Nagarahole: ನಾಗರಹೊಳೆ ವ್ಯಾಪ್ತಿಯ ಹನಗೋಡು ಜನರ ನಿದ್ದೆಗೆಡಿಸಿದ ಹುಲಿರಾಯ!
ಮೈಸೂರು, ಏಪ್ರಿಲ್ 08: ಬರಗಾಲದ ಸಂಕಷ್ಟದಿಂದಾಗಿ ಜೀವನ ಸಾಗಿಸುವುದು ಹೇಗೆಂದು ರೈತರು ತಲೆಮೇಲೆ ಕೈಹೊತ್ತು ಕುಳಿತಿರುವಾಗಲೇ ಕಾಡಿನಿಂದ ಹುಲಿಯೊಂದು ನಾಡಿನತ್ತ ಬಂದಿದ್ದು, ರೈತರ ಜಮೀನಿನಲ್ಲಿ ಅಡ್ಡಾಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ವ್ಯಾಪ್ತಿಯಲ್ಲಿ ನಡೆದಿದ್ದು, ರೈತರು ಜಮೀನಿಗೆ ಹೋಗಲು ಹಿಂದೇಟು ಹಾಕಿದರೆ, ಗ್ರಾಮಸ್ಥರು ಮನೆಯಿಂದ ಹೊರಹೋಗಲು ಭಯಪಡುವಂತಾಗಿದೆ.
ನಾಗರಹೊಳೆ ಅಭಯಾರಣ್ಯ ಪ್ರದೇಶಕ್ಕೆ ಹತ್ತಿರದಲ್ಲಿ ಹನಗೋಡು ಸೇರಿದಂತೆ, ಕಾಮಗೌಡನಹಳ್ಳಿ, ಬಿ.ಆರ್.ಕಾವಲ್, ಅಬ್ಬೂರು, ಸಿಂಡೇನಹಳ್ಳಿ, ನೇಗತ್ತೂರು, ಶೆಟ್ಟಳ್ಳಿ, ದಾಸನಪುರ, ಹಿಂಡಗುಡ್ಲು, ಚಿಕ್ಕಹೆಜ್ಜೂರು, ಕಾಳಬೂಚನಹಳ್ಳಿ, ಕಚುವಿನಹಳ್ಳಿ, ಮುತ್ತುರಾಯನ ಹೊಸಳ್ಳಿ ಬರುತ್ತಿದ್ದು, ಈ ವ್ಯಾಪ್ತಿಯಲ್ಲಿ ಹುಲಿ, ಚಿರತೆ ಮತ್ತು ಕಾಡಾನೆ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ, ರೈತರಿಗೆ ಉಪದ್ರವ ನೀಡುವುದು ಹೊಸತೇನಲ್ಲ.

ಆದರೆ ಕಳೆದ ಎರಡು ವರ್ಷಗಳಿಂದ ಈ ಭಾಗದಲ್ಲಿ ಒಂದಲ್ಲ ಒಂದು ರೀತಿಯ ಕಾಡು ಪ್ರಾಣಿಗಳು ಕಾಟ ನೀಡುತ್ತಲೇ ಇದ್ದು, ಜನಜಾನುವಾರುಗಳನ್ನು ಬಲಿಪಡೆಯುತ್ತಲೇ ಇವೆ. ಸದ್ಯ ಯಾವುದೇ ಪ್ರಾಣಿಗಳ ಹಾವಳಿಯಿಲ್ಲ ನೆಮ್ಮದಿಯಾಗಿರೋಣ ಎಂದುಕೊಳ್ಳುವಾಗಲೇ ಇದೀಗ ಹುಲಿಯ ಹೆಜ್ಜೆ ಹನಗೋಡಿನ ರೈತರೊಬ್ಬರ ಜಮೀನಿನಲ್ಲಿ ಕಾಣಿಸಿರುವುದು ಭಯ ಮತ್ತು ಆತಂಕಕ್ಕೆ ಕಾರಣವಾಗಿದೆ.
ಹುಲಿ ಹೆಜ್ಜೆ ನೋಡಿ ಬೆಚ್ಚಿದ ರೈತರು
ಈ ವ್ಯಾಪ್ತಿಗೆ ಹನಗೋಡು ಹೋಬಳಿ ಕೇಂದ್ರವಾಗಿದೆ. ಗ್ರಾಮದ ಮೂಲಕವೇ ಲಕ್ಷ್ಮಣತೀರ್ಥ ನದಿ ಹಾದು ಹೋಗಿದೆಯಲ್ಲದೆ, ಈ ವ್ಯಾಪ್ತಿಯಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ. ಈ ನದಿಯ ಏರಿ ಕೆಳ ಪಾತ್ರದ ನಿವಾಸಿ ಸುಶೀಲಮ್ಮರಿಗೆ ಸೇರಿದ ತೋಟದ ಜಮೀನಿನಲ್ಲಿ ಕಳೆದ ಎರಡು ದಿನಗಳಿಂದ ಹುಲಿ ಓಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿದೆ. ಕಳೆದ ಫೆ.23ರಂದು ಪಕ್ಕದ ಎಚ್.ಆರ್.ರಮೇಶ್ರಿಗೆ ಸೇರಿದ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿತ್ತಲ್ಲದೆ, ಈ ಹುಲಿಯು ಕಾಡು ಹಂದಿಯೊಂದಿಗೆ ಕಾದಾಡಿ ಬೇಟೆ ಮಾಡಿದ್ದ ಕುರುಹು ಕೂಡ ಜಮೀನಿನಲ್ಲಿ ಪತ್ತೆಯಾಗಿತ್ತು. ಅವತ್ತು ಗ್ರಾಮಸ್ಥರು ಭಯಭೀತರಾಗಿದ್ದರು.
ದಿನ ಕಳೆದಂತೆ ಈ ಭಯ ಮಾಯವಾಗಿತ್ತು. ಇನೇನು ಎಲ್ಲವೂ ಸರಿಹೋಯಿತು ಎನ್ನುವಾಗಲೇ ಈಗ ಹುಲಿಯ ಹೆಜ್ಜೆ ಪತ್ತೆಯಾಗಿದೆ. ಹುಲಿಯ ಹೆಜ್ಜೆ ಕಾಣಿಸಿರುವುದರಿಂದ ಹುಲಿ ಈ ವ್ಯಾಪ್ತಿಯಲ್ಲಿಯೇ ಇರಬಹುದು ಎಂಬುದು ಜನರ ಭಯಕ್ಕೆ ಕಾರಣವಾಗಿದೆ. ಈ ವ್ಯಾಪ್ತಿಯಲ್ಲಿ ಆಗಾಗ್ಗೆ ವನ್ಯಪ್ರಾಣಿಗಳು ಕಾಣಿಸಿಕೊಂಡು ರೈತರ ಜಮೀನಿಗೆ ನುಗ್ಗುವುದೇಕೆ? ಎಂಬುದನ್ನು ನೋಡಿದ್ದೇ ಆದರೆ ಈ ಪ್ರದೇಶ ಕಾಡು ಪ್ರಾಣಿಗಳಿಗೆ ಆವಾಸಸ್ಥಾನವಾಗಿದೆ.

ಕುರುಚಲು ಕಾಡು ಹುಲಿಗೆ ಆವಾಸಸ್ಥಾನ
ಇದು ಹೇಗೆಂದರೆ? ಲಕ್ಷ್ಮಣ ತೀರ್ಥ ನದಿಗೆ ಇಲ್ಲಿ ಅಣೆಕಟ್ಟೆ ಕಟ್ಟಲಾಗಿದ್ದು, ಈ ಕಟ್ಟೆಯ ಏರಿಯ ಸುಮಾರು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸಾಕಷ್ಟು ಪೊದೆಗಳಿವೆ. ಅಲ್ಲದೆ ಸಾಕಷ್ಟು ಗಿಡ-ಗಂಟಿಗಳು ಬೆಳೆದಿದ್ದು, ಕುರುಚಲು ಕಾಡಿನಿಂದ ಆವೃತವಾಗಿದೆ. ಈ ಪ್ರದೇಶ ಹುಲಿ, ಚಿರತೆ, ಕಾಡು ಹಂದಿಗಳು ವಾಸ್ತವ್ಯ ಹೂಡಲು ಪ್ರಶಕ್ತ ಸ್ಥಳವಾಗಿದೆ. ಈ ಅಣೆಕಟ್ಟೆಯ ಏರಿಯು ಹಾರಂಗಿ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿದ್ದು, ಇಲ್ಲಿರುವ ಕುರುಚಲು ಕಾಡನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ. ಪರಿಣಾಮ ಕಾಡು ಪ್ರಾಣಿಗಳು ಇಲ್ಲಿಯೇ ವಾಸ್ತವ್ಯ ಹೂಡುತ್ತಿವೆ.
ಹಾಗೆನೋಡಿದರೆ ಕಳೆದ ಎರಡು ವರ್ಷಗಳಿಂದ ಹನಗೋಡು, ಕಾಮಗೌಡನಹಳ್ಳಿ, ಬಿ.ಆರ್.ಕಾವಲ್, ಅಬ್ಬೂರು, ಸಿಂಡೇನಹಳ್ಳಿ, ನೇಗತ್ತೂರು, ಶೆಟ್ಟಳ್ಳಿ, ದಾಸನಪುರ, ಹಿಂಡಗುಡ್ಲು, ಚಿಕ್ಕಹೆಜ್ಜೂರು, ಕಾಳಬೂಚನಹಳ್ಳಿ, ಕಚುವಿನಹಳ್ಳಿ, ಮುತ್ತುರಾಯನಹೊಸಳ್ಳಿ ಭಾಗದ ಸುಮಾರು 15ಕಿ.ಮೀ. ಸುತ್ತ ಮುತ್ತಲಲ್ಲಿ ಹುಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದೆ. ಅಲ್ಲದೆ ಹತ್ತಾರು ಜಾನುವಾರುಗಳನ್ನು ತಿಂದು ಹಾಕಿದೆ. ಕಳೆದ ಆರು ತಿಂಗಳ ಹಿಂದೆ ಒಂದೇ ಬಾರಿಗೆ ಎರಡು ಹಸುಗಳ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು.
ಎಲ್ಲೂ ಪತ್ತೆಯಾಗದ ಹುಲಿಯ ಜಾಡು
ಘಟನೆ ಬಳಿಕ ಹುಲಿಯನ್ನು ಸೆರೆ ಹಿಡಿಯಲೇ ಬೇಕೆಂದು ಪಣತೊಟ್ಟ ಅರಣ್ಯ ಇಲಾಖೆ ಶೆಟ್ಟಳ್ಳಿ ಅರಣ್ಯ ಪ್ರದೇಶದಲ್ಲಿ ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಿದ್ದರೂ ಹುಲಿಯ ಜಾಡು ಪತ್ತೆಯಾಲಿಲ್ಲ. ಆದರೆ ಆಗಾಗ್ಗೆ ಅಲ್ಲಲ್ಲಿ ಕಾಣಿಸಿಕೊಂಡು, ಜಾನುವಾರುಗಳನ್ನು ಬಲಿ ಪಡೆದು ತನ್ನ ಇರುವಿಕೆಯನ್ನು ಸಾಬೀತುಪಡಿಸುತ್ತಿರುವುದರಿಂದ ಗ್ರಾಮಸ್ಥರು ಜಮೀನಿಗೆ ತೆರಳಲು ಹೆದರುವಂತಾಗಿದೆ.
ಈ ಹುಲಿ ಯಾವಾಗ ಎಲ್ಲಿ ಇರುತ್ತೋ ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ ಜಮೀನಿಗೆ ಹೋಗಲು ಭಯವಾಗುತ್ತಿದೆ. ಅರಣ್ಯ ಇಲಾಖೆ ಹೇಗಾದರೂ ಮಾಡಿ ಜನರ ಬಲಿ ಪಡೆಯುವ ಮುನ್ನ ಹುಲಿಯನ್ನು ಸೆರೆ ಹಿಡಿಯಿರಿ ಎಂದು ಗ್ರಾಮಸ್ಥರು ಒತ್ತಾಯ ಮಾಡುತ್ತಾ ಬಂದಿದ್ದು, ಇದು ಮುಂದುವರೆಯುತ್ತಲೇ ಇದೆ. ಹುಲಿ ಮಾತ್ರ ಯಾರ ಕಣ್ಣಿಗೂ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದೆ.
ಹುಲಿ ಸೆರೆ ಸಿಗುವ ತನಕ್ಕ ನೆಮ್ಮದಿಯಿಲ್ಲ
ಸದ್ಯ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಸೀಮಾ, ವಲಯ ಅರಣ್ಯಾಕಾರಿ ನಂದಕುಮಾರ್ ಅವರು ಹುಲಿ ಹೆಜ್ಜೆ ಕಾಣಿಸಿಕೊಂಡಿರುವ ಸ್ಥಳದ ಸುತ್ತ ಕಾರ್ಯಾಚರಣೆ ನಡೆಸುವುದಲ್ಲದೆ, ಕ್ಯಾಮರಾ ಅಳವಡಿಸಿ ಹುಲಿ ಪತ್ತೆಗೆ ಕ್ರಮವಹಿಸಲಾಗುವುದೆಂಬ ಭರವಸೆ ನೀಡಿದ್ದಾರೆ. ಇನ್ನೊಂದೆಡೆ ಹುಲಿ ಕಾಣಿಸಿಕೊಂಡಿರುವ ಸ್ಥಳಕ್ಕೆ ಡಿ.ಆರ್.ಎಫ್.ಓ.ಗಳಾದ ಮಲ್ಲಿಕಾರ್ಜುನ್, ಚಂದ್ರೇಶ್ ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿ ಭೇಟಿ ನೀಡಿ ಸ್ಥಳದ ಸುತ್ತಮುತ್ತ, ನದಿ ಏರಿಯ ಪೊದೆಗಳ ಬಳಿ ರಾತ್ರಿ ವೇಳೆ ಪಟಾಕಿ ಸಿಡಿಸುತ್ತಿದ್ದು, ಸೈರನ್ ಮೊಳಗಿಸಿ ಹುಲಿಯನ್ನು ಈ ವ್ಯಾಪ್ತಿಯಿಂದ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಅರಣ್ಯ ಇಲಾಖೆ ಏನೇ ಪ್ರಯತ್ನ ಮಾಡಿದರೂ ಹುಲಿ ಸೆರೆ ಸಿಗುವ ತನಕ ಈ ವ್ಯಾಪ್ತಿಯ ಜನಕ್ಕೆ ನೆಮ್ಮದಿ ಇಲ್ಲದಂತಾಗಿದೆ. ಇನ್ನು ಮುಂದೆ ಬೇಸಿಗೆಯ ದಿನಗಳಾಗಿರುವುದರಿಂದ ಅರಣ್ಯದಲ್ಲಿ ನೀರು ಮತ್ತು ಮೇವಿಗೆ ಕೊರತೆಯಾಗುವ ಕಾರಣ ಆಹಾರ ಅರಸಿಕೊಂಡು ನಾಡಿಗೆ ಬರುವ ಸಾಧ್ಯತೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಇತ್ತ ಎಚ್ಚರ ವಹಿಸುವುದು ಬಹುಮುಖ್ಯವಾಗಿದೆ.












Click it and Unblock the Notifications