ಮೈಸೂರಿನಲ್ಲಿ ಹೆಂಡತಿ ಕತ್ತು ಸೀಳಿ ನಾಪತ್ತೆಯಾದ ಗಂಡ
ಮೈಸೂರು, ಜುಲೈ 26: ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ, ಪತಿ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ನಗರದ ಗಾಯತ್ರಿಪುರಂ ನಿವಾಸಿ ರೇಷ್ಮಾ (25) ಕೊಲೆಯಾದ ಮಹಿಳೆ. ಪತಿ ನದೀಫ್ ನಾಪತ್ತೆಯಾಗಿದ್ದು, ಆತನೇ ಕೊಲೆ ಮಾಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ನದೀಫ್, ರೇಷ್ಮಾರನ್ನು ಒಂಬತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ. ಈ ಹಿಂದೆ ಕ್ಯಾತಮಾರನಹಳ್ಳಿಯಲ್ಲಿ ವಾಸವಿದ್ದ ಇವರು, ಮೂರು ದಿನಗಳ ಹಿಂದಷ್ಟೇ ಗಾಯತ್ರಿಪುರಂನಲ್ಲಿ ವಾಸವಾಗಿದ್ದರು.
ಕಳೆದ ಎರಡು ದಿನಗಳಿಂದಲೂ ಗಂಡ ಹೆಂಡತಿ ನಡುವೆ ಜಗಳವಾಗಿತ್ತು. ಬುಧವಾರ ರಾತ್ರಿಯೂ ಇಬ್ಬರ ನಡುವೆ ಜಗಳ ನಡೆದಿದ್ದು, ರೇಷ್ಮಾ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ಅಕ್ಕಪಕ್ಕದವರು ಬುದ್ಧಿ ಹೇಳಿದ್ದರು ಎಂದು ತಿಳಿದುಬಂದಿದೆ.

ಜಗಳ ನಡೆದಾಗ ಮನೆಯಿಂದ ಹೊರಹೋಗಿದ್ದ ನದೀಫ್ ಬುಧವಾರ ರಾತ್ರಿ ಮನೆಗೆ ಬರಲಿಲ್ಲ. ಗುರುವಾರ ಆತ ಮನೆಗೆ ಬಂದ ವೇಳೆ ಮತ್ತೆ ಜಗಳವಾಗಿದೆ. ಕೆಲ ಹೊತ್ತಿನ ಬಳಿಕ ಮನೆಯಿಂದ ಹೊರಟಿದ್ದಾನೆ. ಇದಾದ ಬಳಿಕ ಅಕ್ಕಪಕ್ಕದ ಮನೆಯವರು ಒಳಗೆ ಹೋಗಿ ನೋಡಿದಾಗ ರೇಷ್ಮಾ ರಕ್ತಸಿಕ್ತವಾಗಿ ಬಿದ್ದದ್ದು ಕಂಡುಬಂದಿದೆ.
ಕೂಡಲೇ ನಜರಬಾದ್ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದು, ತಲೆಮರೆಸಿಕೊಂಡಿರುವ ರೇಷ್ಮಾಳ ಪತಿ ನದೀಫ್ ಗಾಗಿ ಹುಡುಕಾಟ ನಡೆಸಿದ್ದಾರೆ.












Click it and Unblock the Notifications