ಪ್ಲಾಸ್ಟಿಕ್ ಕವರ್‌ನಿಂದ ಟೈಲ್ಸ್ ತಯಾರಿಕೆ: ಮೈಸೂರು ಪಾಲಿನಿಂದ ವಿನೂತನ ಪ್ರಯೋಗ
ಮೈಸೂರು, ಡಿಸೆಂಬರ್ 1: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್ ಕವರ್ ನಿಂದ ಟೈಲ್ಸ್ ಮಾಡಲಾಗುತ್ತಿದ್ದು, ನಿತ್ಯ 2 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಇಂಟರ್ ಲಾಕಿಂಗ್ ಮಾದರಿ ಟೈಲ್ಸ್ ಆಗಿ ಪರಿವರ್ತಿಸುತ್ತಿದೆ.
ನಗರಪಾಲಿಕೆಯ ನಾನಾ ಕಾಮಗಾರಿ ಹಾಗೂ ಫುಟ್ ಪಾತ್ ಗೆ ನೆಲಹಾಸು ಹಾಕಲು ಈ ಟೈಲ್ಸ್ ಅನ್ನೇ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಇದರಿಂದ ಪ್ರೇರಣೆಗೊಂಡ ಚೆನ್ನೈನ ಅನೇಕ ಕಂಪನಿಗಳು ಈ ಟೈಲ್ಸ್ ಕೊಂಡೊಯ್ಯುತ್ತಿವೆ. ಆಶ್ಚರ್ಯವೆಂದರೆ 150 ಡಿಗ್ರಿವರೆಗೆ ಉಷ್ಣಾಂಶವನ್ನು ಈ ಟೈಲ್ಸ್ ತಡೆದು ಕೊಳ್ಳುತ್ತವೆ. ಬೆಂಕಿ ಬಿದ್ದರೂ ಟೈಲ್ಸ್ ಹೊತ್ತಿಕೊಳ್ಳುವುದಿಲ್ಲ.

ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್ ಕವರ್‌ಗಳಿಗೆ ಮೈಸೂರು ಮಹಾನಗರಪಾಲಿಕೆ 'ಟೈಲ್ಸ್' ರೂಪ ನೀಡಿದೆ. ಇಂದು ಜಗತ್ತನ್ನೇ ಪ್ಲಾಸ್ಟಿಕ್ ಸಮಸ್ಯೆ ಕಾಡುತ್ತಿದೆ. ಹಾಲಿನ ಕವರ್, ಶಾಂಪೋ, ಪೆನಾಯಿಲ್ ಬಾಟಲ್‌ಗಳನ್ನು ಹೇಗೋ ಮರು ಮಾಡಬಹುದು. ನಿತ್ಯ ಪೌರಕಾರ್ಮಿಕರು ಇದನ್ನು ಪ್ರತ್ಯೇಕಗೊಳಿಸುತ್ತಾರೆ. ಆದರೆ, ತಿಂಡಿ ತಿನಿಸು ಕವರ್ಗಳು, ಬಳಸಿ ಬಿಸಾಡಿದ ಖಾಲಿ ಪೊಟ್ಟಣಗಳನ್ನು ಮರು ಬಳಕೆ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಜಾಗೃತ್ ಟೆಕ್ ಪ್ರೈ.ಲಿ. ಕಂಪನಿ ಜತೆ ಒಡಂಬಡಿಕೆ ಮಾಡಿಕೊಂಡಿದೆ. ಆರು ತಿಂಗಳಿಂದ 350 ಟನ್ ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿರುವ ಕಂಪನಿ 100 ಟನ್ ನಷ್ಟು ತ್ಯಾಜ್ಯವನ್ನು 'ಟೈಲ್ಸ್' ಆಗಿ ಪರಿವರ್ತಿಸಿದೆ.
"ನಗರಪಾಲಿಕೆ ಇಲ್ಲಿಯವರೆಗೂ 350ಕ್ಕೂ ಹೆಚ್ಚು ಟನ್ ಪ್ಲಾಸ್ಟಿಕ್ ಕಸವನ್ನು ಜಾಗೃತ್ ಟೆಕ್ ಕಂಪನಿಗೆ ನೀಡಿದ್ದು, 100ಕ್ಕೂ ಹೆಚ್ಚು ಟನ್ ತ್ಯಾಜ್ಯದಿಂದ ಟೈಲ್ಸ್ ಉತ್ಪಾದನೆ ಮಾಡಲಾಗಿದೆ. ಇದರಿಂದ ಇಂಗಾಲದ ಹೊರೆಯನ್ನೂ ತಗ್ಗಿಸಿದ್ದೇವೆ. ಪರಿಸರ ಸಂರಕ್ಷಣೆಗೂ ಇದು ಅನುಕೂಲಕರವಾಗಿದೆ" ಎಂದು ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ತಿಳಿಸಿದ್ದಾರೆ.

ಟೈಲ್ಸ್ ಮಾಡುವುದು ಹೇಗೆ?
ಜಾಗೃತ್ ಟೆಕ್ ಗೆ ವಿದ್ಯಾರಣ್ಯಪುರಂನ ಸೂಯೇಜ್ ಫಾರಂ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಉಚಿತವಾಗಿ ಪಾಲಿಕೆ ಜಾಗ ನೀಡಿದೆ. ಅಲ್ಲೇ ಪೌರಕಾರ್ಮಿಕರು ಸಂಗ್ರಹಿಸಿ ತಂದಂತಹ ಪ್ಲಾಸ್ಟಿಕ್ ಕವರ್‌ಗಳಿಗೆ ಅಂಟಿದ ಕಸವನ್ನು ಮೊದಲು ವಿಂಗಡನೆ ಮಾಡಲಾಗುತ್ತದೆ. ಇದಕ್ಕೆ ಪ್ರತ್ಯೇಕ ಯಂತ್ರ ಇದೆ. ನಂತರ ಸಣ್ಣದಾಗಿ ಕತ್ತರಿಸಿ ಮತ್ತೊಂದು ಯಂತ್ರದಲ್ಲಿ ಸೆಮಿ ಸಾಲಿಡ್ ಆಗಿ ಕಂಪ್ರೆಸ್ ಮಾಡಲಾಗುತ್ತದೆ. ಬಳಿಕ ಎರಡೂವರೆ ಕೆಜಿ ತೂಕದ ತ್ಯಾಜ್ಯ ಎರಡು ಕೆಜಿ ಟೈಲ್ಸ್ ಆಗಿ ಪರಿವರ್ತನೆಯಾಗುತ್ತದೆ.












Click it and Unblock the Notifications