ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಬಿಟ್ಟು ದಾವಣಗೆರೆಯಲ್ಲಿ ಹುಟ್ಟುಹಬ್ಬ ಏಕೆ? ಸಿದ್ದರಾಮಯ್ಯರನ್ನು ಕಾಡಿದ ಆ ನೋವು ಯಾವುದು?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್‌ 2: ತಮ್ಮ ಬೆಂಬಲಿಗರ ಒತ್ತಾಸೆಯೊಂದಿಗೆ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ 75ನೇ ವರ್ಷದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಹುಟ್ಟುಹಬ್ಬವನ್ನು ತವರು ಜಿಲ್ಲೆಯನ್ನು ಬಿಟ್ಟು ದಾವಣಗೆರೆಯಲ್ಲಿ ನಡೆಸುತ್ತಿರುವುದು ರಾಜಕೀಯವಾಗಿಯೂ ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

Recommended Video

Siddaramaiah ಅಮೃತ ಮಹೋತ್ಸವ ದಾವಣಗೆರೆಯಲ್ಲಿ ನಡೆಯುತ್ತಿರುವುದೇಕೆ | *Politics | OneIndia Kannada

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಜಿ.ಟಿ. ದೇವೇಗೌಡರ ಎದುರು ಸ್ಪರ್ಧಿಸಿ ಸೋಲು ಕಂಡ ಬಳಿಕ ಅವರು ತಮ್ಮ ಕ್ಷೇತ್ರದತ್ತ ನಿರಾಸಕ್ತಿ ವಹಿಸಿದ್ದರು. ಕೆಲವು ವರ್ಷಗಳ ಕಾಲ ಆ ಕಡೆ ಮುಖ ಮಾಡುವ ಪ್ರಯತ್ನ ಮಾಡಲಿಲ್ಲ. ಕೆಲ ವರ್ಷಗಳ ಹಿಂದೆ ತಮ್ಮ ಬೆಂಬಲಿಗರ ಒತ್ತಾಯಕ್ಕೆ ಮಣಿದು ಕ್ಷೇತ್ರಕ್ಕೆ ತೆರಳಿ ಸಭೆ ನಡೆಸಿದರಾದರೂ ಅವರಿಗೆ ಕ್ಷೇತ್ರದ ಮತದಾರರತ್ತ ನಂಬಿಕೆ ಬಂದಂತೆ ಕಾಣುತ್ತಿಲ್ಲ. ಹೀಗಾಗಿಯೇ ಅವರು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಎಲ್ಲೂ ಹೇಳಲೇ ಇಲ್ಲ.

'ಖರ್ಗೆಯವರನ್ನೇ ಸಿಎಂ ಮಾಡಲು ಬಿಡದ ಸಿದ್ದು, ಡಿಕೆಶಿಯನ್ನು ಬಿಟ್ಟಾರಾ'?'ಖರ್ಗೆಯವರನ್ನೇ ಸಿಎಂ ಮಾಡಲು ಬಿಡದ ಸಿದ್ದು, ಡಿಕೆಶಿಯನ್ನು ಬಿಟ್ಟಾರಾ'?

ಏಕೆಂದರೆ ಮುಖ್ಯಮಂತ್ರಿಯಾಗಿ ಬಡವರ ಉದ್ಧಾರಕ್ಕಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದರೂ ಕೂಡ ಕ್ಷೇತ್ರದ ಜನರು ಚುನಾವಣೆಯಲ್ಲಿ ಕೈಬಿಟ್ಟರಲ್ಲ ಎಂಬ ನೋವು ಅವರಲ್ಲಿ ಮಾತ್ರವಲ್ಲ ಅವರ ಬೆಂಬಲಿಗನ್ನು ಕಾಡುತ್ತಿದೆ. ಈ ನೋವಿನಲ್ಲಿಯೇ ಅವರು ಚುನಾವಣೆ ನಡೆದು ಐದು ವರ್ಷವಾಗುತ್ತಾ ಬಂದರೂ ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಸಲುವಾಗಿ ಕಾರ್ಯ ಕಾರ್ಯಕರ್ತರ ಸಭೆ ನಡೆಸಿ ಮುಂದಿನ ಚುನಾವಣೆಗೆ ತಯಾರಿ ನಡೆಸುವ ಕಾರ್ಯಕ್ಕೆ ಮುಂದಾಗಲೇ ಇಲ್ಲ. ಕಾರಣ ಅಷ್ಟೊಂದು ನೋವು ಅವರನ್ನು ಕಾಡಿತ್ತು.

 ಮೈಸೂರಿನ ಮೇಲೆ ಆಸಕ್ತಿ ಕಳೆದುಕೊಂಡ ಸಿದ್ದರಾಮಯ್ಯ?

ಮೈಸೂರಿನ ಮೇಲೆ ಆಸಕ್ತಿ ಕಳೆದುಕೊಂಡ ಸಿದ್ದರಾಮಯ್ಯ?

ಈ ನಡುವೆ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾದ ಚಾಮುಂಡೇಶ್ವರಿ ಕ್ಷೇತ್ರದ ಕೆಲವು ಮುಖಂಡರು ಕೆಲ ವರ್ಷಗಳ ಹಿಂದೆಯೇ ತಮ್ಮ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದರು. ಆದರೆ ಕಳೆದ ಚುನಾವಣೆ ಬಳಿಕ ಜಿ.ಟಿ. ದೇವೇಗೌಡರು ಪ್ರಾಬಲ್ಯ ಹೊಂದಿದ್ದಾರೆ. ಹೀಗಾಗಿ ಮುಂದಿನ 2023ನೇ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಅಷ್ಟು ಸುಲಭವಲ್ಲ ಎಂಬುದು ಸಿದ್ದರಾಮಯ್ಯ ಅವರಿಗೂ ಗೊತ್ತಿಲ್ಲದ ವಿಚಾರವೇನಲ್ಲ. ಹೀಗಾಗಿಯೇ ಅವರು ಚಾಮುಂಡೇಶ್ವರಿ ಕ್ಷೇತ್ರ ಮಾತ್ರವಲ್ಲ ಮೈಸೂರಿನ ಯಾವ ಕ್ಷೇತ್ರದತ್ತವೂ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ.

 ತವರಿನಲ್ಲಿ ಹಿಡಿತ ಸಾಧಿಸುವಲ್ಲಿ ವಿಫಲ

ತವರಿನಲ್ಲಿ ಹಿಡಿತ ಸಾಧಿಸುವಲ್ಲಿ ವಿಫಲ

ಸಾಮಾನ್ಯವಾಗಿ ಬಹುತೇಕ ರಾಜಕೀಯ ನಾಯಕರೆಲ್ಲರೂ ಕೆಲವು ಕ್ಷೇತ್ರವನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಆ ಕ್ಷೇತ್ರವನ್ನು ತಮ್ಮ ಭದ್ರಕೋಟೆಯನ್ನಾಗಿ ಮಾಡಿಕೊಂಡಿದ್ದಾರೆ. ಅದು ದೇವೇಗೌಡರಿಂದ ಹಿಡಿದು ಯಡಿಯೂರಪ್ಪರ ತನಕವೂ ನಾವು ನೋಡಬಹುದಾಗಿದೆ. ಆದರೆ ಸಿದ್ದರಾಮಯ್ಯರವರ ವಿಚಾರದಲ್ಲಿ ಅದು ಸಾಧ್ಯವಾಗಿಲ್ಲ. ಏಕೆಂದರೆ ಅವರಿಗೆ ತವರು ಜಿಲ್ಲೆಯಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗಿಲ್ಲ. ತಾವು ಗೆಲುವು ಸಾಧಿಸುತ್ತಾ ಬಂದಿದ್ದ ವರುಣಾ ಕ್ಷೇತ್ರವನ್ನು 2018ರ ವಿಧಾನಸಭಾ ಚುನಾವಣೆಯಲ್ಲಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರಿಗೆ ಕ್ಷೇತ್ರದಲ್ಲಿ ತಮಗೆ ಗೆಲುವು ಕಷ್ಟ ಎಂಬುದು ಗೊತ್ತಾಗುತ್ತಿದ್ದಂತೆಯೇ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು.

 ಹೈಕಮಾಂಡ್ ಮುಂದೆ ಸಾಮರ್ಥ್ಯ ತೋರಿಸುವ ಹಂಬಲ?

ಹೈಕಮಾಂಡ್ ಮುಂದೆ ಸಾಮರ್ಥ್ಯ ತೋರಿಸುವ ಹಂಬಲ?

ಆದರೆ ಅವರು ಬಹುವಾಗಿ ನಂಬಿದ್ದ ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಕೈಬಿಟ್ಟಿದ್ದರು. ದೂರದ ಬಾದಾಮಿ ಕ್ಷೇತ್ರದ ಜನರು ಕೈ ಹಿಡಿದಿದ್ದರು. ಆದರೆ ಮುಂದಿನ ಚುನಾವಣೆಗೆ ಬಾದಾಮಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುತ್ತಾರೆ ಎಂಬ ಖಚಿತತೆ ಇಲ್ಲದಾಗಿದೆ. ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಕೂಡ ಗೌಪ್ಯವಾಗಿ ಉಳಿದಿದೆ. ಇದೀಗ ಮತ್ತೊಮ್ಮೆ ಮುಖ್ಯಮಂತ್ರಿಯಾಗಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಸಿದ್ದರಾಮಯ್ಯ ಅವರಿಗೆ ಹೈ ಕಮಾಂಡ್ ಮುಂದೆ ತಾನೇನು ಎಂಬುದನ್ನು ತೋರಿಸುವ ಜರೂರು ಎದುರಾಗಿದೆ. ಅದನ್ನು ತಮ್ಮ 75ನೇ ವರ್ಷದ ಹುಟ್ಟು ಹಬ್ಬದ ಅದ್ಧೂರಿ ಆಚರಣೆ ಮೂಲಕ ತೋರಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.

 ಶಕ್ತಿಪ್ರದರ್ಶನವೆಂದರೆ ತಪ್ಪಾಗಲಾರದು

ಶಕ್ತಿಪ್ರದರ್ಶನವೆಂದರೆ ತಪ್ಪಾಗಲಾರದು

ತಮ್ಮ 75 ನೇ ವರ್ಷದ ಹುಟ್ಟುಹಬ್ಬವನ್ನು ತವರು ಜಿಲ್ಲೆಯಲ್ಲಿ ಆಚರಿಸಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು ಎನ್ನುವುದು ಅವರ ಅಭಿಮಾನಿಗಳ ಆಶಯವಾಗಿದೆ. ಆದರೆ ತಮ್ಮದೇ ಪಕ್ಷದ ಕೆಲವು ನಾಯಕರ ವಿರೋಧದ ನಡುವೆಯೂ ಕಾಂಗ್ರೆಸ್ ಪಕ್ಷದ ಬ್ಯಾನರ್ ಆಚೆಗೆ ನಡೆಯುತ್ತಿರುವ 75ನೇ ಅಮೃತಮಹೋತ್ಸವ ಒಂದು ರೀತಿಯಲ್ಲಿ ಶಕ್ತಿ ಪ್ರದರ್ಶನ ಎಂದರೆ ತಪ್ಪಾಗಲಾರದು. ಅದು ದಾವಣಗೆರೆಯಲ್ಲಿ ನಡೆಯುತ್ತಿರುವುದರ ಹಿಂದೆಯೂ ರಾಜಕೀಯ ಲೆಕ್ಕಾಚಾರವಿದೆ ಎನ್ನುವುದನ್ನು ತಳ್ಳಿಹಾಕಲಾಗದು. ಅದು ಏನೇ ಇರಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಅವರ ಬಯಕೆ ಈಡೇರುವ ಹತ್ತಿರವಾಯಿತಾ? ಎಂಬುದನ್ನು ಕಾದು ನೋಡಬೇಕಿದೆ.

English summary
Former chief minister and opposition leader Siddaramaiah is celebrating his 75th birthday in a grand manner in Davanagere. But creaat Lot of questions behind Siddaramaiah's grand Birthday celebration in Davanagere instead of Mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X