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಉಲ್ಲೇಖಿಸಲಾಗಿದೆ. ಅವರು ಮೈಸೂರಿನ ರಾಜಮನೆತನಕ್ಕೆ ಸೇರಿದರೂ ಕೂಡ 4,99,59,303 ರೂಪಾಯಿ ಮೌಲ್ಯದ ಚರಾಸ್ತಿಯನ್ನು ಹೊಂದಿದ್ದಾರೆ.
* ಯದುವೀರ್ ಅವರ ಪತ್ನಿ ತ್ರಿಶಿಕಾ ಕುಮಾರಿ ದೇವಿ ಅವರು 1,04,25,000 ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇನ್ನು ಇವರ ಪುತ್ರನ ಹೆಸರಿನಲ್ಲಿ 3.63 ಕೋಟಿ ರೂಪಾಯಿ ಆಸ್ತಿ ಇದೆ. ಇನ್ನು ಅವರ ಕುಟುಂಬದಲ್ಲಿ ಯಾರೂ ಸಾಲ ಹೊಂದಿಲ್ಲ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
* ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಬಳಿ 1 ಲಕ್ಷ ರೂಪಾಯಿ ನಗದು ಇದ್ದರೆ, ಪತ್ನಿ ಬಳಿ 75,000 ರೂಪಾಯಿ ಇದೆ. ಆದರೆ ಯದುವೀರ್ ಅವರ ಹೆಸರಿನಲ್ಲಿ ಬೈಕ್, ಕಾರು ಸೇರಿ ಯಾವುದೇ ವಾಹನ ಇಲ್ಲ. ಬಿಜೆಪಿ ಅಭ್ಯರ್ಥಿಯು 28.42 ಲಕ್ಷ ರೂಪಾಯಿ ಆದಾಯದ ಕುರಿತು ಉಲ್ಲೇಖಿಸಿದ್ದಾರೆ. ಇನ್ನು ವಿಶೇಷ ಎಂದರೆ ಯದುವೀರ್ ಅವರು ಯಾವುದೇ ರೀತಿಯ ಸ್ಥಿರಾಸ್ತಿ ಹೊಂದಿಲ್ಲ. ಇವರು ಆದಾಯ ತೆರಿಗೆಯನ್ನೂ ಕೂಡ ಬಾಕಿ ಉಳಿಸಿಕೊಂಡಿಲ್ಲ.
ಗಮನಾರ್ಹ ಸಂಗತಿಯೆಂದರೆ ಯದುವೀರ್ ರಾಜನಾಗಿದ್ದರೂ ಕೂಡ ಅವರ ಹೆಸರಿನಲ್ಲಿ ಒಂದೇ ಒಂದು ಬೈಕ್, ಕಾರು, ಸೇರಿದಂತೆ ಯಾವುದೇ ವಾಹವನ್ನು ಹೊಂದಿಲ್ಲದಿರುವುದು.
ವಿ.ಸೋಮಣ್ಣ ನಾಮಪತ್ರ ಸಲ್ಲಿಕೆ: ಅದೇ ರೀತಿ ತುಮಕೂರಿನಲ್ಲಿ ವಿ.ಸೋಮಣ್ಣ ಅವರು ಸಹ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ, ಸುರೇಶ್ ಬಾಬು, ಮಾಜಿ ಶಾಸಕ ಸುಧಾಕರ್ ಲಾಲ್, ಬಿಜೆಪಿ ಮುಖಂಡ ಅನಿಲ್ ಕುಮಾರ್ ಅವರ ಜೊತೆ ಸೇರಿ ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಇದಕ್ಕೂ ಮುಂಚೆ ಅವರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.
ಕೆ.ಸುಧಾಕರ್ ನಾಮಪತ್ರ ಸಲ್ಲಿಕೆ: ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಎಂಟಿಬಿ ನಾಗರಾಜ್ ಅವರ ಕಾಲಿಗೆ ಬಿದ್ದು ಸುಧಾಕರ್ ಆಶೀರ್ವಾದ ಪಡೆದರು. ಇದೇ ವೇಳೆ, ನಾಗರಾಜ್ ಅವರು ನಾಮಪತ್ರ ಶುಲ್ಕವಾದ 25,000 ರೂಪಾಯಿ ನೀಡಿ ಆಶೀರ್ವಾದ ಮಾಡಿದರು.
ಹಲವು ಹಿರಿಯರ ಆಶೀರ್ವಾದ ಪಡೆದ ಬಳಿಕ ಸುಧಾಕರ್ ಅವರು ನಾಮಪತ್ರ ಸಲ್ಲಿಸಿದರು. ಇವರಿಗೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ವರ್ತೂರು ಪ್ರಕಾಶ್, ನಿಸರ್ಗ ನಾರಾಯಣಸ್ವಾಮಿ ಸಾಥ್ ನೀಡಿದರು.












Click it and Unblock the Notifications