ಬೈಕ್ – ಟೆಂಪೋ ನಡುವೆ ಡಿಕ್ಕಿ : ಸ್ಥಳದಲ್ಲೇ ಇಬ್ಬರ ಸಾವು
ಮೈಸೂರು, ಡಿಸೆಂಬರ್ 15 :ಬೈಕ್ ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಮುದ್ದನಹಳ್ಳಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ.
ಮಹೇಶ್ (18), ರವಿ (11) ಮೃತಪಟ್ಟವರು. ಅಪಘಾತದಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತಿದ್ದ ಶೈಲಾ ಎಂಬ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಟೆಂಪೋ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ನಂಜನಗೂಡು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮನೆಗೆ ಕನ್ನ ಹಾಕಿದ ಅಪ್ರಾಪ್ತ ಚೋರರು ಮೈಸೂರಿನಲ್ಲಿ ಬಂಧನ
ಮನೆಗಳವು ಮಾಡಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಉದಯಗಿರಿ ಪೊಲೀಸರು ಬಂಧಿತರಿಂದ 170 ಗ್ರಾಂ ಚಿನ್ನಾಭರಣ, ಮೊಬೈಲ್ ಫೋನುಗಳು ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಮೊಹಮದ್ ವಸೀಂ (19), ಮೆಹೇಬುದ್ದೀನ್ (20) ಹಾಗೂ 17 ವರ್ಷದ ಬಾಲಕ ಬಂಧಿತರು. ಕಲ್ಯಾಣಗಿರಿಯ ಮನೆಯೊಂದರಲ್ಲಿ ಕಳವು ಮಾಡಿದ್ದ ಇವರು, ಕಳೆದ ಜನವರಿ ತಿಂಗಳಿನಲ್ಲಿ ಶಕ್ತಿ ನಗರದ ಮನೆಯೊಂದರಲ್ಲಿ ಕಳವು ಮಾಡಿದ್ದರು. ಕಳ್ಳತನ ಮಾಡುವ ಸಲುವಾಗಿ ದ್ವಿಚಕ್ರ ವಾಹನವೊಂದನ್ನು ಕಳವು ಮಾಡಿದ್ದರು. ಉದಯಗಿರಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications