Valentine's Day: ಮೈಸೂರಿನ ಕಾರಂಜಿಕೆರೆ ಪ್ರೇಮಿಗಳ ಮೆಚ್ಚಿನ ತಾಣ, ಯಾಕೆ ಗೊತ್ತಾ..?
ಮೈಸೂರು, ಫೆಬ್ರವರಿ 12: ಪ್ರೇಮಿಗಳಿಗೂ ಕೆರೆಗಳಿಗೂ ಅವಿನಾಭಾವ ಸಂಬಂಧ..ಪ್ರೇಮ ಸಲ್ಲಾಪದೊಂದಿಗೆ ಕೆರೆಗೊಂದು ಕಲ್ಲು ಹೊಡೆಯೋದು ಪ್ರೇಮಿಗಳಿಗೊಂದು ಅಭ್ಯಾಸ..ಅದಕ್ಕೆಂದೇ ಪ್ರೇಮಿಗಳು ಕೆರೆದಡಗಳನ್ನು ಇಷ್ಟಪಡುತ್ತಾರೆ. ಆದರೆ ಎಲ್ಲ ಕೆರೆಗಳತ್ತ ಹೋಗಲು ಅವಕಾಶ ಸಿಗದ ಕಾರಣ ಹೆಚ್ಚಿನ ಪ್ರೇಮಿಗಳು ಮೈಸೂರಿನ ಕಾರಂಜಿಕೆರೆಯತ್ತ ಹೆಜ್ಜೆ ಹಾಕುತ್ತಾರೆ. ಇಲ್ಲಿ ಒಂದಷ್ಟು ಸಮಯ ಕಳೆದು ಹಿಂತಿರುಗುತ್ತಾರೆ. ಅದರಲ್ಲೂ ಪ್ರೇಮಿಗಳ ದಿನಾಚರಣೆಯ ಈ ಸಮಯದಲ್ಲಿ ಇಲ್ಲಿ ಪ್ರೇಮ ಉಕ್ಕೇರುವುದು ಮಾಮೂಲಿಯಾಗಿದೆ.
ನಗರದ ಕುಕ್ಕರಹಳ್ಳಿ ಕೆರೆಗೆ ಹೆಚ್ಚಿ ಪ್ರೇಮಿಗಳು ದಾಂಗುಡಿಯಿಡುತ್ತಿದ್ದರೆ. ಆದರೆ ಕೆಲವು ವರ್ಷಗಳ ಹಿಂದೆಯೇ ಅಲ್ಲಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಪ್ರೇಮಿಗಳು ತಮ್ಮ ಸಮಯವನ್ನು ಕಳೆಯಲು ಕಾರಂಜಿಕೆರೆಯತ್ತ ಬರುವುದು ಅನಿವಾರ್ಯವಾಗಿದೆ. ಇಲ್ಲೂ ಕೂಡ ಮೊದಲಿನಂತೆ ತಮಗೆ ಇಷ್ಟಬಂದಷ್ಟು ಹೊತ್ತು ಠಿಕಾಣಿ ಹೂಡಲು ಅವಕಾಶವಿಲ್ಲ. ನಿರ್ಧಿಷ್ಟ ಸಮಯವಷ್ಟೆ..ಆದರೂ ಪ್ರೇಮಿಗಳು ಇಲ್ಲಿಗೆ ಮುಗಿ ಬೀಳುತ್ತಾರೆ.

ಕಾರಂಜಿಕೆರೆ ಮೃಗಾಲಯ ಪ್ರಾಧಿಕಾರಕ್ಕೆ ಒಳಪಟ್ಟಿದ್ದು, ಈ ಪ್ರದೇಶವನ್ನು ಸುಂದರ ಉದ್ಯಾನವನ್ನಾಗಿ ರೂಪಿಸಿದೆ. ಮೃಗಾಲಯಕ್ಕೆ ಭೇಟಿ ನೀಡುವವರು ಕಾರಂಜಿಕೆರೆಯಲ್ಲಿ ವಿಹರಿಸಲು ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಎಲ್ಲ ವಯೋಮಾನದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದರೂ ಅವರ ನಡುವೆ ಪ್ರೇಮಿಗಳದ್ದೇ ದರ್ಬಾರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಕೆರೆಗೆ ಕಾರಂಜಿ ಕೆರೆ ಎಂದು ಕರೆದರೂ ಕೂಡ ಇಲ್ಲಿ ಸದಾ ಚಿಮ್ಮುವುದು ಪ್ರೇಮಿಗಳ ಪ್ರೇಮಕಾರಂಜಿಯೇ.
ಇಲ್ಲಿದೆ ಹತ್ತಾರು ವಿಶೇಷತೆಗಳು
ಒಂದು ಕಾಲದಲ್ಲಿ ಮೈಸೂರಿನಲ್ಲಿದ್ದ ಕೆರೆಗಳಂತೆಯೇ ಇದ್ದ ಈ ಕೆರೆ ಕಾರಂಜಿಕೆರೆಯಾಗಿ ಪ್ರೇಮಿಗಳ ಹಾಟ್ ಸ್ಪಾಟ್ ಆಗಿ ಬದಲಾಗಿದ್ದು ವಿಶೇಷವೇ... ಇವತ್ತು ಇಲ್ಲಿ ನಿಸರ್ಗ ಸುಂದರತೆ ತಾಂಡವಾಡುತ್ತಿದ್ದರೆ, ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ಆಟ ಸಾಮಾಗ್ರಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಉದ್ಯಾನದ ತುಂಬ ನಡೆದಾಗಿ ಖುಷಿಪಡಲು ಕಾಲುದಾರಿಗಳು, ಕೆರೆಯಲ್ಲಿ ವಿಹರಿಸಲು ದೋಣಿ ವ್ಯವಸ್ಥೆಗಳಿವೆ.

ಇಷ್ಟೇ ಅಲ್ಲದೆ ನಿಸರ್ಗ ಚೆಲುವನ್ನು ಸವಿಯಲು ಬಯಸುವವರನ್ನು ಇಲ್ಲಿ ಚಿಲಿಪಿಲಿ ಗುಟ್ಟುವ ಹಕ್ಕಿಗಳು, ಎಲ್ಲೆಂದರಲ್ಲಿ ಹಾರುವ ಪಾತರಗಿತ್ತಿಗಳು, ಮುಗಿಲೆತ್ತರಕ್ಕೆ ಬೆಳೆದು ನಿಂತು ನೆರಳು ನೀಡುವ ಮರಗಳು, ಅರಳಿ ಕಂಗೊಳಿಸುವ ಹೂಗಿಡಗಳು, ವಿಶಾಲಕೆರೆಗಳ ನಡುವೆ ಸೃಷ್ಟಿಯಾದ ದ್ವೀಪಗಳು ಹೀಗೆ ಹತ್ತಾರು ವಿಶೇಷತೆಗಳು ಕಾಣಿಸುತ್ತವೆ. ಅದರಾಚೆಗೆ ಮರಗಿಡಗಳ ನೆರಳಿನಲ್ಲಿ ಪ್ರೇಮಸಲ್ಲಾಪದಲ್ಲಿ ತೊಡಗಿರುವ ಪ್ರೇಮಹಕ್ಕಿಗಳಿಗೇನು ಕೊರತೆಯಿಲ್ಲ.
ಸದಾ ಪ್ರೇಮದ ತಕಧಿಮಿತ
ಬೇರೆ ಕೆರೆಗಳಿಗೆ ಹೋಲಿಸಿದರೆ ಕಾರಂಜಿಕೆರೆ ವಿಭಿನ್ನವಾಗಿದೆ. ನಗರಕ್ಕೆ ಹೊಂದಿಕೊಂಡಂತಿದ್ದರೂ ನಿಸರ್ಗ ರಮಣೀಯತೆಯನ್ನು ಉಳಿಸಿಕೊಂಡಿದೆ. ಇಲ್ಲಿ ಪ್ರಶಾಂತತೆಗೇನು ಕೊರತೆಯಿಲ್ಲ. ಹೀಗಾಗಿ ಒಂದಷ್ಟು ಸಮಯವನ್ನು ಖುಷಿಯಾಗಿ ಕಳೆಯಲು ಜನ ಬರುತ್ತಾರೆ. ಪ್ರೇಮಿಗಳು ಪರಿಚಿತರ ಕಣ್ಗ ದೃಷ್ಟಿಗೆ ಬೀಳದೆ ಪ್ರೇಮಲೋಕದಲ್ಲಿ ವಿಹರಿಸಲು ಬರುತ್ತಾರೆ. ಇದರಿಂದ ಪ್ರೇಮಿಗಳ ದಿನಾಚರಣೆ ಮಾತ್ರವಲ್ಲದೆ ಎಲ್ಲ ದಿನಗಳಲ್ಲಿಯೂ ಪ್ರೇಮದ ತಕಧಿಮಿತ ಇದ್ದೇ ಇರುತ್ತದೆ.

ಇನ್ನು ಕಾರಂಜಿಕೆರೆ ಬಗ್ಗೆ ಹೇಳಬೇಕೆಂದರೆ ಇದು ಸುಮಾರು 90ಎಕರೆಗಿಂತಲೂ ಹೆಚ್ಚಿನ ಪ್ರದೇಶವನ್ನು ಹೊಂದಿದೆ. ಹಿಂದೆ ಈ ಕೆರೆಯ ನೀರನ್ನು ಸುತ್ತಮುತ್ತಲಿನ ಹಳ್ಳಿಯ ರೈತರು ಬಳಸಿಕೊಳ್ಳುತ್ತಿದ್ದರು. ಆ ನಂತರ ಪಟ್ಟಣ ಬೆಳೆದಂತೆ ಸುತ್ತಮುತ್ತಲಿನ ಕೊಳಕು ಇಲ್ಲಿಗೆ ಹರಿದು ಬಂದು ಕೆರೆಯಲ್ಲಿ ಹೂಳು ತುಂಬಿ ಇಡೀ ಕೆರೆ ಕಲ್ಮಶವಾಯಿತು. ದಿನ ಕಳೆದಂತೆ ಕೆರೆಯ ಸುತ್ತಲೂ ಬೆಳೆದು ನಿಂತ ಮರಗಿಡ ಪೊದೆಗಳಲ್ಲಿ ದೂರದಿಂದ ಬಂದ ಹಕ್ಕಿಗಳು ಗೂಡು ಕಟ್ಟಿ ಸಂಸಾರ ಹೂಡುತ್ತಿದ್ದವು. ಗಣೇಶ ಚತುರ್ಥಿ ಸಂದರ್ಭ ಕೆಲವರು ಗಣಪತಿಯ ವಿಸರ್ಜನೆ ಮಾಡಿದರೆ, ಕೆಲವರು ಜನ ದನ ಮೇಯಿಸಲು ನೀರು ಕುಡಿಸಲು ಉಪಯೋಗಿಸಿಕೊಳ್ಳುತ್ತಿದ್ದರು.
1967ರಲ್ಲಿ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ
ಕಾಲ ಕ್ರಮೇಣ ಅಂದರೆ 1967ರಲ್ಲಿ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಬಂತು. ಆದರೆ ಕೆರೆಯನ್ನು ಅಭಿವೃದ್ಧಿಗೊಳಿಸಿ ಅದನ್ನು ಒಂದು ವಿಹಾರ ತಾಣವನ್ನಾಗಿ ರೂಪುಗೊಳಿಸುವ ಆಲೋಚನೆಯನ್ನು ಯಾರೂ ಮಾಡದ ಕಾರಣ ಮಾಮೂಲಿ ಕೆರೆಯಾಗಿ ಉಳಿದು ಹೋಯಿತು. ತದ ನಂತರ ಕೆಲವು ವರ್ಷಗಳ ಹಿಂದೆ ಕಾರಂಜಿಕೆರೆಯ ಬಳಿ ಚಿಟ್ಟೆಗಳು ವಾಸ್ತವ್ಯ ಹೂಡಿದ್ದನ್ನು ಕಂಡು ಚಿಟ್ಟೆ ಪಾರ್ಕ್ ಸ್ಥಾಪನೆ ಮಾಡಲಾಯಿತು. ವಿಶ್ವವಿದ್ಯಾಲಯದ ಸದಾನಂದ ಎಂಬುವರು ಈ ಚಿಟ್ಟೆ ಪಾರ್ಕ್‌ಗೆ ಜೀವ ತುಂಬಿದರು.
ಇದಾಧ ನಂತರ ಕಲುಷಿತ ನೀರು, ಹೂಳು ತುಂಬಿ ಗಬ್ಬೆದ್ದು ನಾರುತ್ತಿದ್ದ ಕೆರೆಗೊಂದು ಮರುಹುಟ್ಟನ್ನು ಮೃಗಾಲಯ ಪ್ರಾಧಿಕಾರ ನೀಡಲು ಮುಂದಾಯಿತು. ಪ್ರಾಧಿಕಾರದ ಆಗಿನ ಕಾರ್ಯನಿರ್ವಾಹಕ ನಿರ್ದೇಶಕರುಗಳಾದ ಕುಮಾರ್ ಪುಷ್ಕರ್ ಹಾಗೂ ಮನೋಜ್ಕುಮಾರ್ ಅವರು ಕಾರಂಜಿಕೆರೆಯ ಅಭಿವೃದ್ಧಿಯತ್ತ ಗಮನಹರಿಸಿದರು. ಕೆರೆಯ ತುಂಬಾ ತುಂಬಿದ್ದ ಹೂಳನ್ನೆಲ್ಲಾ ಹೊರ ತೆಗೆದರು. ಕೆರೆಗೆ ಬರುವ ಕೊಳಚೆ ನೀರನ್ನೆಲ್ಲಾ ತಪ್ಪಿಸಲು ಸಾಧ್ಯವಾಗದ ಕಾರಣ ಅದನ್ನು ಇಂಗುಗುಂಡಿಯ ಮೂಲಕ ಇಂಗಿಸಿ ತಿಳಿನೀರು ಮಾತ್ರ ಕೆರೆಯತ್ತ ಹರಿಯುವಂತೆ ಮಾಡಿದರು.
ಕಾರಂಜಿಕೆರೆಯಾಗಿದ್ದು ಯಾವಾಗ ಗೊತ್ತಾ?
ಬಹೃತ್ ಕೆರೆಯ ನಡುವೆ ಕೃತಕ ದ್ವೀಪಗಳನ್ನು ನಿರ್ಮಿಸಿ ಅಲ್ಲಿ ಮರ ಬೆಳೆಸಿ ವಲಸೆ ಬರುವ ಹಕ್ಕಿಗಳಿಗೆ ನೆಲೆ ಕಲ್ಪಿಸಿಕೊಟ್ಟರು. ಕೆರೆಯ ನೀರಲ್ಲಿ ಸವಾರಿ ಮಾಡಲು ಬರುವವರಿಗೆ ದೋಣಿಗಳ ವ್ಯವಸ್ಥೆ ಮಾಡಿದರು. ಕೆರೆಯ ದಂಡೆಯಲ್ಲಿ ಸುಂದರ ಮರಗಿಡಗಳನ್ನು ಬೆಳೆಸಿದರು. ಓಡಾಡಲು ಅನುಕೂಲವಾಗುವಂತೆ ಕಾಲುದಾರಿಗಳನ್ನು ನಿರ್ಮಿಸಿದರು. ಕೆರೆಯ ಸುತ್ತಲೂ ಏರಿ ನಿರ್ಮಿಸಿ ಸುಂದರವಾದ ಆಕರ್ಷಣೀಯವಾದ ಪ್ರವೇಶ ದ್ವಾರವನ್ನು ನಿರ್ಮಿಸಲಾಯಿತು. ಹೀಗೆ ನವೀಕರಣಗೊಂಡ ಕೆರೆಗೆ 2004 ಜನವರಿ 25 ರಂದು ಕಾರಂಜಿ ಪ್ರಕೃತಿ ಉದ್ಯಾನವನ ಎಂಬ ಹೆಸರನ್ನಿಟ್ಟು ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಯಿತು.
ಇವತ್ತು ಕಾರಂಜಿಕೆರೆಯಲ್ಲಿ ಮೀನು, ಮೊಸಳೆಯಂತಹ ಜಲಚರಗಳು, ಬ್ಲೂಜೆ, ಪೇಂಟೆಡ್ ಸ್ಟಾರ್ಕ್, ವೈಟ್ ಐಬೀಸ್, ಕಾಜಾಣಗಳಂತಹ ಬಾನಾಡಿಗಳು ಬೀಡು ಬಿಟ್ಟಿವೆ. ಸುಮಾರು ಎಪ್ಪತ್ತು ಪ್ರಭೇದದ ಚಿಟ್ಟೆಗಳು ವಾಸ್ತವ್ಯ ಹೂಡಿವೆ. ಔಷಧಿವನ, ಶ್ರೀಗಂಧದ ಮರಗಳು ಇಲ್ಲಿವೆ. ಪಕ್ಷಿಗಳ ಹಾರಾಟವನ್ನು ವೀಕ್ಷಿಸಲೆಂದೇ 'ವಾಚ್ ಟವರ್'ನ್ನು ನಿರ್ಮಿಸಲಾಗಿದೆ. ಇತ್ತೀಚೆಗೆ ಮೃಗಾಲಯದ ಜತೆಗೆ ಕಾರಂಜಿಕೆರೆಯನ್ನು ವೀಕ್ಷಿಸಲು ಅವಕಾಶ ನೀಡಿದ ಪರಿಣಾಮ ಭೇಟಿ ನೀಡುವವರು ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ ಪ್ರೇಮಿಗಳ ಸಂಖ್ಯೆ ಹೆಚ್ಚಿರುವುದು ವಿಶೇಷವಾಗಿದೆ.












Click it and Unblock the Notifications