Karnataka assembly election 2023: ಮೂಲ ಕಾಂಗ್ರೆಸ್ಸಿಗರನ್ನು ಕಾಯುವುದೇ ನನ್ನ ಕೆಲಸ: ವೀರಪ್ಪ ಮೊಯ್ಲಿ
ಮೂಲ ಕಾಂಗ್ರೆಸ್ಸಿಗರನ್ನು ಕಾಯುವುದೇ ನನ್ನ ಕೆಲಸವಾಗಿದೆ. ನಾನು ಮತ್ತು ಮಾಜಿ ಶಾಸಕ ವಾಸು ಮೂಲ ಕಾಂಗ್ರೆಸ್ಸಿಗರು ಎಂದು ವೀರಪ್ಪ ಹೇಳಿದರು
ಮೈಸೂರು, ಫೆಬ್ರವರಿ, 05: ಮೂಲ ಕಾಂಗ್ರೆಸ್ಸಿಗರನ್ನು ಕಾಯುವುದೇ ನನ್ನ ಕೆಲಸವಾಗಿದೆ. ನಾನು ಮತ್ತು ಮಾಜಿ ಶಾಸಕ ವಾಸು ಮೂಲ ಕಾಂಗ್ರೆಸ್ಸಿಗರು. ಯಾರಿಗೂ ಯಾರು ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ. ವಾಸುಗೆ ಚಾಮರಾಜ ಕ್ಷೇತ್ರದ ಟಿಕೆಟ್ ಸಿಗಲಿದೆ ಎಂದು ವೀರಪ್ಪ ಮೊಯ್ಲಿ ಘೋಷಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಸು ಅವರಿಗೆ ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ. ವಾಸು ಬಲಿಷ್ಟವಾದ ಅಭ್ಯರ್ಥಿಯಾಗಿದ್ದಾರೆ. ಮೊದಲ ಪಟ್ಟಿಯಲ್ಲಿ ವಾಸು ಅವರ ಹೆಸರು ಇರುತ್ತದೆ. ಎಲ್ಲರೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಪಕ್ಷ ಬಲವರ್ಧನೆ ನಮ್ಮ ಕೆಲಸವಾಗಿದೆ ಎಂದರು.

ಕಾಂಗ್ರೆಸ್ ಮಹಾಸಾಗರ ಇದ್ದ ಹಾಗೆ
ನಮ್ಮಲ್ಲಿ ಸಾವಿರಾರು ಬಣ ಇದೆ. ಸಣ್ಣ ಸಣ್ಣ ನದಿಗಳು ಸೇರಿ ಸರೋವರ ಕೊನೆಗು ಅವು ಸೇರುತ್ತವೆ. ಸಮುದ್ರ ಸೇರಿದ ಕೂಡಲೇ ಯಾವ ಬಣ ಇರುವುದಿಲ್ಲ. ಕೆಲವು ಸಣ್ಣ -ಸಣ್ಣ ನದಿಗಳು ಬತ್ತಿ ಹೋಗುತ್ತವೆ. ಕಾಂಗ್ರೆಸ್ ಮಹಾಸಾಗರ ಇದ್ದ ಹಾಗೆ. ನನಗೆ ಯಾವುದೇ ಅಸಮಾಧಾನ ಇಲ್ಲ. ಬಣ ರಾಜಕೀಯ ಕಾಂಗ್ರೆಸ್‌ನಲ್ಲಿ ಇಲ್ಲ. ಯಾರಿಗೆ ಅರ್ಹತೆ ಇದೆಯೋ ಅವರಿಗೆ ಟಿಕೆಟ್ ಸಿಗುತ್ತದೆ ಎಂದರು.
ಡಾ.ಜಿ.ಪರಮೇಶ್ವರ್ ಅವರು ಪ್ರದೇಶವಾರು ಪ್ರಣಾಳಿಕೆ ಸಿದ್ಧಪಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಡಾ.ಜಿ.ಪರಮೇಶ್ವರ್ ರಾಜೀನಾಮೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು ಅವರ ಜೊತೆ ಮಾತನಾಡಿದ್ದೇನೆ. ಅವರಿಗೆ ಯಾವುದೇ ಬೇಸರವಿಲ್ಲ. ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದರು.
ನಾವೆಲ್ಲ ಕಾಂಗ್ರೆಸ್ ಬಣವಷ್ಟೇ
ಸಿದ್ದರಾಮಯ್ಯ, ಕಾಂಗ್ರೆಸ್ ಬಣವೆಂಬುದಿಲ್ಲ. ನಾವೆಲ್ಲ ಕಾಂಗ್ರೆಸ್ ಬಣವಷ್ಟೇ. ತನ್ವೀರ್ ಸೇಠ್ ಅವರು ಅನೇಕ ಬಾರಿ ಶಾಸಕರಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರ ಬೇರು ಕಾಂಗ್ರೆಸ್‌ನಲ್ಲಿ ಬಲವಾಗಿದೆ ಎಂದರು. ಇನ್ನು ಜಯಲಕ್ಷ್ಮಿಪುರಂನಲ್ಲಿರುವ ಮಾಜಿ ಶಾಸಕ ವಾಸು ಮನೆಗೆ ಭೇಟಿ ನೀಡಿದ ಹಿರಿಯ ಕಾಂಗ್ರೆಸ್ಸಿಗ ವೀರಪ್ಪ ಮೊಯ್ಲಿ, ಮನೆಯಲ್ಲಿ ಉಪಾಹಾರ ಸೇವನೆ ಮಾಡಿ ಮಾತುಕತೆ ನಡೆಸಿದರು. ಸಿದ್ದರಾಮಯ್ಯರಿಂದ ಮುನಿಸಿಕೊಂಡು, ಅಂತರ ಕಾಯ್ದುಕೊಂಡಿರುವ ಮಾಜಿ ಶಾಸಕ ವಾಸು ಅವರಿಗೆ ಸಮಾಧಾನಪಡಿಸಲು ವೀರಪ್ಪ ಮೊಯ್ಲಿ ಹೋಗಿದ್ದರು.











Click it and Unblock the Notifications