ಮೈಸೂರು ದಸರಾ: ಪೊಲೀಸ್ ಬ್ಯಾಂಡ್ ಗೆ ತಲೆದೂಗಿದ ಯದುವೀರ್ ದಂಪತಿ
ಮೈಸೂರು, ಸೆಪ್ಟೆಂಬರ್ 26 : ನಿಲ್ಲದ ತುಂತುರು ಮಳೆಯಲ್ಲಿಯೇ ಪೊಲೀಸ್ ಬ್ಯಾಂಡ್ ವಾದನಕ್ಕೆ ಮೈಮರೆತು ನಿಂತ ಸಂಗೀತ ಪ್ರೇಮಿಗಳು ವರುಣನಿಗೆ ಸವಾಲು ಹಾಕಿ ಸುಶ್ರಾವ್ಯ ಸಂಗೀತ ಆಸ್ವಾದಿಸಿದರು. ಮೈಸೂರಿನ ಅರಮನೆ ಸಾಂಸ್ಕೃತಿಕ ವೇದಿಕೆ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಸಮೂಹ ವಾದ್ಯಮೇಳಕ್ಕೆ ಮಳೆರಾಯ ಸಾಥ್ ನೀಡಿದ್ದ.
ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು
ಇಂಗ್ಲಿಷ್ ಬ್ಯಾಂಡ್ ಮಾಸ್ಟರ್ ಆಲ್‍ಫೆಡ್ ಸುರೇಂದ್ರಕುಮಾರ್ ನೇತೃತ್ವದಲ್ಲಿ ಅರಮನೆ ಗಜಲಕ್ಷ್ಮಿ ಗೇಟ್ ನಿಂದ ರಾಯಲ್ ಫ್ಯಾನ್‍ಫೇರ್ ವಾದ್ಯವನ್ನು ನುಡಿಸುತ್ತ ನಿಧಾನವಾಗಿ ಅರಮನೆ ಆವರಣ ಪ್ರವೇಶಿಸಿದ ಪೊಲೀಸ್ ವಾದ್ಯಮೇಳದ 21 ತಂಡಗಳು ಹೆರಾಲ್ಡ್ ಟಂಪೇಟ್ ನುಡಿಸುತ್ತ ಆಸ್ಟ್ರೋನೆಟ್ ಮಾರ್ಚ್ ಮಾಡಿದರು. ನಂತರ ಗಣ್ಯರಿಗೆ ಜನರಲ್ ಸೆಲ್ಯೂಟ್ ನೀಡಿ 'ವಿಜಯಭಾರತಿ' ಹಾಗೂ 'ಕ್ವಿನ್‍ಕಲರ್ಸ್' ವಾದ್ಯ ನುಡಿಸಿದರು.

ನಂತರ ಆರಂಭವಾಯಿತು ಕರ್ನಾಟಕ ಪೊಲೀಸ್ ಬ್ಯಾಂಡ್ ಹಾಗೂ ಇಂಗ್ಲಿಷ್ ಪೊಲೀಸ್ ಬ್ಯಾಂಡ್ ಜುಗಲ್‍ಬಂದಿ. ಜಯಚಾಮರಾಜ ಒಡೆಯರ್ ವಿರಚಿತ ಮಾತೆ ಮಲಯ ಧ್ವಜ ಗೀತೆ ಸಂಗೀತ ನುಡಿಸಿ, ಮಳೆಯಲ್ಲೇ ನೆನೆಯುತ್ತ ನಿಂತಿದ್ದ ಸಂಗೀತ ಪ್ರೇಮಿಗಳಿಗೆ ಇಂಪು ನೀಡಿದರು.
ರಾಜಸ್ಥಾನ್, ಅಬೈಡ್ ವಿತ್ ಮಿ, ಸಾರೇ ಜಹಾಂಸೆ ಅಚ್ಚಾ ಗೀತೆಗಳನ್ನು ನುಡಿಸಿ, ಅಲ್ಪಾವಧಿಯಲ್ಲಿ ಸಮೂಹ ವಾದ್ಯಮೇಳಕ್ಕೆ ತೆರೆ ಎಳೆದರು. ಬ್ಯಾಂಡ್ ಸ್ಪರ್ಧೆಯ ಬಿಗ್ ಬ್ಯಾಂಡ್ ಸ್ಪರ್ಧೆಯಲ್ಲಿ ಮೈಸೂರಿನ ಕೆಎಸ್ ಆರ್ ಪಿ 5ನೇ ಪಡೆ ಮೊದಲನೇ ಸ್ಥಾನಗಳಿಸಿದರೆ, ಬೆಂಗಳೂರಿನ ಕೆಎಸ್ ಆರ್ ಪಿ 4ನೇ ಪಡೆ ದ್ವಿತೀಯ ಸ್ಥಾನ ಪಡೆಯಿತು. ಮೀಡಿಯಂ ಬ್ಯಾಂಡ್ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ಕೆಎಸ್ ಆರ್ ಪಿ 8ನೇ ಪಡೆ ಮೊದಲನೇ ಬಹುಮಾನ ಪಡೆದುಕೊಂಡರೆ, ಶಿಗ್ಗಾಂವ್ ನ ಕೆಎಸ್ ಆರ್ ಪಿಯ 10ನೇ ಪಡೆ 2ನೇ ಸ್ಥಾನ ನಡೆಯಿತು. ಕೆಎಸ್ ಆರ್ ಪಿ
ಪೊಲೀಸ್ ಬ್ಯಾಂಡ್ ಗೆ ಮನಸೋತ ಯದುವೀರ್ ದಂಪತಿ

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಅವರು ಪೊಲೀಸ್ ಬ್ಯಾಂಡ್ ವಾದ್ಯಮೇಳವನ್ನು ನೋಡಲು ಗ್ಯಾಲರಿಯಲ್ಲಿ ಬಂದು ಕುಳಿತಾಗ, ಮಳೆ ಕಾರಣದಿಂದ ಪೊಲೀಸ್ ವಾದ್ಯಮೇಳ ಮುಂದೂಡಲಾಗಿತ್ತು. ಆದರೆ, ಪೊಲೀಸ್ ತಂಡದವರು ದಂಪತಿಯನ್ನು ನಿರಾಶೆಗೊಳಿಸದೆ ಅವರಿಗಾಗಿಯೇ 'ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು', 'ಗೊಂಬೆ ಹೇಳುತೈತೆ ನೀನೇ ರಾಜಕುಮಾರ','ಫರ್ ದೇಶಿ ಫರ್ದೇಶಿ ಜನಾ ನಹೀ' ಮತ್ತಿತರ ಕನ್ನಡ ಮತ್ತು ಹಿಂದಿ ಗೀತೆಗಳನ್ನು ಒಂದು ಗಂಟೆಗೂ ಹೆಚ್ಚು ಕಾಲ ಆನೆಬಾಗಿಲು ಮುಂದೆಯೇ ನುಡಿಸಿದರು. ಪೊಲೀಸರ ವಾದ್ಯಮೇಳಕ್ಕೆ ದಂಪತಿ ಮನಸೋತರು.












Click it and Unblock the Notifications