ಮೈಸೂರಿನಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ, ಇವುಗಳ ವಿಶೇಷತೆ ತಿಳಿಯಿರಿ
ಮೈಸೂರು, ಅಕ್ಟೋಬರ್, 21: ಮೈಸೂರು ದಸರಾ ಮಹೋತ್ಸವ ದಿನಕಳೆದಂತೆ ವಿಶಿಷ್ಟ ರಂಗು ಪಡೆದುಕೊಳ್ಳುತ್ತಿದ್ದು, ವಿಂಟೇಜ್ ಕಾರುಗಳ ಪ್ರದರ್ಶನ, ರೈತ ದಸರಾ, ದಂಪತಿಗಳ ಟಾಂಗಾ ಸವಾರಿ ಆಕರ್ಷಕವಾಗಿತ್ತು.
ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಂಟೇಜ್ ಕಾರುಗಳ ರ‍್ಯಾಲಿಯನ್ನು ಪ್ರವಾಸಿಗರು ಕಣ್ತುಂಬಿಕೊಂಡರು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ವಿಂಟೇಜ್ ಕಾರುಗಳನ್ನು ಸಾವಿರಾರು ಮಂದಿ ವಾಹನ ಸವಾರು, ಪ್ರವಾಸಿಗರು, ಸಾರ್ವಜನಿಕರು ವೀಕ್ಷಿಸಿ ಖುಷಿಪಟ್ಟರು. ಅಲ್ಲದೇ ಕಾರುಗಳ ಎದುರು ನಿಂತು ಸೆಲ್ಫಿ ತೆಗೆದುಕೊಂಡರು. ಈ ಕಾರುಗಳ ರ‍್ಯಾಲಿ ದಸರೆ ಮತ್ತಷ್ಟು ಮೆರುಗು ನೀಡಿತು.

ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿನ ಇನ್ಫೋಸಿಸ್ ಬಳಿ ಇರುವ ಗ್ಯಾರೇಜ್‌ನಲ್ಲಿ ಇರಿಸಿರುವ 60 ವಿಂಟೇಜ್ ಕಾರುಗಳಲ್ಲಿ 12 ಕಾರುಗಳ ರ‍್ಯಾಲಿ ನಗರದೆಲ್ಲೆಡೆ ಸಂಚರಿಸಿತು. ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ರ‍್ಯಾಲಿಗೆ ಚಾಲನೆ ನೀಡಿದರು. ಇನ್ಫೋಸಿಸ್ ಬಳಿಯಿಂದ ಆರಂಭಗೊಂಡ ಕಾರು ರ‍್ಯಾಲಿ ರಿಂಗ್ ರಸ್ತೆ, ಹುಣಸೂರು ರಸ್ತೆ, ಮಾನಸ ಗಂಗೋತ್ರಿಯ ಕ್ಲಾಕ್ ಟವರ್, ಕುಕ್ಕರಹಳ್ಳಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಗನ್‌ಹೌಸ್ ವೃತ್ತ, ಲಲಿತ ಮಹಲ್ ರಸ್ತೆ ಮೂಲಕ ಸಾಗಿ ಕುರುಬಾರಹಳ್ಳಿ ವೃತ್ತದಲ್ಲಿ ಅಂತ್ಯಗೊಂಡಿತು.
ಅರಮನೆಯಲ್ಲಿ ಸರಸ್ವತಿ ಪೂಜೆ
ನವರಾತ್ರಿ ಹಿನ್ನೆಲೆಯಲ್ಲಿ ಅರಮನೆಯಲ್ಲಿ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸರಸ್ವತಿ ಪೂಜೆ ನೆರವೇರಿಸಿದರು. ಮೈಸೂರು ಅರಮನೆಯಲ್ಲಿ ವಿದ್ಯಾದೇವತೆ ಸರಸ್ವತಿಗೆ ಬೆಳಗ್ಗೆ 10.5ರಿಂದ 10.25ರ ಶುಭ ಲಗ್ನದಲ್ಲಿ ಅರಮನೆಯ ರಾಜಪುರೋಹಿತರ ಸಮ್ಮುಖದಲ್ಲಿ ಸರಸ್ವತಿ ವಿಗ್ರಹವಿಟ್ಟು ಪುರಾತನ ಕಾಲದ ವೀಣೆ, ಧಾರ್ಮಿಕ ಗ್ರಂಥಗಳಿಗೆ ವೇದಘೋಷದೊಂದಿಗೆ ಯದುವೀರ್ ಅವರು ಪೂಜೆ ನೆರವೇರಿಸಿದರು.
ಗಮನ ಸೆಳೆದ ಮಕ್ಕಳ ದಸರಾ
ಮಕ್ಕಳೊಂದಿಗೆ ಶುಕ್ರವಾರ ಮಹಿಳಾ ಮತ್ತು ಮಕ್ಕಳ ದಸರಾಕ್ಕೆ ಆಗಮಿಸಿದವರಿಗೆ ಅಂಗನವಾಡಿ ಮಕ್ಕಳ ವೇಷಭೂಷಣ, ನೃತ್ಯ ಕಣ್ತುಂಬಿಕೊಳ್ಳುವ ಅವಕಾಶ ಒದಗಿ ಬಂತು. ಅಷ್ಟೇ ಅಲ್ಲದೆ ಕಡಬ ಶ್ರೀನಿವಾಸ್ ಅವರು ನಡೆಸಿಕೊಟ್ಟ ಜಾದೂ ಪ್ರದರ್ಶನ, ಅಂಗನವಾಡಿ ಮಹಿಳೆಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳ ರಂಜನೆ ದೊರೆಯಿತು. ಅದೇರೀತಿ ದಸರಾ ಕ್ರೀಡಾದಲ್ಲಿ ಮಿಂಚಿನ ಓಟ ಪ್ರದರ್ಶಿಸಿದ ಧಾರವಾಡ ಜಿಲ್ಲೆಯ ವೈಘಿ.ಎ. ಶಶಿಕಾಂತ್ ಹಾಗೂ ಚಿಕ್ಕಮಗಳೂರು ಎಸ್‌ಎಸ್ ಸ್ನೇಹಾ ದಸರಾ ಅಥ್ಲೆಟಿಕ್ಸ್ ಕ್ರೀಡಾಕೂಟದ ವೇಗದ ಓಟಗಾರರಾಗಿ ಹೊರಹೊಮ್ಮಿದರು.
ಜೈಲು ಹಕ್ಕಿಗಳಿಗೆ ಯೋಗಾಭ್ಯಾಸ
ಕಳೆದ ಎರಡು ತಿಂಗಳಿನಿಂದ ಯೋಗಾಭ್ಯಾಸದಲ್ಲಿ ನಿರತರಾಗಿದ್ದ ಜೈಲುವಾಸಿಗಳು, ಎರಡು ಗಂಟೆಗೂ ಹೆಚ್ಚು ಕಾಲ ಸಾಮೂಹಿಕವಾಗಿ ಯೋಗಾಸನ ಪ್ರದರ್ಶಿಸಿದರು. ಕೇಂದ್ರ ಕಾರಾಗೃಹ ಆವರಣದಲ್ಲಿ ಶುಕ್ರವಾರ ದಸರಾ ಮಹೋತ್ಸವದ ಪ್ರಯುಕ್ತ ಯೋಗ ದಸರಾ ಉಪ ಸಮಿತಿಯಿಂದ ನಡೆದ ಯೋಗ ದಸರಾದಲ್ಲಿ ಹಲವು ದಿನಗಳಿಂದ ಯೋಗಭ್ಯಾಸದಲ್ಲಿ ನಿರತರಾಗಿದ್ದ ಕಾರಾಗೃಹ ವಾಸಿಗಳು, ಯೋಗ ಶಿಕ್ಷಕರ ಮಾರ್ಗದಲ್ಲಿ ನಾನಾ ಆಸನಗಳನ್ನು ಪ್ರದರ್ಶನ ಮಾಡಿದರು. ಬಳಿಕ ಸಿಹಿ ಹಂಚಿ ಯೋಗ ದಸರಾವನ್ನು ವಿಶಿಷ್ಟವಾಗಿ ಆಚರಿಸಲಾಯಿತು.











Click it and Unblock the Notifications