By Election: ನಿಖಿಲ್ ಕುಮಾರಸ್ವಾಮಿ ಸೋಲಿನ ಬಗ್ಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅಚ್ಚರಿ ಹೇಳಿಕೆ
ಕರ್ನಾಟಕ ಉಪಚುನಾವಣೆಯಲ್ಲಿ ಎನ್‌ಡಿಎ ಹೀನಾಯ ಸೋಲುಕಂಡಿದ್ದು ಮುಖಭಂಗ ಅನುಭವಿಸಿದೆ. ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೊಂದಿದ್ದರೂ, ಜೆಡಿಎಸ್ ಯುವರಾಜನನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫಲವಾಗಿದೆ. ನಿಖಿಲ್ ಕುಮಾರಸ್ವಾಮಿ ಹ್ಯಾಟ್ರಿಕ್ ಸೋಲು ಪಕ್ಷಕ್ಕೆ ಆಘಾತ ನೀಡಿದೆ. ಈ ಬಾರಿ ಬಿಜೆಪಿ ಜೊತೆ ಕೈಜೋಡಿಸಿದ್ದರೂ ಅಭಿಮನ್ಯು ಸೋಲಿನ ಚಕ್ರವ್ಯೂಹದಿಂದ ಹೊರಬರಲು ಆಗಲಿಲ್ಲ. ನಿಖಿಲ್ ಸೋಲಿನ ಬಗ್ಗೆ ಜೆಡಿಎಸ್ ಪಕ್ಷದ ಹಿರಿಯ ನಾಯಕ, ಶಾಸಕ ಜಿ.ಟಿ. ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ನಿಖಿಲ್ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಚನ್ನಪಟ್ಟಣ ಚುನಾವಣೆ ಪ್ರಚಾರಕ್ಕೆ ಅಭ್ಯರ್ಥಿಯ ತಾಯಿ, ದೊಡ್ಡಗೌಡರು ಹಾಗೂ ಯಾರೂ ನನ್ನನ್ನು ಕರೆಯಲಿಲ್ಲ. ಅವರಿಗೆ ನನ್ನ ಅವಶ್ಯಕತೆ ಇದ್ದಂತೆ ಕಾಣುತ್ತಿಲ್ಲ ಬೇಸರ ವ್ಯಕ್ತಪಡಿಸಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್ ಸೋಲಬಾರದಿತ್ತು. ಮೂರನೇ ಸೋಲಿನಿಂದ ಅವರಿಗೆ ಸಹಜವಾಗಿಯೇ ಬೇಸರವಾಗಿರುತ್ತದೆ. ನಿಖಿಲ್ ಸೋಲಿಗೆ ಎದೆಗುಂದದೇ ಧೈರ್ಯವಾಗಿ ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ನಿಖಿಲ್ ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿತ್ತು. ಆದರೆ, ಫಲಿತಾಂಶ ನಾವಂದುಕೊಂಡಂತೆ ಬಂದಿಲ್ಲ, ಮೂರು ಬಾರಿ ಸೋತವರು ಗೆದ್ದು ಮಂತ್ರಿಯಾಗಿ ಉನ್ನತ ಸ್ಥಾನಕ್ಕೆ ಹೋಗಿದ್ದಾರೆ. ನಿಖಿಲ್ ಈ ಸೋಲಿನಿಂದ ಹತಾಶೆಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಹೆಚ್‌ಡಿಕೆ ಜೊತೆ ಮುನಿಸು ಇಲ್ಲ
ನನಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡುವೆ ಯಾವುದೇ ಮುನಿಸು ಇಲ್ಲ. ಆದರೂ ಅವರು ಅವರ ಅದೇ ರೀತಿ ಬಿಂಬಿಸುತ್ತಿದ್ದಾರೆ. ನನಗೆ ಯಾವತ್ತಿಗೂ ಸಿದ್ದರಾಮಯ್ಯ ಖುದ್ದಾಗಿ ಕಾಂಗ್ರೆಸ್‌ಗೆ ಬಾ ಎಂದು ಕರೆದಿಲ್ಲ. ದಸರಾದಲ್ಲಿ ಅವರ ಜತೆ ವೇದಿಕೆ ಹಂಚಿಕೊಂಡಿದ್ದು ಬಿಟ್ಟರೆ ಮತ್ತೆ ನಾನು ಅವರನ್ನು ಭೇಟಿ ಮಾಡಿಲ್ಲ. ಅವರು ಇವತ್ತಲ್ಲ ಯಾವತ್ತಿಗೂ ಪಕ್ಷಕ್ಕೆ ಬಾ ಎಂದು ವೈಯಕ್ತಿಕವಾಗಿ ಹೇಳಿಲ್ಲ ಎಂದರು.
ಜಿ.ಟಿ.ದೇವೇಗೌಡನಿಗೆ ವಯಸ್ಸಾಗಿದೆ, ರಾಜಕೀಯದಿಂದ ನಿವೃತ್ತಿಯಾಗಲಿ. ನಮಗೆ ಅವರ ಮಗ ಸಾಕು ಎಂಬ ಆದೇಶವನ್ನು ಜೆಡಿಎಸ್ ವರಿಷ್ಠರು ನೀಡಿದಂತಿದೆ. ನನಗೆ ರಾಜಕೀಯದಿಂದ ನಿವೃತ್ತಿ ಕೊಡಿಸಲು ಅವರು ತಯಾರಿದ್ದಾರೆ. ಕಾಂಗ್ರೆಸ್ ಹೌಸ್‌ಫುಲ್ ಆಗಿರುವುದರಿಂದ ನಾನು ಜೆಡಿಎಸ್-ಬಿಜೆಪಿ ಜತೆಯಲ್ಲಿ ಇರುತ್ತೇನೆ. ಅಲ್ಲಿಗೆ ಜಿಟಿಡಿಗೆ ಸ್ಥಾನ ಇಲ್ಲದಂತಾಗುತ್ತದೆ. ಹೀಗಾಗಿ ನಿವೃತ್ತಿ ತೆಗೆದುಕೊಳ್ಳಲಿ ಎಂಬ ಭಾವನೆಯಲ್ಲಿ ಜೆಡಿಎಸ್ ವರಿಷ್ಠರು ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸಾರ್ವತ್ರಿಕ ಚುನಾವಣೆಗೂ ಮುನ್ನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿಯ ಆಪ್ತ ಕಾರ್ಯದರ್ಶಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಆದರೆ ನಾನು ಕಾಂಗ್ರೆಸ್‌ಗೆ ಹೋಗದೆ ಜೆಡಿಎಸ್‌ನಲ್ಲೇ ಉಳಿದುಕೊಂಡೆ ಎಂದಿದ್ದಾರೆ.












Click it and Unblock the Notifications