Mysuru Dasara 2024: ಅದ್ಧೂರಿ ಮೈಸೂರು ದಸರಾ ತೆರೆ ಕಾಣುವುದು ಇದೇ ಕಾರ್ಯಕ್ರಮದಿಂದ
Mysuru Dasara 2024: ಒಂದೆಡೆ ಜಂಬೂಸವಾರಿಗೆ ಅಂತಿಮ ಸಿದ್ಧತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಜಂಬೂಸವಾರಿ ನಂತರ ಬನ್ನಿಮಂಟಪದಲ್ಲಿ ನಡೆಯಲಿರುವ ಪಂಜಿನ ಕವಾಯತಿಗೂ ಬಿರುಸಿನ ಸಿದ್ಧತೆಗಳು ನಡೆಯುತ್ತಿವೆ. ಗಜಪಯಣದೊಂದಿಗೆ ಮೈಸೂರು ದಸರಾ ಆರಂಭವಾದರೆ, ಪಂಜಿನಕವಾಯತಿನೊಂದಿಗೆ ದಸರಾಕ್ಕೆ ತೆರೆಬೀಳುತ್ತದೆ. ಹೀಗಾಗಿ ಪಂಜಿನ ಕವಾಯತನ್ನು ಆಕರ್ಷಕವಾಗಿಸುವ ಕಾರ್ಯಗಳು ಭರದಿಂದ ಸಾಗುತ್ತಿವೆ.
ಅಕ್ಟೋಬರ್ 12ರಂದು ಜಂಬೂ ಸವಾರಿ ಅರಮನೆಯಿಂದ ಹೊರಟು ಬನ್ನಿಮಂಟಪ ತಲುಪುವ ವೇಳೆಗೆ ರಾತ್ರಿಯಾಗುತ್ತದೆ. ಜಂಬೂಸವಾರಿ ಸಂಪನ್ನಗೊಳ್ಳುತ್ತಿದ್ದಂತೆಯೇ ಅಲ್ಲಿ ದಸರಾ ಪಂಜಿನ ಕವಾಯತು ಪ್ರದರ್ಶನ ಆರಂಭವಾಗುತ್ತದೆ. ಈ ಬಾರಿ ಪಂಜಿನ ಕವಾಯತನ್ನು ಮತ್ತಷ್ಟು ಆಕರ್ಷಣೀಯವಾಗಿಸುವ ಕೆಲಸ ನಡೆಯುತ್ತಿದೆ. ಅದರಂತೆಯೇ ಮಿಲಿಟರಿ ಪೊಲೀಸರ ಶ್ವೇತ ಅಶ್ವದಳ ಮೆರಗು ನೀಡಲಿದೆ.

ಈಗಾಗಲೇ ದೇಶದ ಉದ್ದಗಲಕ್ಕೂ ಹಲವು ಸಂದರ್ಭದಲ್ಲಿ ಬೈಕ್ ಸ್ಟಂಟ್ ಮೂಲಕ ಪ್ರದರ್ಶನ ನೀಡಿ ಗಮನ ಸೆಳೆದಿರುವ ಮಿಲಿಟರಿ ಪೊಲೀಸರ ಶ್ವೇತ ಅಶ್ವ ತಂಡದ 30 ಸದಸ್ಯರು ಬೆಂಗಳೂರಿನ ಕೋರ್ ಆಫ್ ಮಿಲಿಟರಿ ಆಫೀಸ್‌ನಿಂದ ನಗರಕ್ಕೆ ಆಗಮಿಸಿದ್ದು, ಬಿಳಿ ಬಣ್ಣದ 29 ರಾಯಲ್ ಎನ್‌ಫೀಲ್ಡ್ ಬೈಕ್ ಹಾಗೂ 4 ಹೀರೋ ಎಕ್ಸ್‌ಪ್ರೆಸ್ ಪ್ರೋ ಬೈಕ್‌ಗಳು ಸೇರಿದಂತೆ 33 ಬೈಕ್‌ಗಳು ಬಂದಿವೆ. ಇವುಗಳನ್ನು ಬಳಸಿಕೊಂಡು ಅಭ್ಯಾಸ ಮಾಡಲಾಗುತ್ತಿದೆ. ಮಿಲಿಟರಿ ಪೊಲೀಸ್ ತಂಡದ 30 ಸದಸ್ಯರ ಪೈಕಿ 10 ಜನ ಕನ್ನಡಿಗರಿದ್ದಾರೆ.
ಮಿಲಿಟರಿ ಪೊಲೀಸರಿಂದ ಬೈಕ್ ಸ್ಟಂಟ್: ಬೆಳಗ್ಗೆ ಬೈಕ್ ಸ್ಟಂಟ್ ಮಾಡಿದ್ದ ಮಿಲಿಟರಿ ಪೊಲೀಸರ ತಂಡ ಸಂಜೆಯೂ ಪೂರ್ಣ ಪ್ರಮಾಣದ ಸ್ಟಂಟ್ ತರಬೇತಿ ಪಡೆದುಕೊಂಡರು. ಬೆಳಗ್ಗೆ ಮಾಡಿದ್ದ ಮಾರ್ಕ್‌ಗಳನ್ನು ಮುಂದಿಟ್ಟುಕೊಂಡು ಸಂಜೆ ತರಬೇತಿ ಪಡೆದರು.
ಅಕ್ಟೋಬರ್ 12ರಂದು ಜಂಬೂಸವಾರಿ ಪೂರ್ಣಗೊಂಡ ನಂತರ ಬನ್ನಿಮಂಟಪದ ಮೈದಾನದಲ್ಲಿ ದಸರಾ ಪಂಜಿನ ಕವಾಯತು ನಡೆಯಲಿದೆ. ಅದಕ್ಕೂ ಮುನ್ನ ಅಕ್ಟೋಬರ್ 11ರಂದು ಸಂಜೆ 7 ಗಂಟೆಗೆ ಪಂಜಿನ ಕವಾಯತಿನಲ್ಲಿ 18ರಿಂದ 20 ನಿಮಿಷ ವಿವಿಧ ಸ್ಟಂಟ್‌ಗಳ ಪ್ರದರ್ಶನ ಅಂತಿಮ ತಾಲೀಮು ಸಹ ಇರಲಿದೆ.
ಈ ಸಂದರ್ಭದಲ್ಲಿ ಕೆಲವು ಮಾರ್ಕ್ ಮಾಡಲಾಗಿದ್ದು, ಯಾವ ಬೈಕ್ ಯಾವ ಪಾಯಿಂಟ್‌ನಲ್ಲಿ ಹೋಗಬೇಕು, ಯಾವ ಸ್ಥಳದಲ್ಲಿ ತಿರುವು ಪಡೆಯಬೇಕು, ಯಾವ ಸ್ಥಳದಲ್ಲಿ ಜಂಪ್ ಮಾಡಬೇಕು ಸೇರಿದಂತೆ ಕೆಲ ಸ್ಟಂಟ್‌ಗೆ ಗುರುತು ಮಾಡುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಇನ್ನು ಮಳೆಯಿಂದಾಗಿ ಪಂಜಿನ ಕವಾಯತು ಮೈದಾನದಲ್ಲಿ ಕೆಲವೆಡೆ ನೀರು ನಿಂತು ಕೆಸರುಮಯವಾಗಿದೆ. ಇದರಿಂದ ಸ್ಟಂಟ್ ಮಾಡುವ ವೇಳೆ ಬೈಕ್‌ಗಳು ಜಾರುವ ಸಂದರ್ಭವಿದೆ. ಹೀಗಾಗಿ, ಅಗತ್ಯವಿದ್ದ ಕಡೆ ಸಮತಟ್ಟು ಮಾಡುವಂತೆ ಸೂಚಿಸಲಾಗಿದೆ. ಮುಡಾ ವತಿಯಿಂದ ಮೈದಾನದಲ್ಲಿ ಸಮತಟ್ಟು ಕಾರ್ಯ ಮಾಡಲಾಗಿದೆ.
ಪೊಲೀಸರಿಂದ ಪಂಜಿನ ಕವಾಯತು: 7 ಬೈಕ್‌ಗಳಲ್ಲಿ 30 ಜನ ನಿಂತುಕೊಂಡು ಪಿರಮಿಡ್ ಮಾದರಿಯಲ್ಲಿ ಸಾಗಲಿದ್ದು, ಫೈರ್ ಜಂಪ್, ಶ್ವೇತ ಅಶ್ವ ಜಂಪ್, ಟ್ಯೂಬ್ ಲೈಟ್ ಜಂಪ್, ಸರ್ಕಲ್ ಎಕ್ಸ್‌ಸೈಜ್, ಓಪನಿಂಗ್ ಕ್ರಾಸಿಂಗ್, ಪ್ಯಾರಲ್ ಕ್ರಾಸಿಂಗ್, ಗ್ರೂಪ್ ಈವೆಂಟ್ ಸೇರಿದಂತೆ ವಿವಿಧ ಕಸರತ್ತು ಪ್ರದರ್ಶಿಸಲಾಗುತ್ತಿದೆ.
ಬುಲೆಟ್ ಮೇಲೆ ನಿಂತು, ಮಲಗಿ ಸಾಗುವುದು, ಬೈಕ್ ಚಲಿಸುವಾಗಲೇ ಅದರ ಸೀಟ್ ಮೇಲೆ ಮಲಗಿ ಈಜಾಡುವಂತೆ ಮಾಡುವುದು, ಚಲಿಸುವ ಬೈಕ್ ಮೇಲೆ ನಿಂತು ಸೆಲ್ಯೂಟ್ ಹೊಡೆಯುವುದು, ಬೈಕ್ ಚಲಿಸುವಾಗಲೇ ಏಣಿ ಏರುವುದು ಸೇರಿದಂತೆ ಇನ್ನಿತರ ಸ್ಟಂಟ್‌ಗಳು ಇರಲಿವೆ.
ಬನ್ನಿಮಂಟಪದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ನಾಡಗೀತೆ ಬಳಿಕ ಎರಡು ಗಂಟೆಗಳ ಕಾಲ ಪೊಲೀಸ್ ಸಿಬ್ಬಂದಿ ಸಾಹಸಮಯ ಪ್ರದರ್ಶನ ನೀಡಲಿದ್ದು, ಮೈನವಿರೇಳಿಸುವ ಅಶ್ವಾರೋಹಿ ಪಡೆಗಳ ಸಾಹಸ ಪ್ರದರ್ಶನ ಮಾಡಲಿದ್ದಾರೆ. ಜೊತೆಗೆ ಕರ್ನಾಟಕ ಪೊಲೀಸ್ ವತಿಯಿಂದ ಪಂಜಿನ ಕವಾಯತು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಪಂಜಿನ ಕವಾಯತಿನ ಮೂಲಕ ಹತ್ತು ದಿನಗಳ ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ.












Click it and Unblock the Notifications