ಸ್ವಪಕ್ಷದ ಬಗ್ಗೆಯೇ ಬೇಸರವ್ಯಕ್ತಪಡಿಸಿದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್
ಮೈಸೂರು, ಜನವರಿ 18: ಬಿಜೆಪಿಯಲ್ಲಿ ನಾನೊಬ್ಬ ಮೂಕ ಪ್ರೇಕ್ಷಕನಷ್ಟೇ. ಆಪರೇಷನ್ ಕಮಲದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಸ್ವಪಕ್ಷದ ಬಗ್ಗೆ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೇರಲು ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನೊಬ್ಬ ಮೂಕ ಪ್ರೇಕ್ಷಕ. ಎಲ್ಲವನ್ನೂ ನಾನು ನೋಡುತ್ತಿದ್ದೇನೆ. ಆದರೆ ನನಗೆ ಯಾವುದಕ್ಕೂ ಪ್ರತಿಕ್ರಯಿಸಲು ಆಗುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ನಾವಿರುವುದು ವಿರೋಧ ಪಕ್ಷದ ಸ್ಥಾನ. ಅಲ್ಲಿದ್ದುಕೊಂಡು ನಾವು ನಮ್ಮ ಕರ್ತವ್ಯ ನಿರ್ವಹಿಸಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಕೀಳು ರಾಜಕಾರಣ ಮಾಡಬಾರದು. ಈ ತೆರನಾದ ರಾಜಕಾರಣ ನೋಡಿ ಜನ ಬೇಸತ್ತಿದ್ದಾರೆ. ಇಂತಹವರನ್ನು ನಾವು ಯಾಕೆ ಆಯ್ಕೆ ಮಾಡಿದ್ದು ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಕೀಳುಮಟ್ಟದ ರಾಜಕಾರಣವನ್ನು ನಾನು ಎಂದು ನೋಡಿರಲಿಲ್ಲ. ಕರ್ನಾಟಕದ ರಾಜಕಾರಣದ ಬಗ್ಗೆ ದೇಶದಲ್ಲಿ ಒಳ್ಳೆಯ ಅಭಿಪ್ರಾಯ ಇತ್ತು. ಆದರೆ ಸದ್ಯ ಎಲ್ಲವೂ ಮಣ್ಣುಪಾಲಾಗಿದೆ ಎಂದರು.

ಸರ್ಕಾರ ಬೀಳುತ್ತದೆ ಎಂಬ ವಿಚಾರದ ಬಗ್ಗೆ ರೇವಣ್ಣನನ್ನೇ ಕೇಳಿ. ಭವಿಷ್ಯ ಹೇಳೋದ್ರಲ್ಲಿ ಎಚ್.ಡಿ ರೇವಣ್ಣ ನಿಸ್ಸೀಮ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಜೆಡಿಎಸ್ ವಿರುದ್ಧ ಕಿಡಿಕಾರಿದ ಶ್ರೀನಿವಾಸ್ ಪ್ರಸಾದ್, ಹೆಬ್ಬುಲಿ ಇರುವ ಹಳ್ಳದಲ್ಲಿ ಕತ್ತೆ ಅರಚಿಕೊಂಡು ಬಿದ್ದ ಹಾಗೆ ಆಗಿದೆ ಜೆಡಿಎಸ್ ಪಾಡು. ಮೈತ್ರಿ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಜೆಡಿಎಸ್-ಕಾಂಗ್ರೆಸ್ ನಾಯಕರುಗಳಿಗೆ ಹೊಂದಾಣಿಕೆ ಇಲ್ಲ. ಅಧಿಕಾರ ವ್ಯಾಮೋಹಕ್ಕಾಗಿ ಉಭಯ ನಾಯಕರು ಅಂತರಿಕ ಕಚ್ಚಾಟದಲ್ಲೇ ಇದ್ದಾರೆ ಎಂದು ಲೇವಡಿ ಮಾಡಿದರು.












Click it and Unblock the Notifications