World Cup: ಇಂಡಿಯಾ ವಿಶ್ವಕಪ್ ಗೆದ್ದರೆ ಫ್ರೀ ಬಿಯರ್: ಮೈಸೂರಿನಲ್ಲಿ ಸ್ಪೆಷಲ್ ಆಫರ್
ಮೈಸೂರು, ನವೆಂಬರ್ 19: ವಿಶ್ವಕಪ್ ಅಂತಿಮ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಕ್ರಿಕೆಟ್ ಪ್ರೇಮಿಗಳ ಎದೆಯಲ್ಲಿ ಢವಢವ ಶುರುವಾಗಿದ್ದು, ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂತಿಮ ಹಣಾಹಣಿಗೆ ಅಹಮದಾಬಾದ್‌ನ ಮೋದಿ ಮೈದಾನ ಸಿದ್ಧವಾಗಿದೆ. ಎಲ್ಲೆಡೆ ಗೆದ್ದು ಬಾ ಇಂಡಿಯಾ ಘೋಷಣೆಗಳು ಜೋರಾಗಿದ್ದು, ಭಾರತ ಮೂರನೇ ವಿಶ್ವಕಪ್ ಮುಡಿಗೇರಿಸಿಕೊಳ್ಳಲಿ ಎಂದು ವಿಶೇಷ ಪೂಜೆಗಳು ಸಹ ನಡೆಯುತ್ತಿದೆ.
ಈವರೆಗೂ ಸೋಲಿಲ್ಲದ ಸರದಾರನಂತೆ ವಿಶ್ವಕಪ್ ಪಂದ್ಯಾವಳಿಯಲ್ಲಿ ನುಗ್ಗಿ ಬಂದಿರುವ ಟೀಂ ಇಂಡಿಯಾ ಭಾರತೀಯರಲ್ಲಿ ಗೆಲುವಿನ ನಿರೀಕ್ಷೆ ಹುಟ್ಟುಹಾಕಿದೆ. ಹೀಗಾಗಿ ಭಾರತೀಯರು ಕೌತುಕದಿಂದ ಕಾಯುತ್ತಿರುವ ಐತಿಹಾಸಿಕ ಪಂದ್ಯ ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ. ಟೀಂ ಇಂಡಿಯಾ ಗೆಲುವಿಗಾಗಿ ಶುಭ ಹಾರೈಕೆಗಳು ಜೋರಾಗಿದ್ದು, ಈ ಮಧ್ಯೆ ಮೈಸೂರಿನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ವಿಶೇಷ ಆಫರ್ ಕೂಡ ನೀಡಲಾಗಿದೆ.

ಮೈಸೂರು ಹುಣಸೂರು ರಸ್ತೆಯಲ್ಲಿರುವ ಪೆಗ್ಸ್ ಮತ್ತು ಕೆಗ್ಸ್ ಪಬ್ ಅಂಡ್ ರೆಸ್ಟೋರೆಂಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದರೆ ಉಚಿತ ಬಿಯರ್ ನೀಡುವುದಾಗಿ ತಿಳಿಸಿದೆ. ಟೀಂ ಇಂಡಿಯಾ ಫೈನಲ್ ಗೆದ್ದರೆ ಒಂದು ಮಗ್ ಬಿಯರ್ ಫ್ರೀ ನೀಡುವುದಾಗಿ ಪೆಗ್ಸ್ ಮತ್ತು ಕೆಗ್ಸ್ ಪಬ್ ಅಂಡ್ ರೆಸ್ಟೋರೆಂಟ್ ಘೋಷಿಸಿದೆ.
ಇನ್ನು ವಿಶ್ವಕಪ್ ಅಂತಿಮ ಪಂದ್ಯ ವೀಕ್ಷಿಸಲು ಪೆಗ್ಸ್ ಮತ್ತು ಕೆಗ್ಸ್ ಪಬ್ ಅಂಡ್ ರೆಸ್ಟೋರೆಂಟ್ ಸುಸಜ್ಜಿತ ವ್ಯವಸ್ಥೆ ಕೂಡ ಮಾಡಿದೆ. ಫೈನಲ್ ಪಂದ್ಯ ವೀಕ್ಷಿಸಲು ಮೂರು ಬಿಗ್ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ. ಇನ್ನು 2011ರ ವಿಶ್ವಕಪ್ ಗೆದ್ದ ತಂಡದ ಸಹಿಯುಳ್ಳ ಬ್ಯಾಟ್, ಮಹೇಂದ್ರ ಸಿಂಗ್ ಧೋನಿಯ ಕೀಪಿಂಗ್ ಗ್ಲೌಸ್, ರಾಹುಲ್ ದ್ರಾವಿಡ್ ಬ್ಯಾಟಿಂಗ್ ಗ್ಲೌಸ್, ಸಚಿನ್ ತೆಂಡೂಲ್ಕರ್ ಸಹಿಯುಳ್ಳ ಅವರು ಆಡಿದ ಬ್ಯಾಟ್‌ಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ವಿಶ್ವಕಪ್ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗಾಗಿ ಬೆಂಗಳೂರಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ದೊಡ್ಡ ಗಣಪತಿ ಹಾಗೂ ಸರ್ಕಲ್ ಮಾರಮ್ಮ ದೇವಸ್ಥಾನಗಳಲ್ಲಿ ಪೂಜೆ ನಡೆಸಲಾಗಿದೆ. ವಿಘ್ನ ನಿವಾರಕ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಟೀಂ ಇಂಡಿಯಾ ಪೋಸ್ಟರ್ ಸಮೇತ ಪೂಜೆ ಸಲ್ಲಿಸಿ ವಿಶ್ವಕಪ್ ಗೆಲ್ಲಲಿ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. 11 ಆಟಗಾರರಿಗೆ ಶಕ್ತಿ ತುಂಬಲು ಸರ್ವ ಸಂಘಟನೆಯ ಒಕ್ಕೂಟದಿಂದ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ನಡೆದಿದೆ.












Click it and Unblock the Notifications