ಮೈಸೂರು ಯುವರಾಜನಿಗೆ ಆದ್ಯವೀರ್ ಎಂದು ನಾಮಕರಣ
ಮೈಸೂರು, ಫೆಬ್ರವರಿ 25 : ಯದುವಂಶದ ಕುಡಿಗೆ ಇಂದು ನಾಮಕರಣ ಶಾಸ್ತ್ರ ನಡೆಯಿತು. ಮಗುವಿಗೆ ಆದ್ಯವೀರ್ ನರಸಿಂಹರಾಜ ಒಡೆಯರ್ ಎಂದು ನಾಮಕರಣ ಮಾಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದವರು ಮಗುವಿಗೆ ಆರ್ಶೀರ್ವಾದ ಮಾಡಿದರು.
ಬೆಂಗಳೂರಿನ ಅರಮನೆಯಲ್ಲಿ ಭಾನುವಾರ ನಾಮಕರಣ ಕಾರ್ಯಕ್ರಮ ನಡೆಯಿತು. ಬಂಧುಗಳು ಮತ್ತು ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ರಾಜಮಾತೆ ಪ್ರಮೋದಾದೇವಿ ಒಡೆಯರ್ ಬೆಂಗಳೂರಿನ ಅರಮನೆಗೆ ಶನಿವಾರ ರಾತ್ರಿಯೇ ಆಗಮಿಸಿದ್ದರು.
ಕಳೆದ ಡಿಸೆಂಬರ್‌ನಲ್ಲಿ ಮಹಾರಾಜ ಯದುವೀರ್ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿತ್ತು. ಬೆಂಗಳೂರಿನ ಆಸ್ಪತ್ರೆಯಲ್ಲಿ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

ನಾಮಕರಣಕ್ಕೆ ಹಲವು ದಿನಗಳು ನಿಗದಿಯಾಗಿದ್ದರೂ ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಮೈಸೂರು ಯದುವಂಶಕ್ಕೆ 1953ರಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಜನನವಾದ ನಂತರ ಇಲ್ಲಿಯವರೆಗೆ ಯಾವುದೇ ಗಂಡು ಮಕ್ಕಳು ಜನಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಯದುವೀರ್ ಅವರನ್ನು 2013ರಲ್ಲಿ ಸಂಬಂಧಿಕರಲ್ಲೇ ದತ್ತು ತೆಗೆದುಕೊಳ್ಳಲಾಗಿತ್ತು. 2016 ಜೂನ್ 27ರಂದು ತ್ರಿಷಿಕಾ ಕುಮಾರಿ ಜೊತೆ ಮದುವೆ ಮಾಡಿಕೊಡಲಾಗಿತ್ತು.












Click it and Unblock the Notifications