ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರವ ಮೌನದಲ್ಲಿ ಮುಳುಗಿದ ಮೈಸೂರು

|
Google Oneindia Kannada News

ಮೈಸೂರು, ಡಿ. 11 : ಅರಮನೆ ನಗರಿ ಮೈಸೂರು ಸುಧೀರ್ಘ ಮೌನದಲ್ಲಿ ಮುಳುಗಿದೆ. ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನ ನಿಧನರಾದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಪಾರ್ಥಿವ ಶರೀರ ಮಧ್ಯರಾತ್ರಿ 2 ಗಂಟೆ ವೇಳಗೆ ಮೈಸೂರು ತಲುಪಿತು. ಅಂಭಾವಿಲಾಸ ಅರಮನೆಯಲ್ಲಿನ ಕಲ್ಯಾಣ ಮಂಟಪದಲ್ಲಿ ಒಡೆಯರ್ ಮೃತದೇಹ ಇಡಲಾಗಿದ್ದು, ಮುಂಜಾನೆಯಿಂದಲೇ ಅಂತಿಮ ದರ್ಶನಕ್ಕೆ ಜನಸಾಗರ ಹರಿದು ಬರುತ್ತಿದೆ.

ಮಂಗಳವಾರ ರಾತ್ರಿ 9.15ಕ್ಕೆ ಬೆಂಗಳೂರಿನಿಂದ ಶ್ರೀಕಂಠದತ್ತ ಒಡೆಯರ್‌ ಪಾರ್ಥಿವ ಶರೀರವನ್ನು ವಿಶೇಷ ವಾಹನದ ಮೂಲಕ ಮೈಸೂರಿಗೆ ತೆಗೆದುಕೊಂಡು ಹೋಗಲಾಯಿತು. ರಾಮನಗರ, ಮಂಡ್ಯ ಸೇರಿದಂತೆ ದಾರಿಯುದ್ದಕ್ಕೂ ಸಾರ್ವಜನಿಕರು ಒಡೆಯರ್ ದೇಹದ ಅಂತಿಮ ದರ್ಶನ ಪಡೆದರು. ಬುಧವಾರ ಬೆಳಗ್ಗೆ ಮೂರು ಗಂಟೆಯಿಂದಲೇ ಅರಮನೆಯತ್ತ ಜನಸಾಗರ ಹರಿದು ಬರುತ್ತಿದ್ದು, ಮೃತದೇಹದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. (ಶ್ರೀಕಂಠದತ್ತ ಒಡೆಯರ್ ವಿಧಿವಶ)

Mysore

ಬುಧವಾರ ಸಂಜೆ ಮಧುವನದಲ್ಲಿ ಒಡೆಯರ್ ಅಂತ್ಯ ಸಂಸ್ಕಾರ ನಡೆಯಲಿದ್ದು, ಅದಕ್ಕಾಗಿ ಜಿಲ್ಲಾಡಳಿತ, ಅರಮನೆ ಸಿಬ್ಬಂದಿ ಅಗತ್ಯ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಬುಧವಾರ ಮಧ್ಯಾಹ್ನ ಸುಮಾರು 1.30ರವರೆಗೆ ಮೃತದೇಹದ ಅಂತಿಮ ದರ್ಶನ ಪಡೆಯಬಹುದಾಗಿದ್ದು, ನಂತರ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದೆ. ಒಡೆಯರ್ ನಿಧನದ ಸುದ್ದಿ ಕೇಳಿದ ಕ್ಷಣದಿಂದ ಮೈಸೂರು ನಗರದಲ್ಲಿ ನೀರವ ಮೌನ ಆವರಿಸಿದೆ. (ಒಡೆಯರ್ ನಿಧನಕ್ಕೆ ಗಣ್ಯರ ಕಂಬನಿ)

ಮಂಗಳವಾರ ಒಡೆಯರ್ ನಿಧನದ ಸುದ್ದಿ ತಿಳಿದ ತಕ್ಷಣ ತ್ಯಾಗರಾಜ ರಸ್ತೆ, ರಾಮಾನುಜ ರಸ್ತೆ, ಮಹಾತ್ಮ ಗಾಂಧಿ ರಸ್ತೆಯಲ್ಲಿ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ಬುಧವಾರ ಒಡೆಯರ್ ಅಂತ್ಯಕ್ರಿಯೆ ಮುಗಿಯುವ ತನಕ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿರಲಿವೆ. ನಗರದಲ್ಲಿ ಸ್ವಯಂ ಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಜನರು ಅರಮನೆಗೆ ತೆರಳಿ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. (ಒಡೆಯರ್ ಅವರಿಗೆ ಚಿತ್ರ ನಮನ)

ಬುಧವಾರ ಬೆಳಗ್ಗೆ ವಸತಿ ಸಚಿವ ಅಂಬರೀಶ್, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್, ಮೂಸೂರು ಜಿಲ್ಲಾಧಿಕಾರಿ ಒಡೆಯರ್ ಮೃತ ದೇಹಕ್ಕೆ ಅಂತಿಮ ನಮನ ಸಲ್ಲಿಸಿದರು. ಸಾರ್ವಜನಿಕರು ಅರಮನೆಯತ್ತ ಧಾವಿಸುತ್ತಿದ್ದು ಎಲ್ಲರಿಗೂ ಮೃತ ದೇಹದ ಅಂತಿಮ ದರ್ಶನಕ್ಕೆ ಅಗತ್ಯ ವ್ಯವಸ್ಥೆಯನ್ನು ಮಾಡಲಾಗಿದೆ.

English summary
The Mysore administration and Mysore police have made arrangements to facilitate public to view the body of Srikantadatta Narasimharaja Wadiyar at Amba Vilas Palace. The last scion of the erstwhile royal family of Mysore, Srikantadatta Narasimharaja Wadiyar died on Tuesday, December 10 in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X