Breaking: ಮೈಸೂರಿನ ಒಡನಾಡಿ ಸಿಬ್ಬಂದಿಗೆ ಜೀವ ಬೆದರಿಕೆ
ಮೈಸೂರು, ಸೆ.04: ಮುರುಘಾ ಮಠಾಧೀಶ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲು ಕಾರಣವಾಗಿರುವುದು ಮೈಸೂರಿನ ಒಡನಾಡಿ ಸಂಸ್ಥೆಯ ಸಿಬ್ಬಂದಿಗೆ ಜೀವ ಬೆದರಿಕೆ ಕರೆ ಬಂದಿದೆ.
ಮೈಸೂರಿನ ಎನ್‌ಜಿಒ ಒಡನಾಡಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ದಾಖಲಿಸಲು ಬಾಲಕಿಯರಿಗೆ ಬೆಂಬಲ ನೀಡಿದ್ದು, ಇದು ಮುರುಘಾ ಶರಣರ ಬಂಧನಕ್ಕೆ ಕಾರಣವಾಗಿದೆ.
ಈ ಹಿನ್ನೆಲೆ ಒಡನಾಡಿ ಸಂಸ್ಥೆಯ ಸ್ಟಾನ್ಲಿ, ಪರಶು ಹಾಗೂ ಸಿಬ್ಬಂದಿಗೆ ಬೆದರಿಕೆ ಕರೆಗಳು ಬಂದಿದೆ. ಬೆದರಿಕೆ ಕರೆಗಳು ಬರುತ್ತಿರುವ ಕಾರಣ ಸಂಸ್ಥೆಯು ಪೊಲೀಸ್ ರಕ್ಷಣೆ ಕೋರಿದೆ.

ಪ್ರಕರಣದಿಂದ ಹಿಂದೆ ಸರಿಯುವಂತೆ ಬೆದರಿಸಿದ್ದು, ಹಿಂದೆ ಸರಿಯದಿದ್ದರೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರಿಗೆ ಪತ್ರ ಬರೆದಿದ್ದು, ಭದ್ರತೆ, ವೈಯಕ್ತಿಕ ರಕ್ಷಣೆ ಕೋರಿದೆ.
ಪತ್ರಲ್ಲಿರುವುದೇನು...?; "ತಮಗೆ ತಿಳಿದಿರುವಂತೆ ಚಿತ್ರದುರ್ಗದ ಮುರುಘಾ ಮಠದ ಡಾ. ಶ್ರೀ.ಶಿವಮೂರ್ತಿ ಮುರುಘಾ ಶರಣರ ವಿರುದ್ದ ಅಪಾಪ್ತ ಹೆಣ್ಣು ಮಕ್ಕಳು ನೀಡಿದ ಲೈಂಗಿಕ ಕಿರುಕುಳದ ದೂರಿನ ಮೇರೆಗೆ ಪೋಕ್ಸೋ ಪ್ರಕರಣವೂ ದಿನಾಂಕ 26/08/2022 ರಂದು ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾದ ಮುರುಘಾ ಶ್ರೀಗಳನ್ನು ದಿನಾಂಕ 2/9/2022 ರಂದು ಚಿತ್ರದುರ್ಗದ ಪೋಲಿಸರಿಂದ ಬಂಧಿಸಲಾಗಿರುತ್ತದೆ.
ಈ ಹಿನ್ನಲೆಯಲ್ಲಿ ಮುರುಘಾ ಶ್ರೀಗಳ ಅನುಯಾಯಿಗಳು ಮತ್ತು ಮಠದ ಪರವಾಗಿರುವ ಕೆಲವು ಹಿತಾಸಕ್ತಿಗಳು ಒಡನಾಡಿ ಸಂಸ್ಥೆಯ ಮುಖ್ಯಸ್ಥರಾದ ಸ್ಟಾನ್ಲಿ ಕೆ. ವಿ. ಹಾಗೂ ಪರಶುರಾಮ್ ಎಮ್. ಎಲ್. ರವರಿಗೆ ಪ್ರಾಣ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ. ಹಲವರು ಕರೆಗಳ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸುತ್ತಿರುವ ಹಿನ್ನಲೆಯಲ್ಲಿ ಇವರಿಗೆ ವೈಯಕ್ತಿಕವಾಗಿಯೂ ಹಾಗೂ ಕುಟುಂಬಗಳಿಗೂ ರಕ್ಷಣೆಯನ್ನು ಒದಗಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇವೆ"

"ಅಲ್ಲದೇ ಒಡನಾಡಿಯ ಮಡಿಲು ಸಂಸ್ಥೆಯೂ ಮಹಿಳಾ ಮತ್ತು ಮಕ್ಕಳ ಪುನರ್ವಸತಿ ಕೇಂದ್ರವಾಗಿದ್ದು, ಹೆಣ್ಣು ಮಕ್ಕಳೇ ಇರುವ ಸಂಸ್ಥೆಯಾದರಿಂದ ಸಂಸ್ಥೆಯ ಎಲ್ಲಾ ಮಕ್ಕಳಿಗೂ, ಸಿಬ್ಬಂದಿಗೂ ರಕ್ಷಣೆಯ ಅವಶ್ಯಕತೆ ಇರುತ್ತದೆ. ಆದ ಕಾರಣ ರಕ್ಷಣೆಯ ವ್ಯವಸ್ಥೆಯನ್ನು ಹಾಗೂ ಗನ್ ಮ್ಯಾನ್ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ" ಎಂದು ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರಿಗೆ ಪತ್ರ ಬರೆಯಲಾಗಿದೆ.
ಒಡನಾಡಿ ಸೇವಾ ಸಂಸ್ಥೆ ಒಂದು ಸಾಮಾಜಿಕ, ಸರ್ಕಾರೇತರ ಸಂಸ್ಥೆ. ಮೈಸೂರಿನ ಇಲವಾಲ ಹೋಬಳಿಯ ಬೋಗಾದಿ ರಸ್ತೆಯಲ್ಲಿ ಈ ಸಂಸ್ಥೆ ಇದೆ. ಲೈಂಗಿಕವಾಗಿ ಶೋಷಿಸಲ್ಪಟ್ಟ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸುವುದು, ಅವರಿಗೆ ಪುನರ್ವಸತಿ ಕಲ್ಪಿಸುವುದು, ಮಹಿಳೆಯರ ಸಬಲೀಕರಣ, ಇತ್ಯಾದಿ ಸಮಾಜಮುಖಿ ಕಾರ್ಯಗಳನ್ನು ಈ ಸಂಸ್ಥೆ ಮಾಡುತ್ತಿದೆ. ಈ ಸಂಸ್ಥೆಯನ್ನು 1989ರಲ್ಲಿ ಕೆ. ವಿ. ಸ್ಟಾನ್ಲಿ ಮತ್ತು ಎಂ.ಎಲ್. ಪರಶುರಾಮ ಪ್ರಾರಂಭಿಸಿದರು. ಆದರೆ 1992ರಲ್ಲಿ ಅಧಿಕೃತ ಸಂಸ್ಥೆಯಾಗಿ ನೋಂದಾಯಿಸಲಾಯಿತು. ಒಡನಾಡಿಯ ಕಾರ್ಯಾಚರಣೆಗಳು ದಕ್ಷಿಣ ಭಾರತದೆಲ್ಲೆಡೆ ಹಬ್ಬಿದೆ. ಅವರ ಪುನರ್ವಸತಿ ಕೇಂದ್ರ ಕರ್ನಾಟಕ ರಾಜ್ಯದ ಮೈಸೂರು ನಗರದಲ್ಲಿದೆ.












Click it and Unblock the Notifications