ಕರ್ನಾಟಕ ಬಜೆಟ್‌ನತ್ತ ದೃಷ್ಟಿನೆಟ್ಟ ಸಿಎಂ ತವರು ಜಿಲ್ಲೆ: ಮೈಸೂರು ಜನರ ನಿರೀಕ್ಷೆಗಳೇನು?
ಮೈಸೂರು, ಫೆಬ್ರವರಿ 14: ಗ್ಯಾರಂಟಿ ಯೋಜನೆಗಳನ್ನು ನೀಡಿ ನುಡಿದಂತೆ ನಡೆದಿದ್ದೇವೆ ಎಂದು ಬೀಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.16ರಂದು ಮಂಡಿಸುತ್ತಿರುವ ತಮ್ಮ 15ನೇ ಬಜೆಟ್ ನತ್ತ ತವರು ಜಿಲ್ಲೆಯ ಜನ ಆಸೆಗಣ್ಣಿನಿಂದ ನೋಡುತ್ತಿದ್ದು, ಈ ಬಾರಿಯಾದರೂ ಅಗತ್ಯ ಬೇಡಿಕೆಗಳಿಗೆ ಮನ್ನಣೆ ಸಿಗುತ್ತಾ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.
ಹಾಗೆ ನೋಡಿದರೆ ಮೈಸೂರು ಜಿಲ್ಲೆಯ ಜನ ಪ್ರತಿ ಬಜೆಟ್ ನಲ್ಲಿಯೂ ಇಂತಹದೊಂದು ಬಯಕೆಯನ್ನು ವ್ಯಕ್ತಪಡಿಸಿ ಕಾಯೋದು ಇದ್ದದ್ದೇ ಆದರೆ ಈ ಬಾರಿ ತಮ್ಮ ಜಿಲ್ಲೆಯವರೇ ಮುಖ್ಯಮಂತ್ರಿಗಳೇ ಬಜೆಟ್ ಮಂಡಿಸುತ್ತಿರುವುದರಿಂದ ನಿರೀಕ್ಷೆಗಳು ಬೆಟ್ಟದಷ್ಟಿವೆ. ಆದರೆ ಲೋಕಸಭಾ ಚುನಾವಣೆ ಸಮೀಪದಲ್ಲಿಯೇ ಇರುವುದರಿಂದ ಚುನಾವಣಾ ದೃಷ್ಟಿಯಿಟ್ಟುಕೊಂಡೇ ಬಜೆಟ್ ಮಂಡನೆಯಾಗುತ್ತದೆ ಎಂಬುದನ್ನು ತಳ್ಳಿಹಾಕಲಾಗದು. ಆದರೂ ಒಂದಷ್ಟು ಬೇಡಿಕೆಗಳನ್ನು ಮುಂದಿಟ್ಟುಕೊಂಡಿರುವ ಜನ ಅದು ಈಡೇರುವ ಕಾಲ ಬರುತ್ತಾ ಎಂದು ಕಾಯುತ್ತಿದ್ದಾರೆ.

ಪ್ರತಿ ಬಜೆಟ್ ಮಂಡನೆಯಾಗುವಾಗ ಮೈಸೂರು ದಸರಾ ಆಚರಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಾಧಿಕಾರ ರಚನೆಯಾಗಬೇಕು ಮತ್ತು ಅದಕ್ಕೆ ಅನುದಾನವನ್ನು ಮೀಸಲಿಡಬೇಕು ಎಂಬ ಒತ್ತಾಯ ಕೇಳಿ ಬರುತ್ತಲೇ ಇದೆ. ಇಲ್ಲಿವರೆಗೆ ಯಾವುದೂ ಆಗದ ಕಾರಣದಿಂದ ಈ ಬಾರಿ ಮುಖ್ಯಮಂತ್ರಿಗಳು ಗಮನಹರಿಸಬಹುದಾ? ಎಂದು ಜನ ಕಾಯುತ್ತಿದ್ದಾರೆ. ಮೈಸೂರು ಪ್ರವಾಸೋದ್ಯಮಕ್ಕೆ ತನ್ನದೇ ಕೊಡುಗೆ ನೀಡಿದೆ. ಹೀಗಿರುವಾಗ ದಸರಾಕ್ಕೆ ಪ್ರಾಧಿಕಾರ ರಚನೆಯಾಗಿ ದಸರಾ ವಿಶ್ವಮಟ್ಟದಲ್ಲಿ ಇನ್ನಷ್ಟು ಪ್ರಚುರಗೊಂಡು ಪ್ರವಾಸೋದ್ಯಮ ಬೆಳೆಯಬಹುದೆಂಬ ಬಯಕೆಯಾಗಿದೆ.
ವಿಮಾನಯಾನ ಅಭಿವೃದ್ಧಿಗೊಳಿಸಬೇಕು
ಇನ್ನು ಮೈಸೂರಿನ ಅಭಿವೃದ್ಧಿಯಲ್ಲಿ ಸಂಪರ್ಕದ ಪಾತ್ರವಿದ್ದು, ಹೆದ್ದಾರಿ ಅಭಿವೃದ್ಧಿ ಮತ್ತು ವಿಮಾನಯಾನದತ್ತ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈಗಾಗಲೇ ಎಕ್ಸ್ ಪ್ರೇಸ್ ವೇ ಬಳಿಕ ಮೈಸೂರು ಮತ್ತು ಬೆಂಗಳೂರಿನ ನಡುವೆ ಪ್ರಯಾಣದ ಅಂತರ ಕಡಿಮೆಯಾಗಿದೆ. ಇದರ ಜತೆಗೆ ವಿಮಾನಯಾನದತ್ತವೂ ಗಮನಹರಿಸಬೇಕಾಗಿದೆ. ಮೈಸೂರಿನಲ್ಲಿರುವ ವಿಮಾನ ನಿಲ್ದಾಣದ ರನ್ ವೇ ವಿಸ್ತರಿಸುವ ಮೂಲಕ ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕಾಗಿದೆ.

ಇದು ಸಾಧ್ಯವಾಗಬೇಕಾದರೆ ರನ್ ವೇಗೆ ಇರುವ ಅಗತ್ಯ ಭೂಮಿಯ ಸ್ವಾಧೀನ ಕಾರ್ಯ ನಡೆಯ ಬೇಕಾಗಿದೆ. ಇದಕ್ಕೆ ಅನುದಾನವೂ ಬಿಡುಗಡೆಯಾಗಬೇಕಿದೆ. ಕೇಂದ್ರದೊಂದಿಗೆ ರಾಜ್ಯ ಸರ್ಕಾರ ಕೈಜೋಡಿಸಿ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಮುಂದಾದರೆ ವಿಮಾನಯಾನ ಅಭಿವೃದ್ಧಿಯಾಗಲಿದೆ. ಸದ್ಯದ ಪರಿಸ್ಥಿಕತಿಯಲ್ಲಿ ಲಘು ವಿಮಾನಗಳಷ್ಟೇ ಮೈಸೂರಿಗೆ ಬರುವಂತಾಗಿದೆ.
ಅನುದಾನ ಘೋಷಣೆ ಮಾಡುತ್ತಾರಾ?
ಇನ್ನು ಮೈಸೂರು ನಗರದ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ನಗರ ವಿಸ್ತಾರವಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಲ್ಲಿಯೂ ಟ್ರಾಫಿಕ್ ಸಮಸ್ಯೆಗಳು ಎದುರಾಗುವ ಸಾಧ್ಯೇತೆ ಇಲ್ಲದಿಲ್ಲ. ಅದನ್ನು ತಡೆಯಬೇಕಾದರೆ ಈಗಿನಿಂದಲೇ ಕ್ರಮ ಕೈಗೊಳ್ಳಬೇಕಾಗಿದೆ. ಹೀಗಾಗಿ ಪೆರಿಫೆರಲ್ ರಿಂಗ್ ರಸ್ತೆ (ಹೊ ವರ್ತುಲ ರಸ್ತೆ)ನಿರ್ಮಾಣ ಮಾಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಇದಕ್ಕೆ ಅಗತ್ಯವಿರುವ ಭೂಮಿಯ ಸ್ವಾಧೀನ ಕಾರ್ಯವೂ ನಡೆಯಬೇಕಿದೆ.

ಇದಕ್ಕೆ ಅನುದಾನ ಘೋಷಣೆ ಮಾಡುವುದು ಹಾಗೂ ಮೈಸೂರು ಮಹಾನಗರ ಪಾಲಿಕೆಗೆ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಕೊಡುತ್ತಿರುವ 150 ಕೋಟಿ ರೂ. ಅನುದಾನದ ಬದಲಿಗೆ 300 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂಬ ಒತ್ತಾಯವೂ ಇದೆ ಇದಕ್ಕೆ ಬಜೆಟ್ ನಲ್ಲಿ ಸ್ಪಂದನೆ ಸಿಗುತ್ತಾ ಎಂಬುದನ್ನು ನೋಡಬೇಕಾಗಿದೆ.
ಪಾರಂಪರಿಕ ಕಟ್ಟಡಗಳಿಗೆ ಕಾಯಕಲ್ಪ ಬೇಕು
ಇದರ ನಡುವೆ ಮೈಸೂರು ನಗರದ ಅಭಿವೃದ್ಧಿಯತ್ತ ಗಮನಹರಿಸಬೇಕಾಗಿದೆ. ಹೀಗಾಗಿ ಅಗತ್ಯ ಇರುವ ಕಡೆ ಫ್ಲೇ ಓವರ್ ನಿರ್ಮಾಣ ಕೈಗಾರಿಕೆಗಳ ಉತ್ತೇಜನಕ್ಕಾಗಿ ಮಲ್ಟಿ ಸ್ಟೋರ್ ಪಾರ್ಕಿಂಗ್, ಮೈಸೂರು-ಮಂಗಳೂರು ನಡುವೆ ಇಂಡಸ್ಟ್ರಿಯಲ್ ಕಾರಿಡಾರ್ ಹಾಗೂ ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡಬೇಕೆಂಬ ಸಲಹೆಗಳು ಕೇಳಿಬಂದಿದೆ.
ಇದರ ನಡುವೆ ಅರಮನೆ, ಜಯಲಕ್ಷ್ಮೀ ವಿಲಾಸ ಅರಮನೆ, ದೇವರಾಜ ಮತ್ತು ಲ್ಯಾನ್ಸ್ಡೌನ್ ಕಟ್ಟಡ, ಹಳೆಯ ಡೀಸಿ ಕಚೇರಿ ಕಟ್ಟಡ, ದೊಡ್ಡ ಗಡಿಯಾರ, ಮಹಾರಾಣಿ ಮಹಿಳಾ ಕಾಲೇಜು, ಮಹಾರಾಜ ಕಾಲೇಜು ಕಟ್ಟಡ ಸೇರಿದಂತೆ ನೂರಾರು ಪಾರಂಪರಿಕ ಕಟ್ಟಡಗಳು ಕಾಯಕಲ್ಪಕ್ಕೆ ಕಾದಿದ್ದು ಅದಕ್ಕೆ ಬಜೆಟ್ ನಲ್ಲಿ ಮನ್ನಣೆ ಸಿಗುತ್ತಾ ಎಂಬ ನಿರೀಕ್ಷೆಗಳಿವೆ.
ಇದೆಲ್ಲದರ ನಡುವೆ ಜಿಲ್ಲೆಯ ಹಿಮ್ಮಾವು ಬಳಿ ಫಿಲ್ಮ್ಸಿಟಿ ಸ್ಥಾಪಿಸುವ ಬಗ್ಗೆ ಈ ಹಿಂದೆ ಸಿಎಂ ಆಗಿದ್ದಾಗ ಸಿದ್ದರಾನಯ್ಯ ಘೋಷಣೆ ಮಾಡಿದ್ದರು. ಆದರೆ ಅದು ರಾಮನಗರಕ್ಕೆ ಸ್ಥಳಾಂತರವಾಗಿತ್ತು. ಆದರೆ ಇದಕ್ಕೊಂದು ತಾರ್ಕಿಕ ಅಂತ್ಯ ಸಿಗುತ್ತಾ? ಇಷ್ಟೇ ಅಲ್ಲದೆ, ಕೆಆರ್ ಎಸ್ ನ ಬೃಂದಾವನ ಗಾರ್ಡನ್ ಮಾದರಿಯಲ್ಲಿ ಕಬಿನಿಯಲ್ಲಿ ಉದ್ಯಾನ ನಿರ್ಮಾಣ ಮಾಡಿ ಪ್ರವಾಸಿಗರನ್ನು ಆಕರ್ಷಿಸುವುದು, ಸೇರಿದಂತೆ ಪ್ರವಾಸೋದ್ಯಮದ ಅಭಿವೃದ್ಧಿಗೆ ಉತ್ತೇಜನ ನೀಡುವ ಚಿಂತನೆಯನ್ನು ಬಜೆಟ್ ನಲ್ಲಿ ಸಿದ್ದರಾಮಯ್ಯನವರು ಮಾಡುತ್ತಾರಾ? ಎಂಬುದನ್ನು ಕಾದು ನೋಡಬೇಕಾಗಿದೆ.
ರೈತರು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ
ಕಳೆದ ಮುಂಗಾರಿನಲ್ಲಿ ವಾಡಿಕೆಯ ಮಳೆಯಾಗದೆ ರಾಜ್ಯದಲ್ಲಿ ಬರ ಕಾಣಿಸಿಕೊಂಡಿದೆ. ಇದರಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ. ಹೀಗಿರುವಾಗ ರೈತರ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಯಾವ ಯೋಜನೆಗಳನ್ನು ಜಾರಿಗೆ ತರುತ್ತಾರೆ? ಎಂಬುದು ಕೂಡ ರೈತರ ನಿರೀಕ್ಷೆಯಾಗಿದೆ. ಒಟ್ಟಾರೆ ಹೇಳಬೇಕೆಂದರೆ ಈ ಬಾರಿ ಬಜೆಟ್ ಮಂಡನೆ ಸಿದ್ದರಾಮಯ್ಯ ಅವರಿಗೆ ಸುಲಭವಾಗಿ ಉಳಿದಿಲ್ಲ. ಹೀಗಾಗಿ ತವರು ಜಿಲ್ಲೆಯ ಜನ ಬೆಟ್ಟದಷ್ಟು ನಿರೀಕ್ಷೆಗಳನ್ನಿಟ್ಟುಕೊಂಡರೂ ಅಂತಿಮವಾಗಿ ಬಜೆಟ್ ಮಂಡನೆ ಬಳಿಕವೇ ಗೊತ್ತಾಗಬೇಕಿದೆ.












Click it and Unblock the Notifications